ಅಂಬಾರಿ ಇಳಿಯುವಳೆ ಚೆಲುವೆ?

7

ಅಂಬಾರಿ ಇಳಿಯುವಳೆ ಚೆಲುವೆ?

Published:
Updated:
ಅಂಬಾರಿ ಇಳಿಯುವಳೆ ಚೆಲುವೆ?

`ಸಿನಿಮಾ ಕ್ಷೇತ್ರದಲ್ಲಿ ಹೆಣ್ಣುಮಕ್ಕಳನ್ನು ತುಂಬಾ ಹಗುರವಾಗಿ ನೋಡುತ್ತಾರೆ. ಅವರಿಗೆ ಕನಿಷ್ಠ ಮಟ್ಟದ ಗೌರವವೂ ಸಿಗುತ್ತಿಲ್ಲ. ನಾಯಕಿ ಎಂದು ನಮ್ಮನ್ನು ಗೌರವಿಸುವುದು ಬೇಡ, ಹೆಣ್ಣು ಎಂಬ ಗೌರವವೂ ಇಲ್ಲದಿದ್ದರೆ ಹೇಗೆ? ಎಲ್ಲರೂ ತುಂಬಾ ಸಲಿಗೆಯಿಂದ ಮಾತನಾಡಿಸುವುದು ನನಗೆ ಇಷ್ಟವಾಗಲ್ಲ.ಅದಕ್ಕೇ ಒಮ್ಮಮ್ಮೆ ಕಿರುತೆರೆಯ ಕಡೆಗೆ ಹೊರಳಬೇಕೆಂಬ ಮನಸ್ಸಾಗುತ್ತದೆ. ಹೆಣ್ಣುಮಕ್ಕಳನ್ನು ಗೌರವದಿಂದ ಕಾಣುವ ಕಿರುತೆರೆ ಸಿನಿಮಾಗಿಂತ ಎಷ್ಟೋ ಉತ್ತಮ...~ಹಿರಿತೆರೆಯ ನಟಿ ಹೀಗೆ ಮಾತನಾಡುವುದೇ ದೊಡ್ಡ ಅಚ್ಚರಿ. ಆದರೆ, ನಾಯಕಿ ಸುಪ್ರೀತಾಗೆ ಅಷ್ಟು ಬೇಸರವಾದಂತಿದೆ. ಅದಕ್ಕೇ ಅವರು ಸಿನಿಮಾ ಅಂಬಾರಿ ಇಳಿದು ಕಿರುತೆರೆಯ ಹಾದಿಯಲ್ಲಿ ನಡೆಯುವ ಯೋಚನೆ ಮಾಡುತ್ತಿರಬಹುದು. ಉದ್ಯಮದಲ್ಲಿ ಒಬ್ಬರೊಂದಿಗೆ ಆಡಿದ ಮಾತು ಕ್ಷಣ ಮಾತ್ರದಲ್ಲಿಯೇ ಹಲವರಿಗೆ ತಲುಪುವ ಬಗ್ಗೆಯೂ ಅವರಿಗೆ ಅಸಮಾಧಾನವಿದೆ.ತುಂಬುಗೆನ್ನೆಯ, ಅಬೋಧ ಕಣ್ಣುಗಳ ಬಾಲೆ ಸುಪ್ರೀತಾ. `ಅಂಬಾರಿ~ಯಲ್ಲಿ ಕುಳಿತು ಚಿತ್ರರಂಗ ಪ್ರವೇಶಿಸಿದ ಈ ಚೆಲುವೆಗೆ ನಂತರ ಸಿಕ್ಕ ಅವಕಾಶಗಳು ಹೇಳಿಕೊಳ್ಳುವಂಥವಲ್ಲ. ತನ್ನಿಷ್ಟದ ಪಾತ್ರಗಳು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ನಟನೆಯಲ್ಲಿ ತೊಡಗಿಸಿಕೊಂಡಿರುವ ಸುಪ್ರೀತಾ, ಮಾತಿನಲ್ಲಿ ಸಿಹಿಗಿಂತ ಕಹಿಯೇ ಜಾಸ್ತಿ.

 

ಮೊದಲ ಚಿತ್ರ `ಅಂಬಾರಿ~ಗೆ ಆಯ್ಕೆಯಾದಾಗ ಸುಪ್ರೀತಾ ದ್ವಿತೀಯ ಪಿಯುಸಿ ಓದುತ್ತಿದ್ದರು. ಚಿತ್ರ ನೂರು ದಿನಗಳ ಪ್ರದರ್ಶನ ಕಂಡು ಮೆಚ್ಚುಗೆ ಪಡೆದ ನಂತರವೂ ಈ ಮಂಗಳೂರು ಹುಡುಗಿ ಬೆಂಗಳೂರಿಗೆ ಬಂದು ನೆಲೆಸಲಿಲ್ಲ. ದೂರಶಿಕ್ಷಣದ ಮೂಲಕ ಪದವಿ ಕಲಿಯತೊಡಗಿರುವ ಅವರು, ಇಷ್ಟವಾದ ಪಾತ್ರಗಳಲ್ಲಿ ನಟಿಸುವುದನ್ನೂ ಮುಂದುವರಿಸಿದ್ದಾರೆ.ಸುಪ್ರೀತಾ ನಟನೆಯ `ಪೆರೋಲ್~ ಕೊಂಚ ಹೆಸರು ಮಾಡಿತಾದರೂ, `ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೆ~, `ಪುತ್ರ~ ವೈಫಲ್ಯ ಕಂಡವು. `ಪೆರೋಲ್ ಚಿತ್ರದ ಕತೆ ಚೆನ್ನಾಗಿತ್ತು.`ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೆ~ ಚಿತ್ರವನ್ನು ಪ್ರಶಸ್ತಿ ವಿಜೇತ ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೋ ನಿರ್ದೇಶಿಸಿದ್ದರು. `ಪುತ್ರ~ ಒಳ್ಳೆಯ ಸಬ್ಜೆಕ್ಟ್ ಇದ್ದ ಸಿನಿಮಾ. ಅದು ಸೋತದ್ದು ನೋವಾಯಿತು. ನಾನಂತೂ ಈ ಎಲ್ಲಾ ಚಿತ್ರಗಳನ್ನು ಎಂಜಾಯ್ ಮಾಡಿದೆ.ಆದರೆ ಅವು ಎಲ್ಲಿ ಎಡವಿದವೋ ತಿಳಿಯದು?~ ಎನ್ನುವ ಸುಪ್ರೀತಾಗೆ ಬಿಡುಗಡೆಗೆ ಸಿದ್ಧವಾಗಿರುವ `ನೆನಪಿನಂಗಳ~ ಮತ್ತು `ಮೊದಲ ಮಿಂಚು~ ಚಿತ್ರಗಳ ಬಗ್ಗೆ ಅದೇ ಭರವಸೆ ಇದೆ.`ಕೇಳದೆ ನಿಮಗೀಗ~ ಮತ್ತು `ರಣ~ ಚಿತ್ರೀಕರಣದಲ್ಲಿ ಬಿಜಿಯಾಗಿರುವ ಅವರಿಗೆ ಅವಕಾಶಗಳು ಸಿಗುತ್ತಿಲ್ಲ ಎಂಬ ಕೊರಗಿಲ್ಲ. ಮುಗ್ಧ, ಬೋಲ್ಡ್, ಗ್ರಾಮೀಣ ಹುಡುಗಿ, ಮೌನಿ, ಸೆಂಟಿಮೆಂಟ್, ಮಾರ್ಡನ್ ಹೀಗೆ ಕತೆಗೆ ತಕ್ಕಂತೆ ಪಾತ್ರಗಳನ್ನು ನಿರ್ವಹಿಸಿರುವ ಆಕೆ, ಕಲ್ಪನಾ ಮತ್ತು ರಾಜ್‌ಕುಮಾರ್ ಅಭಿನಯವನ್ನು ಮೆಚ್ಚುತ್ತಾರೆ.ಹಳೆಯ ಸಿನಿಮಾಗಳನ್ನು ನೋಡಿ, ನಟನೆಯನ್ನು ಗಮನಿಸುವುದರಿಂದ ಶೇ 50ರಷ್ಟು ನಟನೆಯನ್ನು ಸುಧಾರಿಸಿಕೊಳ್ಳಬಹುದು ಎಂದು ನಂಬಿರುವ ಸುಪ್ರೀತಾಗೆ ತರಬೇತಿಗಳಿಗಿಂತ ಹಿರಿಯ ನಟರನ್ನು ಗಮನಿಸುವುದೇ ನಿಜವಾದ ಪಾಠ ಎನಿಸಿದೆ.`ನನಗೆ ನಟಿಯಾಗಬೇಕೆಂಬ ಆಸಕ್ತಿ ಇರಲಿಲ್ಲ. ಆದರೆ ಅವಕಾಶ ಸಿಕ್ಕಾಗ ಅದನ್ನು ಬಿಡಲು ಮನಸ್ಸಾಗಲಿಲ್ಲ. ನನ್ನ ವಿಧಿ ಇಲ್ಲಿತ್ತು. ಅದರಿಂದ ಇಲ್ಲಿಗೆ ಬಂದೆ. ಇಲ್ಲಿಗೆ ಬಂದ ಮೇಲೆ ಆ ಕ್ಷೇತ್ರಕ್ಕೆ ನ್ಯಾಯ ಒದಗಿಸಬೇಕೆಂದು ದುಡಿಯುತ್ತಿರುವೆ~ ಎಂದು ಕಣ್ಣು ಅರಳಿಸುವ ಸುಪ್ರೀತಾಗೆ ಗ್ಲಾಮರಸ್ ಪಾತ್ರಗಳು ಇಷ್ಟವಿಲ್ಲವಂತೆ.`ಅವಕಾಶಗಳು ಬರದೇ ಇದ್ದರೂ ಚಿಂತೆ ಇಲ್ಲ. ಗ್ಲಾಮರಸ್ ಪಾತ್ರಗಳಲ್ಲಿ ನಟಿಸುವುದಿಲ್ಲ. ಅಂಥ ಪಾತ್ರಗಳನ್ನು ನಿರ್ವಹಿಸದಿದ್ದರೆ ಚಿತ್ರೋದ್ಯಮದಲ್ಲಿ ಉಳಿಗಾಲವಿಲ್ಲ ಎಂಬ ಪರಿಸ್ಥಿತಿ ಬಂದರೆ ಸಿನಿಮಾ ಕ್ಷೇತ್ರವನ್ನು ತೊರೆಯಲೂ ಸಿದ್ಧ~ ಎಂದು ಪಟಾಕಿ ಸಿಡಿಸುವ ಸುಪ್ರೀತಾಗೆ ಒಳ್ಳೆಯ ಸಿನಿಮಾದಲ್ಲಿ ನಟಿಸಿ, ಜನಮೆಚ್ಚುಗೆ ಪಡೆಯಬೇಕು ಎಂಬುದೇ ಧ್ಯೇಯವಾಕ್ಯ.ನೊಂದ ಹೆಣ್ಣುಮಕ್ಕಳನ್ನು ಪ್ರತಿನಿಧಿಸುವ, ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುವ, ಅರ್ಥಪೂರ್ಣ ಪಾತ್ರದೊಳಗೆ ಸೇರುವ, ಕಲಾತ್ಮಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ- ಹೀಗೆ, ಅನೇಕ ಆಸೆಗಳನ್ನು ಒಪ್ಪಿಸುವ ಸುಪ್ರೀತಾಗೆ ಉದ್ಯಮದಲ್ಲಿ ಹೆಣ್ಣುಮಕ್ಕಳಿಗೆ ಗೌರವ ಸಿಗುತ್ತಿಲ್ಲ ಎಂಬ ನೋವಿದೆ.ಇದೀಗ ಬಿ.ಕಾಂ ಮುಗಿಸಿರುವ ಸುಪ್ರೀತಾ ಉದ್ಯಮದಲ್ಲಿ ಒಳ್ಳೆಯ ಅವಕಾಶಗಳು ಬರದಿದ್ದರೆ ಗೌರವಾನ್ವಿತ ಹುದ್ದೆಯ ಕಡೆಗೆ ವಾಲುತ್ತಾರಂತೆ. `ಸಿನಿಮಾರಂಗದಲ್ಲಿ ಜೀವನವಿಡೀ ನಾಯಕಿಯಾಗಿರಲು ಸಾಧ್ಯವಿಲ್ಲ. ಒಂದು ವಯಸ್ಸಿನ ನಂತರ ಮದುವೆಯಾಗಬೇಕು.ಅದರಿಂದ ಒಳ್ಳೆಯ ಹೆಸರು ಉಳಿಸಿಕೊಳ್ಳಬೇಕು. ಮುಂದೆ ನಮ್ಮ ಜೀವನಕ್ಕೆ ತೊಂದರೆಯಾಗಬಾರದು ಎಂದರೆ ಇಂದು ಜವಾಬ್ದಾರಿಯುತವಾಗಿ ಹೆಜ್ಜೆ ಇಡಬೇಕು~ ಎಂದು ತಮ್ಮ ನಿರ್ಧಾರದ ಹಿಂದಿರುವ ದೂರದೃಷ್ಟಿಯನ್ನು ಅರುಹುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry