ಶನಿವಾರ, ನವೆಂಬರ್ 16, 2019
22 °C
ಶ್ರೀರಂಗಪಟ್ಟಣ, ಮಂಡ್ಯದಲ್ಲೂ ನಾಮಪತ್ರ ಸಲ್ಲಿಕೆ

ಅಂಬರೀಷ್ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಸ್ಪರ್ಧೆ!

Published:
Updated:

ಮಂಡ್ಯ: ಜಿಲ್ಲೆಯ ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಬಂಡಾಯದ ಗಾಳಿ ಜೋರಾಗಿ ಬೀಸ ತೊಡಗಿದೆ.ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಉಪಾಧ್ಯಕ್ಷ ಅಂಬರೀಷ್ ಅವರು ಬುಧವಾರ ನಾಮಪತ್ರ ಸಲ್ಲಿಸಿದರು. ಅಚ್ಚರಿಯ ಬೆಳವಣಿಗೆಯಲ್ಲಿ ಶ್ರೀರಂಗಪಟ್ಟಣದಿಂದ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದ ರವೀಂದ್ರ ಶ್ರೀಕಂಠಯ್ಯ ಅವರು ಶ್ರೀರಂಗಪಟ್ಟಣದ ಜೊತೆಗೆ ಮಂಡ್ಯದಲ್ಲಿಯೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು.ಶ್ರೀರಂಗಪಟ್ಟಣದಲ್ಲಿ ನಾಮಪತ್ರ ಸಲ್ಲಿಸಿದ ರವೀಂದ್ರ ಅವರು, ಮಧ್ಯಾಹ್ನ 2.45ರ ವೇಳೆಗೆ ಮಂಡ್ಯಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಲು ಮುಂದಾದರು. ಇವರು ಸರತಿಗಾಗಿ ನಿಂತಿದ್ದಾಗ ನಾಮಪತ್ರ ಸಲ್ಲಿಸಿ ಹೊರಬಂದ  ಅಂಬರೀಷ್ ಎದುರಾದರು. ಆಗ ರವೀಂದ್ರ ಅವರನ್ನು ಅಂಬರೀಷ್ ಕರೆದು ಕೈಕುಲುಕಿದರು. ಇಬ್ಬರೂ ಛಾಯಾಗ್ರಾಹಕರಿಗೆ ಫೋಜು ನೀಡಿದರು.ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿಯಾಗಿ ಶಾಸಕ ಎಂ.ಶ್ರೀನಿವಾಸ್ ನಾಮಪತ್ರ ಸಲ್ಲಿಸಿದರು. ಬಂಡಾಯ ಅಭ್ಯರ್ಥಿಯಾಗಿ ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಅಶೋಕ್ ಜಯರಾಂ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.ಶ್ರೀನಿವಾಸ್ ನಾಮಪತ್ರ ಸಲ್ಲಿಸಿ ಹೊರಹೋಗುವಾಗ ಅಶೋಕ್ ಒಳಗಡೆ ಆಗಮಿಸಿದರು. ಆಗ ಅಶೋಕ್ ಅವರು, ಶ್ರೀನಿವಾಸ್ ಅವರ ಆಶೀರ್ವಾದ ಪಡೆಯಲು ಮುಂದಾದರು. ಅವರನ್ನು ಅರ್ಧಕ್ಕೆ ತಡೆದ ಶ್ರೀನಿವಾಸ್, ಕೈಕಲುಕಿ ಮುಂದೆ ಸಾಗಿದರು.ಕೆ.ಆರ್.ಪೇಟೆಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಸಿ.ನಾರಾಯಣಗೌಡ ನಾಮಪತ್ರ ಸಲ್ಲಿಸಿದರೆ, ಬಂಡಾಯ ಅಭ್ಯರ್ಥಿಯಾಗಿ ಹಿರಿಯ ನಾಯಕ, ಮಾಜಿ ಸ್ಪೀಕರ್ ಕೃಷ್ಣ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಸೆಡ್ಡು ಹೊಡೆದರು.

ಪ್ರತಿಕ್ರಿಯಿಸಿ (+)