ಗುರುವಾರ , ನವೆಂಬರ್ 21, 2019
20 °C

ಅಂಬರೀಷ್ ನಾಮಪತ್ರ ಸಲ್ಲಿಕೆ: ಜಿಲ್ಲಾಧ್ಯಕ್ಷ ಆತ್ಮಾನಂದ ಗೈರು

Published:
Updated:
ಅಂಬರೀಷ್ ನಾಮಪತ್ರ ಸಲ್ಲಿಕೆ: ಜಿಲ್ಲಾಧ್ಯಕ್ಷ ಆತ್ಮಾನಂದ ಗೈರು

ಮಂಡ್ಯ: ಚಲನಚಿತ್ರ ನಟರ ದಂಡು, ಪಕ್ಷದ ಮುಖಂಡರು ಹಾಗೂ ಅಭಿಮಾನಿಗಳ ಮೆರವಣಿಗೆಯಲ್ಲಿ ಆಗಮಿಸಿದ ರೆಬೆಲ್‌ಸ್ಟಾರ್ ಅಂಬರೀಷ್ ಬುಧವಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.ಬೆಳಿಗ್ಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಎಚ್.ಪಿ. ಮಹೇಶ್ ಅವರ ಮನೆಗೆ ಆಗಮಿಸಿ ಉಪಹಾರ ಸೇವಿಸಿದರು.ನಗರದ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅವರು, ಬೃಹತ್ ವೆುರವಣಿಗೆಯಲ್ಲಿ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿದರು.ಚಿತ್ರನಟರಾದ ಯಶ್, ದುನಿಯಾ ವಿಜಿ, ಪ್ರೇಮ್ ಹಾಗೂ ನೀನಾಸಂ ಸತೀಶ್ ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಪಕ್ಷದ ಮುಖಂಡರಾದ ರವಿಕುಮಾರ್ ಗಣಿಗ, ಅಮರಾ ವತಿ ಚಂದ್ರಶೇಖರ್, ಪಿ.ಎಂ. ಸೋಮಶೇಖರ್, ಹನಕೆರೆ ಶಶಿಕುಮಾರ್, ಕೆಬ್ಬಳ್ಳಿ ಆನಂದ್, ರವಿಶಂಕರೇಗೌಡ ಮತ್ತಿತರರು ಪಾಲ್ಗೊಂಡಿದ್ದರು.ಕಾಂಗ್ರೆಸ್ ಪಕ್ಷವು ಈಗಾಗಲೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಜತೆಗೆ ಜಿಲ್ಲೆಯ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕಾರ್ಯಗಳನ್ನು ಸೇರಿಸಿಕೊಂಡು ಮತಯಾಚನೆ ಮಾಡಲಿದ್ದೇನೆ ಎಂದು ಅಂಬರೀಷ್ ಸುದ್ದಿಗಾರರಿಗೆ ತಿಳಿಸಿದರು.ಪಕ್ಷದಲ್ಲಿನ ವ್ಯತ್ಯಾಸಗಳು ಒಂದೆರಡು ದಿನದಲ್ಲಿ ಸರಿಯಾಗಲಿವೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದೇವೆ ಎಂದರು. ಪತ್ನಿ ಸುಮಲತಾ ಅವರೂ ಜತೆಗಿದ್ದರು.ಜಿಲ್ಲಾಧ್ಯಕ್ಷ ಆತ್ಮಾನಂದ, ಮಾದೇಗೌಡ ಗೈರು

ಕಾಂಗ್ರೆಸ್ ಅಭ್ಯರ್ಥಿಯಾಗಿ ಅಂಬರೀಷ್ ಅವರು ಬುಧವಾರ ನಾಮಪತ್ರ ಸಲ್ಲಿಸಿದರು. ಆದರೆ ವೆುರವಣಿಗೆ ಹಾಗೂ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾಜಿ ಸಂಸದ ಜಿ. ಮಾದೇಗೌಡ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಆತ್ಮಾನಂದ ಅವರ ಗೈರು ಹಾಜರಿ ಎದ್ದು ಕಂಡಿತು.ಮಂಗಳವಾರ ರಾತ್ರಿ ಇವರಿಬ್ಬರೂ ನಾಯಕರ ಮನೆಗೆ ಭೇಟಿ ನೀಡಿದ್ದ ಅಂಬರೀಷ್ ಅವರು, ಬುಧವಾರ ನಾಮಪತ್ರ ಸಲ್ಲಿಸುವ ವೇಳೆ ಆಗಮಿಸಬೇಕು ಎಂದು ಮನವಿ ಮಾಡಿದ್ದರು.ಆಕಾಂಕ್ಷಿಯಾಗಿದ್ದ ಎಂ.ಎಸ್. ಆತ್ಮಾನಂದ ಅವರು ಟಿಕೆಟ್ ದೊರೆಯದ್ದರಿಂದ ಮುನಿಸಿಕೊಂಡದ್ದರು. ಮಾತುಕತೆಯ ನಂತರವೂ ಗೈರು ಹಾಜರಾಗಿದ್ದರು.ರಾತ್ರಿ ವೇಳೆ ಅಂಬಿ ಕಾರ್ಯಾಚರಣೆ

ಮಂಡ್ಯ: ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಉಪಾಧ್ಯಕ್ಷ ಅಂಬರೀಷ್ ಅವರು ಮಂಗಳವಾರ ರಾತ್ರಿ ನಗರಕ್ಕೆ ಆಗಮಿಸಿ, ತೀವ್ರ ಕಾರ್ಯಾಚರಣೆಗೆ ಇಳಿದರು.ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದ ರವಿಕುಮಾರ್ ಗಣಿಗ ಅವರನ್ನು ಭೇಟಿ ಮಾಡಿದ ಅಂಬರೀಷ್, ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವಂತೆ ಮನವಿ ಮಾಡಿದರು. ಅದಕ್ಕೆ ಗಣಿಗ ಅವರೂ ಸಮ್ಮತಿಸಿ, ಬುಧವಾರ ಬೆಳಿಗ್ಗೆ ಬೆಂಬಲಿಗರೊಂದಿಗೆ ಸೇರ್ಪಡೆಗೊಂಡರು.ನಂತರ ಮಾಜಿ ಸಂಸದ ಜಿ. ಮಾದೇಗೌಡ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಆತ್ಮಾನಂದ ಅವರ ಮನೆಗಳಿಗೂ ಭೇಟಿ ನೀಡಿದರು. ಚುನಾವಣೆಯಲ್ಲಿ ನೀವು ಮಾರ್ಗದರ್ಶನ ಮಾಡಬೇಕು ಎಂದು ಕೋರಿದರು. ಮೂವರೂ ನಾಯಕರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.ಜೆಡಿಎಸ್‌ನಿಂದ ಮೆರವಣಿಗೆ

ಮಂಡ್ಯ: ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಬೃಹತ್ ವೆುರವಣಿಗೆಯಲ್ಲಿ ಬುಧವಾರ ಆಗಮಿಸಿದ ಶಾಸಕ ಎಂ.ಶ್ರೀನಿವಾಸ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.ನಗರದ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ವೆುರವಣಿಗೆಯಲ್ಲಿ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ದರು. ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಜಫ್ರುಲ್ಲಾಖಾನ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಶಂಕರೇಗೌಡ, ಸದಸ್ಯರಾದ ವಿಜಯಾನಂದ್, ಸಿ. ಮಾದಪ್ಪ, ಎಸ್.ಪಿ. ಗೌರೀಶ್ ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಮತ್ತಿತರರು ಪಾಲ್ಗೊಂಡಿದ್ದರು.ಇಲ್ಲಿಯವರೆಗೆ ಶಾಸಕನಾಗಿ ಮಾಡಿರುವ ಅಭಿವೃದ್ಧಿಗಳನ್ನು ಮುಂದಿಟ್ಟುಕೊಂಡು ಮೂರನೇ ಬಾರಿಗೆ ಆಯ್ಕೆ ಮಾಡಬೇಕು ಎಂದು ಕೋರುತ್ತೇನೆ ಎಂದು ಶಾಸಕ ಎಂ.ಶ್ರೀನಿವಾಸ್ ಸುದ್ದಿಗಾರರಿಗೆ ತಿಳಿಸಿದರು.ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿರುವ ಹೋರಾಟವನ್ನೂ ಹೇಳಲಿದ್ದೇನೆ. ಸುಂದರ ಮಂಡ್ಯ ನಿರ್ಮಾಣಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಬಂಡಾಯಗಾರರ ಸ್ಪರ್ಧೆ

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡಕ್ಕೂ ಬಂಡಾಯ ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದರು.ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಅವರು ಶ್ರೀರಂಗಪಟ್ಟಣದೊಂದಿಗೆ ಮಂಡ್ಯದಲ್ಲಿಯೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದರು. ಕೆಪಿಸಿಸಿ ಸದಸ್ಯ ಟಿ.ಎಸ್. ಸತ್ಯಾನಂದ ಮತ್ತಿತರರು ಉಪಸ್ಥಿತರಿದ್ದರು.ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಅಶೋಕ್ ಜಯರಾಂ ಅವರೂ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಮಾಜಿ ಶಾಸಕರಾದ ಎಚ್.ಬಿ. ರಾಮು, ಪ್ರಭಾವತಿ ಜಯರಾಂ, ನಗರಸಭೆ ಸದಸ್ಯ ಎಂ.ಪಿ. ಅರುಣ್‌ಕುಮಾರ್, ಶಿವನಂಜು ಮತ್ತಿತರರು ಪಾಲ್ಗೊಂಡಿದ್ದರು.ನಾಗಮಂಗಲ: ಚುನಾವಣಾ ವೀಕ್ಷಕರ ನೇಮಕ

ಮಂಡ್ಯ: ನಾಗಮಂಗಲ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕರನ್ನಾಗಿ ಶೈಲೇಂದ್ರ ಕೆ.ಸಿಂಗ್ ಅವರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ. ನಾಗಮಂಗಲದಲ್ಲಿನ ಪ್ರವಾಸಿ ಮಂದಿರದಲ್ಲಿ ಚುನಾವಣಾ ವೀಕ್ಷಕರು ವಾಸ್ತವ್ಯವಿದ್ದು, ಸಾರ್ವ ಜನಿಕರು ಚುನಾವಣಾ ವಿಷಯಕ್ಕೆ ಸಂಬಂಧಿಸಿದಂತೆ ಸಂಪರ್ಕಿ ಸಬಹುದು. ದೂ.ಸಂ. 94804 70492/ 08234-280456.

ಮುಖಾಮುಖಿಯಾದ ಅಂಬಿ-ರವೀಂದ್ರ

ಮಂಡ್ಯ: ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಬುಧವಾರವೇ ಬಹುತೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮುಂದಾದಾಗ ಒಬ್ಬರಿಗೊಬ್ಬರು ಮುಖಾಮುಖಿಯಾದರು.ಮೊದಲಿಗೆ ಶಾಸಕ ಎಂ.ಶ್ರೀನಿವಾಸ್ ನಾಮಪತ್ರ ಸಲ್ಲಿಕೆಗೆ ಆಗಮಿಸಿದರು. ಅವರು ನಾಮಪತ್ರ ಸಲ್ಲಿಸಿ ಹೊರ ಬರುವ ವೇಳೆಗೆ ಮುಂದಿನ ಸರದಿಗಾಗಿ ಅಂಬರೀಷ್ ಕಾದು ಕುಳಿತಿದ್ದರು. ಇಬ್ಬರೂ ಅಭ್ಯರ್ಥಿಗಳು ಪರಸ್ಪರ ಕೈಕಲುಕಿ, ಶುಭಾಶಯ ವಿನಿಮಯ ಮಾಡಿಕೊಂಡರು.ಎಂ.ಶ್ರೀನಿವಾಸ್ ನಾಮಪತ್ರ ಸಲ್ಲಿಸಿ, ಕಚೇರಿಯ ಆವರಣದಿಂದ ಹೊರಹೋಗುವ ವೇಳೆಗೆ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಗಮಿಸಿದ್ದ ಅಶೋಕ್ ಜಯರಾಂ ಎದುರಾದರು.ಕೂಡಲೇ ಅಶೋಕ್ ಅವರು ಶ್ರೀನಿವಾಸ್ ಅವರಿಗೆ ನಮಿಸಿ, ಆಶೀರ್ವಾದ ಪಡೆಯಲು ಮುಂದಾದರು. ಅವರನ್ನು ತಡೆದ ಶ್ರೀನಿವಾಸ್ ಅವರು ಕೈಕಲುಕಿ ಬೀಳ್ಕೊಟ್ಟರು.ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ಅವರು ನಾಮಪತ್ರ ಸಲ್ಲಿಸಿ, ಹೊರಬರುವಾಗ ಅಲ್ಲಿಯೇ ರವೀಂದ್ರ ಶ್ರೀಕಂಠಯ್ಯ ನಿಂತಿದ್ದರು. ಅವರನ್ನು ಕರೆದ ಅಂಬರೀಷ್ ಅವರೊಂದಿಗೆ ಕೈಕಲುಕಿ ಛಾಯಾಗ್ರಾಹಕರಿಗೆ ಫೋಜು ನೀಡಿ ಮುನ್ನಡೆದರು.

ಪ್ರತಿಕ್ರಿಯಿಸಿ (+)