ಮಂಗಳವಾರ, ನವೆಂಬರ್ 12, 2019
27 °C

ಅಂಬರೀಷ್ ಪರ ಸುಮಲತಾ ಪ್ರಚಾರ

Published:
Updated:

ಮಂಡ್ಯ: ಮಂಡ್ಯ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಬರೀಷ್ ಪರವಾಗಿ ಚಿತ್ರನಟ ದರ್ಶನ್ ಹಾಗೂ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ನಗರದಲ್ಲಿ ಮಂಗಳವಾರ ಬಿರುಸಿನ ಪ್ರಚಾರ ನಡೆಸಿದರು.ನಗರದ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸದ ದರ್ಶನ್ ಅವರು, ಪೇಟೆ ಬೀದಿ, ಶಂಕರಮಠ, ಕಲ್ಲಹಳ್ಳಿ, ವಿ.ವಿ.ನಗರ ಮುಂತಾದ ಪ್ರದೇಶಗಳಲ್ಲಿ ಅಂಬರೀಷ್ ಅವರ ಪರವಾಗಿ ಮತಯಾಚಿಸಿದರು.

ತೆರೆದ ವಾಹನದಲ್ಲಿ ತೆರಳುತ್ತಿದ್ದ ದರ್ಶನ್ ಹಾಗೂ ಸುಮಲತಾ ಅವರನ್ನು ವೀಕ್ಷಿಸಲು, ಅವರೊಂದಿಗೆ ಹಸ್ತಲಾಘವ ನೀಡಲು ಯುವಕರ ಗುಂಪು ಪೈಪೋಟಿ ನಡೆಸುತ್ತಿದ್ದದ್ದು ಕಂಡು ಬಂದಿತು. ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ನೋಡಿ ಸಂಭ್ರಮಿಸಿದರು.ಪಕ್ಷದ ಪರವಾಗಿ ಪ್ರಚಾರಕ್ಕೆ ಬಂದಿಲ್ಲ. ಅಂಬರೀಷ್ ಅವರ ಮೇಲಿನ ಅಭಿಮಾನದಿಂದ ಪ್ರಚಾರಕ್ಕೆ ಬಂದಿದ್ದೇನೆ. ನಾಳೆಯೂ ನಗರದಲ್ಲಿ ಪ್ರಚಾರ ನಡೆಸಲಿದ್ದೇನೆ. ಮತದಾನದ ದಿನದವರೆಗೂ ಬಿಡುವು ಮಾಡಿಕೊಂಡು ಆಗಾಗ ಬರುತ್ತಿರುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.`ಅನ್ನದಾನಿ ಕಣ್ಣೀರು'

ಮಳವಳ್ಳಿ: ತಾಲ್ಲೂಕಿನ ಬೆಳಕವಾಡಿ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಗೆ ಸೇರಿಸಿದ್ದು, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದ್ದರೂ ಕಳೆದ ಬಾರಿ ಚುನಾವಣೆಯಲ್ಲಿ ನನಗೆ ಹಿನ್ನಡೆಯಾಗಿತ್ತು. ಈ ಬಾರಿಯಾದರೂ ನನ್ನನ್ನು ಗೆಲ್ಲಿಸಿ ಎಂದು ಜೆಡಿಎಸ್ ಅಭ್ಯರ್ಥಿ ಡಾ.ಕೆ.ಅನ್ನದಾನಿ ಮನವಿ ಮಾಡಿ ಕಣ್ಣೀರಿಟ್ಟರು.ತಾಲ್ಲೂಕಿನ ಬೆಳಕವಾಡಿ ಗ್ರಾಮದ ಚಾಮುಂಡೇಶ್ವರಿ ಸಮುದಾಯಭವನದಲ್ಲಿ ಮಂಗಳವಾರ ನಡೆದ ಬಿ.ಜಿ.ಪುರ ಹೋಬಳಿ ಮಟ್ಟದ ಪಕ್ಷದ ಕಾರ್ಯಕರ್ತರ ಸಭೆ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ಹಾಗೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಖಚಿತ ಎಂದರು.ಬೆಳಕವಾಡಿಯ ನಾಯಕ ಜನಾಂಗದ ಕೆಲವು ಯಜಮಾನರು, ಗ್ರಾಮ ಪಂಚಾಯಿತಿ ಸದಸ್ಯ   ವೆಂಕಟಪ್ಪ, ಶಿವಣ್ಣ, ಮಾಜಿ ಸದಸ್ಯ ಪರಶಿವಮೂರ್ತಿ ಕಗ್ಗಲಿಪುರದ ನಂಜುಂಡೇಗೌಡ, ಹೊನಗಹಳ್ಳಿ ಮುರುಳಿ, ನಂಜನಾಯನಪುರದ ಶಿವಮೂರ್ತಿ, ಕಣಿಕಳ್ಳಿ ರೇವಣ್ಣ, ಕಲ್ಯಾಣಿಕೊಪ್ಪಲು ಶಿವಮೂರ್ತಿ, ವಾಸುವಳ್ಳಿ ನಾಗರಾಜು, ವಿರೂಪಾಕ್ಷ ಸೇರಿದಂತೆ ಇನ್ನೂ ಹಲವರು ಜೆಡಿಎಸ್ ಸೇರಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್, ಜೆಡಿಎಸ್ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಮಲ್ಲೇಗೌಡ, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಭಾಕರ್, ಕಾಂತರಾಜು, ಮುಖಂಡರಾದ ಅಶ್ವತ್ಥಕುಮಾರ್, ಹರ್ಷದ್‌ಪಾಷ, ಜಯಶೀಲ್, ಸದಾನಂದ, ನಾಗಭೂಷಣ ಇದ್ದರು.

ಪ್ರತಿಕ್ರಿಯಿಸಿ (+)