ಅಂಬಾರಿಯ ಅಲೆಯಲ್ಲಿ ಅದ್ದೂರಿ

7

ಅಂಬಾರಿಯ ಅಲೆಯಲ್ಲಿ ಅದ್ದೂರಿ

Published:
Updated:

ನಿರ್ದೇಶಕ ಎ.ಪಿ. ಅರ್ಜುನ್ ಅವರ ಮೊಗದಲ್ಲಿ ಒಂದು ಖುಷಿಯ ಎಳೆಯಿತ್ತು. `ಅದ್ದೂರಿ~ ಹೆಸರಿನ ಚಿತ್ರವನ್ನು ತೆರೆಗೆ ಸಿದ್ಧಪಡಿಸಿರುವ ಅರ್ಜುನ್ ಅವರಿಗೀಗ ಕನಸು ಮನಸಿನಲೂ ಚಿತ್ರದ ಗುಂಗೇ.`ಅದ್ದೂರಿ~ ಚಿತ್ರದ ಗೀತೆಗಳ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ ಕಳೆದ ವಾರ ನಡೆಯಿತು. ಸಿನಿಮಾದ ಶೀರ್ಷಿಕೆಗೆ ತಕ್ಕಂತೆ ಕಾರ್ಯಕ್ರಮ ಭರ್ಜರಿಯಾಗಿಯೇ ಇತ್ತು. ನಿರ್ದೇಶಕರು ಚಿತ್ರರಂಗದ ಬೇಡಿಕೆಯ ನಟರಾದ ಸುದೀಪ್ ಮತ್ತು ದರ್ಶನ್ ಅವರನ್ನು ಒಟ್ಟಿಗೆ ಸೇರಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

 

ನಟರಾದ ಪ್ರೇಮ್, ಅಜಯ್ ರಾವ್, ನಿರ್ದೇಶಕರಾದ ಮಹೇಶ್‌ಬಾಬು, ಇಂದ್ರಜಿತ್ ಲಂಕೇಶ್, ಸಂಗೀತ ನಿರ್ದೇಶಕರಾದ ಹಂಸಲೇಖಾ ಮತ್ತು ಹರಿಕೃಷ್ಣ- ಹೀಗೆ ಕಾರ್ಯಕ್ರಮಕ್ಕೆ ಬಂದುಹೋದವರ ಸಂಖ್ಯೆ ದೊಡ್ಡದಿತ್ತು. ಹೀಗಾಗಿ, ಇಡೀ ಕಾರ್ಯಕ್ರಮ ಒಂದು ತಾರಾಮೇಳದ ಕಳೆ ಪಡೆದುಕೊಂಡಿತ್ತು. ನಟ ಚಿರಂಜೀವಿ ಸರ್ಜಾ ಕೂಡ ವೇದಿಕೆಯ ಮೇಲಿದ್ದರು. ಅವರ ಸೋದರ ಸಂಬಂಧಿ ಧ್ರುವ ಸರ್ಜಾ ಚಿತ್ರದ ನಾಯಕ. ರಾಧಿಕಾ ಪಂಡಿತ್ ಚಿತ್ರದ ನಾಯಕಿ.ಹಾಡುಹಬ್ಬದಲ್ಲಿ ಒಂದಾದವರೆಲ್ಲ `ಅದ್ದೂರಿ~ ಬಗ್ಗೆ ನಿರೀಕ್ಷೆಗಳನ್ನು ವ್ಯಕ್ತಪಡಿಸಿದರು. ಅವರ ನಿರೀಕ್ಷೆಗಳಿಗೆ ಕಾರಣವೂ ಇತ್ತು. ಅರ್ಜುನ್ ನಿರ್ದೇಶನದ ಹಿಂದಿನ ಸಿನಿಮಾ `ಅಂಬಾರಿ~ ಸಹೃದಯರ ಮೆಚ್ಚುಗೆ ಗಳಿಸಿದೆ. ಆ ಯಶಸ್ಸು `ಅದ್ದೂರಿ~ ಮೂಲಕ ಮುಂದುವರೆಯಲಿದೆ ಎನ್ನುವುದು ಎಲ್ಲರ ನಿರೀಕ್ಷೆ.ದರ್ಶನ್ ಅವರಿಗಂತೂ ನಿರ್ದೇಶಕರಾಗಿ ಅರ್ಜುನ್ ಅವರ ಕುಸುರಿಕಲೆಯ ಬಗ್ಗೆ ಇನ್ನಿಲ್ಲದ ಮೆಚ್ಚುಗೆ. `ತಂಗಿಗಾಗಿ~ ಚಿತ್ರದ ಸಂದರ್ಭದಲ್ಲಿ ಅವರ ಕೆಲಸ ಗಮನಿಸಿದ್ದೇನೆ. ಅಂಬಾರಿ ಚಿತ್ರವನ್ನೂ ನೋಡಿದ್ದೇನೆ. ಅರ್ಜುನ್ ನಿರ್ದೇಶಕರಾಗಿ ಮತ್ತೊಮ್ಮೆ ಗೆಲ್ಲಲಿದ್ದಾರೆ ಎಂದು ದರ್ಶನ್ ಪ್ರಶಂಸಿಸಿದರು.ಅಂದಹಾಗೆ, `ಅದ್ದೂರಿಯ ಗೀತೆಗಳು ಈಗಾಗಲೇ ಜನಪ್ರಿಯವಾಗಿವೆ. ಯುವಜನರು ಹಾಡುಗಳನ್ನು ಗುನುಗುತ್ತಿದ್ದಾರೆ. ಹರಿಕೃಷ್ಣ ಅವರ ಸಂಗೀತದಲ್ಲಿ ಮಾಧುರ್ಯವೂ ಇದೆ~ ಎಂದು ಅರ್ಜುನ್ ಹೇಳಿಕೊಂಡರು. ಹರಿಕೃಷ್ಣ ಅವರಿಗೆ ಕೂಡ `ಅದ್ದೂರಿ~ ಗೀತೆಗಳು ಹೊಸ ಜನಪದ ಆಗುತ್ತಿರುವ ಬಗ್ಗೆ ಖುಷಿ.`ಅದ್ದೂರಿ~ಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿರುವ ಬಗ್ಗೆ ನಾಯಕ ನಟ ಧ್ರುವ ಸರ್ಜಾ ಪುಳಕ ಹಾಗೂ ಧನ್ಯತಾ ಭಾವದಲ್ಲಿ ತೋಯ್ದುಹೋಗಿದ್ದರು. ತಮ್ಮ ಚೊಚ್ಚಿಲ ಪ್ರಯತ್ನಕ್ಕೆ ಆಶೀರ್ವದಿಸಲು ಬಂದ ಎಲ್ಲರಿಗೂ ತಾವು ಋಣಿ ಎಂದರು. ನಿರ್ಮಾಪಕ ಸಿ.ಎಂ.ಆರ್. ಶಂಕರ್ ರೆಡ್ಡಿ ಕೂಡ ಖುಷಿಯಲ್ಲಿ ಮಾತು ಮರೆತಂತೆ ಕಾಣಿಸುತ್ತಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry