ಅಂಬಾರಿಗೆ ಅರ್ಜುನ ಸಮರ್ಥ

7

ಅಂಬಾರಿಗೆ ಅರ್ಜುನ ಸಮರ್ಥ

Published:
Updated:

ಮೈಸೂರು: `ವಿಜಯದಶಮಿಯಂದು ಚಿನ್ನದ ಅಂಬಾರಿ ಹೊರಲು `ಅರ್ಜುನ~ ಸಮರ್ಥ...~

ಚಿನ್ನದ ಅಂಬಾರಿ ಹೊರುವ ಗಂಡು ಆನೆ `ಅರ್ಜುನ~ನ ಮಾವುತ ದೊಡ್ಡ ಮಾಸ್ತಿ ಅವರ ವಿಶ್ವಾಸದ ಮಾತಿದು. `ಅರ್ಜುನ ಸುಮಾರು 16 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾನೆ.ಒಮ್ಮೆ ಚಿನ್ನದ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದಾನೆ. 12 ವರ್ಷಗಳಿಂದ ಅರ್ಜುನನೊಂದಿಗೆ ಒಡನಾಟ ಹೊಂದಿದ್ದೇನೆ. ಒಮ್ಮೆಯೂ ಆತ ಕಿರಿಕ್ ಮಾಡಿಲ್ಲ. ಜಂಬೂ ಸವಾರಿಯಂದು ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅರ್ಜುನ ಸಮರ್ಥವಾಗಿ  ನಿಭಾಯಿಸುತ್ತಾನೆ~ ಎನ್ನುತ್ತಾರೆ ಇವರು.`ನನಗೆ 53 ವರ್ಷ. ಅರಣ್ಯ ಇಲಾಖೆಯಲ್ಲಿ 32 ವರ್ಷ ಸೇವೆ ಸಲ್ಲಿಸಿದ್ದೇನೆ. 1968 ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ `ಖೆಡ್ಡಾ~ ಕಾರ್ಯಾಚರಣೆ ಮೂಲಕ ಅರ್ಜುನನ್ನು ಸೆರೆ ಹಿಡಿಯಲಾಗಿತ್ತು. ಬಳ್ಳೆ ಶಿಬಿರದಲ್ಲಿರುವ ಅರ್ಜುನನಿಗೆ 2 ವರ್ಷ ಕಾವಾಡಿಯಾಗಿ ದುಡಿದ ನಂತರ, ಮಾವುತನಾಗಿ ಅರಣ್ಯ ಇಲಾಖೆ ನನ್ನನ್ನು ನೇಮಿಸಿತು. ನನ್ನ ಮಾತನ್ನು ಅರ್ಜುನ ಎಂದೂ ಮೀರಿಲ್ಲ. ಮಾತಿನಲ್ಲೇ ಅರ್ಜುನನನ್ನು ನಿಯಂತ್ರಿಸುತ್ತೇನೆ. ಒಮ್ಮೆಯೂ ಅಂಕುಶ ಬಳಸಿಲ್ಲ~ ಎಂದು ಹೇಳಿದರು.ಮಾವುತನನ್ನು ಕೊಂದಿತ್ತಾ?ಅರಮನೆ ಆವರಣದಲ್ಲಿ ಕಾರಂಜಿ ಕೊಳ ಇಲ್ಲದ ಕಾರಣ ಹೊರಗೆ ಸ್ನಾನಕ್ಕೆ ಕರೆದೊಯ್ಯುವಾಗ 1992 ರಲ್ಲಿ ಮಾವುತನನ್ನು ಅರ್ಜುನ ಆನೆ ಕೊಂದಿತ್ತು. ತುಂಟ ಆನೆಯಾದ್ದರಿಂದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅರ್ಜುನನಿಗೆ ನೀಡುತ್ತಿರಲಿಲ್ಲ. ಈ ಬಾರಿ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.`ಅರ್ಜುನನೇ ಮಾವುತನನ್ನು ಕೊಂದಿತ್ತು ಎಂಬುದಕ್ಕೆ ಪ್ರತ್ಯಕ್ಷದರ್ಶಿಗಳು ಇಲ್ಲ. 20 ವರ್ಷಗಳ ಹಿಂದಿನ ಘಟನೆಯ ಬಗ್ಗೆ ನಮಗೆ ಗೊತ್ತಿಲ್ಲ~ ಎನ್ನುತ್ತಾರೆ ಆನೆ ವೈದ್ಯ ಡಾ.ನಾಗರಾಜ್ ಮತ್ತು ಮಾವುತ ದೊಡ್ಡ ಮಾಸ್ತಿ.

`ಮನುಷ್ಯರ ಸ್ವಭಾವದಲ್ಲಿ ಭಿನ್ನತೆ ಇರುವಂತೆ ಪ್ರಾಣಿಗಳಲ್ಲೂ ಇದೆ. ಬಲರಾಮ ಸ್ವಾಮ್ಯ ಸ್ವಭಾವದವನು.`ಅರ್ಜುನ~ ಹಾಗಲ್ಲ. ತನಗೆ ಒಗ್ಗಿಕೊಂಡವರನ್ನು ಮಾತ್ರ ಅರ್ಜುನ ಹತ್ತಿರ ಸೇರಿಸುತ್ತಾನೆ. ಆದರೆ ಮಾವುತನ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಾನೆ. `ಬಲರಾಮ~ ಅಂಬಾರಿ ಹೊರಲು ಸಮರ್ಥನಾಗಿದ್ದ ಕಾರಣ ಅರ್ಜುನನಿಗೆ ಅಂಬಾರಿ ಹೊರುವ ಅವಕಾಶ ನೀಡಿರಲಿಲ್ಲ. ಈ ಬಾರಿ ಬಲರಾಮ ದೈಹಿಕವಾಗಿ ಕುಗ್ಗಿರುವುದರಿಂದ ಅರ್ಜುನನಿಗೆ ಜವಾಬ್ದಾರಿ ನೀಡಲಾಗಿದೆ~ ಎಂದು ಆನೆ ವೈದ್ಯ ಡಾ.ನಾಗರಾಜ್ ತಿಳಿಸಿದರು.`ಲೇ ಮತ್ (ಬಾ) ಎಂದಾಗ ಎಲ್ಲೇ ಇದ್ದರೂ ಅರ್ಜುನ ಬರುತ್ತಾನೆ. ಬಳ್ಳೆ ಶಿಬಿರದಲ್ಲಿ ಆತನನ್ನು ನೋಡಿಕೊಳ್ಳುವುದನ್ನು ಬಿಟ್ಟರೆ ನನಗೆ ಬೇರೇನೂ ಕೆಲಸ ಇಲ್ಲ. ನನಗೆ ಮೂರು ಜನ ಗಂಡು ಮಕ್ಕಳು. ಸಣ್ಣಪ್ಪ ಎಂಬ ಮಗನನ್ನು `ಅರ್ಜುನ~ನ ಕಾವಾಡಿಯಾಗಿ ಸರ್ಕಾರ ಎಂಟು ತಿಂಗಳ ಹಿಂದೆ ನೇಮಿಸಿದೆ.ಕೊನೆ ಮಗ ಗಣೇಶ ಗುತ್ತಿಗೆ ಆಧಾರದ ಮೇಲೆ ದಸರಾ ಆನೆಗಳಿಗೆ ವಿಶೇಷ ಆಹಾರ ತಯಾರಿಸುತ್ತಾನೆ. ನನ್ನ ಪೂರ್ವಜರೆಲ್ಲರೂ ಆನೆಗಳೊಂದಿಗೆ ಒಡನಾಟ ಹೊಂದಿದ್ದವರು. ನನ್ನ ಕುಟುಂಬ ಆನೆಗಳೊಂದಿಗೆ ಬೆರೆತು ಹೋಗಿದೆ~ ಎಂದು ದೊಡ್ಡ ಮಾಸ್ತಿ ಹೇಳಿದರು.`ಅರ್ಜುನ ಅಂಬಾರಿ ಹೊರುತ್ತಿರುವುದು ಎರಡನೇ ಬಾರಿಯಾದರೆ, ಅಂಬಾರಿ ಆನೆಯ ಮಾವುತನಾಗಿ ಈ ದಸರಾ ನನಗೆ ಮೊದಲನೆಯದು. ಇದು ನನಗೆ ಖುಷಿ ತಂದಿದೆ. ಅರ್ಜುನ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾನೆ. ಯಾವುದೇ ಅನುಮಾನ ಬೇಡ~ 

      ಮಾವುತ ದೊಡ್ಡ ಮಾಸ್ತಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry