ಶನಿವಾರ, ಮೇ 8, 2021
26 °C

`ಅಂಬರೀಷ್ ನನಗೆ ಆದರ್ಶ'

-ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

`ಅಂಬರೀಷ್ ನನಗೆ ಆದರ್ಶ'

ಖುಷಿ, ವಿಷಾದ ಎರಡೂ ಬೆರೆತ ನಗುವಿನೊಂದಿಗೆ ಮಾತಿಗಿಳಿದರು ನಟ ಕೋಮಲ್. ಹಲವು ಅಡೆತಡೆಗಳನ್ನು ದಾಟಿದ `ರಾಧನ ಗಂಡ' ಶುಕ್ರವಾರ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕನಿಗೆ ಕೊಟ್ಟ ಹಣಕ್ಕೆ ಮೋಸವಾಗದಂತೆ ಮನರಂಜನೆಯನ್ನು ಚಿತ್ರ ಉಣಬಡಿಸಲಿದೆ. ಹೀಗಾಗಿ ಚಿತ್ರ ಗೆಲ್ಲುವುದು ಖಚಿತ ಎಂಬ ಆತ್ಮವಿಶ್ವಾಸ ಅವರ ಮಾತಿನಲ್ಲಿತ್ತು.ಚಿತ್ರದ ಶೀರ್ಷಿಕೆಯದ್ದೇ ಒಂದು ವಿವಾದವಾಗಿತ್ತು. `ರಾಧಿಕಾಳ ಗಂಡ' ಎಂದಿದ್ದ ಶೀರ್ಷಿಕೆಗೆ ಗಂಡಾಂತರ ಬಂದು ಬದಲಿಸುವಂತೆ ಒತ್ತಡ ಎದುರಾದಾಗ `ರಾಧನ ಗಂಡ' ಎಂಬ ಬದಲಾವಣೆ ಅನಿವಾರ್ಯವಾಯಿತು. ನಂತರ ರಿಮೇಕ್ ಎಂಬ ವಿವಾದ ಚಿತ್ರತಂಡವನ್ನು ನ್ಯಾಯಾಲಯಕ್ಕೂ ಎಳೆಯಿತು. ಅಸಹಾಯಕರಾಗಿದ್ದ ನಿರ್ಮಾಪಕರ ಪರವಾಗಿ ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಿದ್ದು ನಟ ಕೋಮಲ್.ದೊಡ್ಡ ವ್ಯಕ್ತಿಗಳ ಹೆಸರಿನ ಎಷ್ಟೋ ಚಿತ್ರಗಳು ಬಂದಿವೆ. ಜಯಲಲಿತಾ, ಬಚ್ಚನ್, ಪುನೀತ್ ಇವರೆಲ್ಲರ ಹೆಸರಿನಲ್ಲಿಯೂ ಸಿನಿಮಾಗಳು ಬಂದಿವೆ. ಅವರಾರಿಗೂ ಅದರ ಕುರಿತು ತಕರಾರಿಲ್ಲ. ಹಾಗಾದರೆ `ಇವರು' ಅವರಿಗಿಂತ ದೊಡ್ಡವರೇ ಎಂಬ ಪ್ರಶ್ನೆ ಕೋಮಲ್ ಅವರದ್ದು. ಒತ್ತಡಕ್ಕೆ ಮಣಿದು ಶೀರ್ಷಿಕೆ ಬದಲಿಸಿದ ಬಳಿಕವೂ ಕೋರ್ಟ್ ಮೆಟ್ಟಿಲು ಏರುವಂತಾಗಿದ್ದರ ಹಿಂದೆಯೂ ಅದೇ ಕೈಗಳಿದ್ದವು ಎನ್ನುತ್ತಾರೆ ಅವರು.ಮೂರು ಹಾಡುಗಳು ಹಿಟ್ ಆಗಿದ್ದರೂ ಎಫ್.ಎಂ. ರೇಡಿಯೊ ಸ್ಟೇಷನ್‌ಗಳ ಲಾಬಿಯಲ್ಲಿ ಅಲ್ಲಿಯೂ `ರಾಧನ ಗಂಡ'ನಿಗೆ ಜಾಗ ಸಿಕ್ಕಿಲ್ಲ ಎಂಬ ಬೇಸರ ಅವರಲ್ಲಿದೆ. ಸಿನಿಮಾ ಚೆನ್ನಾಗಿದೆ ಎಂಬುದಕ್ಕೆ ಗಾಂಧಿನಗರದ ಪ್ರತಿಕ್ರಿಯೆಯೇ ಸಾಕ್ಷಿ. ಎಲ್ಲರೂ ಹಂಚಿಕೆದಾರರಿಗೆ ಹುಡುಕಾಡುವಾಗ `ರಾಧನ ಗಂಡ'ನನ್ನು ವಿತರಕರು ಸ್ವತಃ ಮುಂದೆ ಬಂದು ತೆಗೆದುಕೊಂಡಿದ್ದಾರೆ.

ಸಿನಿಮಾದಲ್ಲಿರುವ ರಂಜಿಸುವ ಸಂಗತಿಗಳೇ ಅದರ ಜೀವ. ನಮಗೆ ಕಾಂಟ್ರಾವರ್ಸಿ ಬೇಡ, ಕಾಮಿಡಿ ಬೇಕು ಎನ್ನುವ ಕೋಮಲ್, ಈ ಚಿತ್ರದಲ್ಲಿ ಹಾಸ್ಯದ ಪುಷ್ಕಳ ಭೋಜನವನ್ನೇ ಬಡಿಸಿದ್ದಾರಂತೆ. ನಿರುದ್ಯೋಗಿ ಗಂಡ, ಉದ್ಯೋಗದಲ್ಲಿರುವ ಪತ್ನಿಯ ಕತೆ ಚಿತ್ರದ್ದು. ಪತ್ನಿ ಸಿನಿಮಾದ ನಾಯಕಿಯೂ ಆಗುತ್ತಾಳೆ. ಗಂಡ ಆಕೆಯ ಸಹಾಯಕನಾಗಿ ಹಿಂದೆ ಮುಂದೆ ಓಡಾಡುತ್ತಾನೆ. ಇದೆಲ್ಲವೂ ತಾಜಾ ಹಾಸ್ಯದೊಂದಿಗೆ ನಿರೂಪಿತವಾಗಿದೆ ಎನ್ನುತ್ತಾರೆ ಕೋಮಲ್.ಸಿನಿಮಾ ಏನಾದರೂ ಮಾಡಿ, ನನ್ನ ಸಂಭಾವನೆ ಬಂದರೆ ಸಾಕು ಎನ್ನುವ ನಾಯಕರ ಗುಂಪಿಗೆ ನಾನು ಸೇರುವುದಿಲ್ಲ ಎನ್ನುತ್ತಾರೆ ಕೋಮಲ್. ಈ ಚಿತ್ರಕ್ಕಾಗಿ ಅವರೇ ನಿರ್ಮಾಪಕರಿಗೆ ಹಣ ನೀಡುವ ಪರಿಸ್ಥಿತಿ ಎದುರಾಗಿತ್ತು. `ರಾಧನ ಗಂಡ'ದ ನಿರ್ಮಾಪಕರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ತಮ್ಮದೇ ನಿರ್ಮಾಣದ `ನಂದೀಶ' ಚಿತ್ರವನ್ನು ತರಾತುರಿಯಲ್ಲಿ ಬಿಡುಗಡೆ ಮಾಡಿ ಕೈಸುಟ್ಟುಕೊಳ್ಳುವಂತಾಯಿತು.

ಆದರೆ ತಮ್ಮ ಚಿತ್ರಗಳ ಬಗ್ಗೆ ಕೋಮಲ್ ಅವರಿಗೆ ಅಪಾರ ವಿಶ್ವಾಸ, ಹೆಮ್ಮೆ. ಏಕೆಂದರೆ ನಾಯಕರಾಗಿರುವ ಒಂಬತ್ತು ಚಿತ್ರಗಳ ಪೈಕಿ ಸೋತಿರುವುದು `ವಾರೆವ್ಹಾ' ಮತ್ತು `ನಂದೀಶ' ಮಾತ್ರ. ಉಳಿದ ಚಿತ್ರಗಳೆಲ್ಲವೂ ಬಂಡವಾಳವನ್ನು ವಾಪಸು ತಂಡುಕೊಟ್ಟಿವೆ. ನನ್ನ ಚಿತ್ರಗಳಿಗೆ ಟಿಆರ್‌ಪಿಯೂ ಸಿಗುತ್ತದೆ ಎಂಬ ಕಾರಣಕ್ಕೆ ಉತ್ತಮ ಉಪಗ್ರಹ ಹಕ್ಕಿನ ಬೆಲೆಯೂ ಸಿಗುತ್ತದೆ.

ಇದೇ ಕಾರಣಕ್ಕಾಗಿ ನಿರ್ಮಾಪಕರು ತಮ್ಮ ಬಳಿ ಬರುತ್ತಿದ್ದಾರೆ. ನಾಯಕನಟನಾಗಿ ಸಾಬೀತುಪಡಿಸಲು ಇನ್ನೇನು ಬೇಕು ಎನ್ನುವ ಕೋಮಲ್, ತಮ್ಮ ಚಿತ್ರಕ್ಕೆ ಬಂಡವಾಳ ಹೂಡುವವರಾರೂ ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲ, ಎಲ್ಲರೂ ವೃತ್ತಿಪರ ನಿರ್ಮಾಪಕರು ಎನ್ನುತ್ತಾರೆ.ಉತ್ತಮ ಸರಕು ಎದುರಿಗೆ ಇದ್ದಾಗ ಬೇಡವೆಂದರೆ ದಡ್ಡನಾಗುತ್ತೇನೆ. ಇಷ್ಟವಾಗದ ಎಷ್ಟೋ ಕತೆಗಳನ್ನು ತಿರಸ್ಕರಿಸಿದ್ದೇನೆ. `ಪ್ಯಾರ್‌ಗೆ ಆಗ್ಬುಟ್ಟೈತೆ', `ಗೋವಾ', `ಪುಂಗಿದಾಸ' ಎಲ್ಲವೂ ನನಗೆಂದೇ ಇರುವ ಕತೆಗಳು. ಒಟ್ಟಿಗೆ ಹಲವು ಚಿತ್ರಗಳು ಆಯಾಸ ನೀಡಬಹುದು. ಆದರೆ ಒಳ್ಳೆಯ ಚಿತ್ರ ಸಿಕ್ಕಾಗ ಒತ್ತಡ ಮರೆತು ಎಲ್ಲವನ್ನೂ ಬಾಚಿಕೊಳ್ಳುತ್ತೇನೆ ಎನ್ನುತ್ತಾರೆ ಅವರು.

ಎರಡು ಉತ್ತಮ ಕತೆಗಳು ಅವರ ಬಳಿ ಇದೆ. ಅವರದೇ ನಿರ್ಮಾಣದಲ್ಲಿ ತಯಾರಾಗಲಿರುವ ಚಿತ್ರಗಳಿವು. ಅದರಲ್ಲಿ ಒಂದು `ರಾಕೆಟ್ ಗೌಡ'. ಕೈಯಲ್ಲಿರುವ ಸಿನಿಮಾಗಳ ಚಿತ್ರೀಕರಣ ಮುಗಿದ ನಂತರ ಈ ಚಿತ್ರವನ್ನು ಕೈಗೆತ್ತಿಕೊಳ್ಳಲಿರುವ ಕೋಮಲ್ ಚಿತ್ರೀಕರಣಕ್ಕಾಗಿ ಅಮೆರಿಕಕ್ಕೆ ಹಾರಲಿದ್ದಾರಂತೆ.ಅಂದಹಾಗೆ, ಕೋಮಲ್‌ಗೆ ಸಿನಿಮಾ ವ್ಯವಹಾರದಲ್ಲಿ ಹಿರಿಯ ನಟ ಅಂಬರೀಷ್ ನಡೆ ಆದರ್ಶವಂತೆ. `ಒಂದು ಕಾಲದಲ್ಲಿ ಅಂಬರೀಷ್ ಸಿನಿಮಾಗಳಲ್ಲಿ ನಟಿಸುವಾಗ ಹಣಕ್ಕಾಗಿ ಹಂಬಲಿಸುತ್ತಿರಲಿಲ್ಲ. ಹೀಗಾಗಿ ಅವರ ಮೇಲೆ ಜನರಿಗೆ ಹೆಚ್ಚು ಗೌರವ. ಅವರನ್ನೇ ನಾನು ಆದರ್ಶವಾಗಿರಿಸಿಕೊಂಡಿದ್ದೇನೆ. ಸಿನಿಮಾ ಮುಖ್ಯ, ಹಣ ನಂತರ' ಎನ್ನುತ್ತಾರೆ ಕೋಮಲ್.

-ಅಮಿತ್ ಎಂ.ಎಸ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.