ಭಾನುವಾರ, ಜೂನ್ 20, 2021
21 °C

ಅಂಬಿಗರ ಚೌಡಯ್ಯ ಸಾಹಿತ್ಯ ಕ್ರೋಡೀಕರಣ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: 12ನೇ ಶತಮಾನದ ಶರಣ ಶ್ರೇಷ್ಠ ನಿಜ ಶರಣ ಅಂಬಿಗರ ಚೌಡಯ್ಯನವರು ರಚಿಸಿದ 280 ವಚನಗಳು ಮಾತ್ರ ಇದುವರೆಗೆ ಲಭ್ಯವಾಗಿದ್ದು, ಅವರ ಪರಿಪೂರ್ಣ ಸಾಹಿತ್ಯ ಇನ್ನೂ ಕ್ರೋಡೀಕರಣಗೊಳ್ಳಬೇಕಿದೆ. ಹೀಗಾಗಿ ಅಂಬಿಗರ ಚೌಡಯ್ಯನವರ ಸಾಹಿತ್ಯ ಯಾರಲ್ಲಾದರೂ ಇದ್ದಲ್ಲಿ ಕೂಡಲೇ ಗುಲ್ಬರ್ಗಾ ವಿಶ್ವವಿದ್ಯಾಲಯದ ಅಂಬಿಗರ ಚೌಡಯ್ಯನವರ ಅಧ್ಯಯನ ಪೀಠಕ್ಕೆ ತಲುಪಿಸುವಂತೆ ವಿಶ್ವವಿದ್ಯಾಲಯದ ಅಂಬಿಗರ ಚೌಡಯ್ಯನವರ ಅಧ್ಯಯನ ಪೀಠದ ನಿರ್ದೇಶಕಿ ಡಾ.ನಾಗಮ್ಮ ಬುಳ್ಳಾ ಮನವಿ ಮಾಡಿದರು.ತಾಲ್ಲೂಕಿನ ಗೋಲಗೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ನಿರ್ದಿಷ್ಟ ದಿನ ದೊರಕಿಲ್ಲ. ಅಲ್ಲದೇ ಈವರೆಗೂ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸದೇ ಇದ್ದುದು ಅಷ್ಟೇ ವಿಷಾದಕರ ಸಂಗತಿ ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರ್ಕಾರದ ಮಾಜಿ ಸಚೇತಕ ವಿಠ್ಠಲ ಹೆರೂರ ಮಾತನಾಡಿ, ಕಬ್ಬಲಿಗ ಸಮುದಾಯದ ಜನರಲ್ಲಿರುವ ಕೀಳರಿಮೆ, ಗುಲಾಮಗರಿ ಪ್ರವೃತ್ತಿ, ಮೂಢನಂಬಿಕೆಗಳು ದೂರವಾಗಬೇಕಿದೆ ಎಂದರು.ಸಮುದಾಯದ ಬಂಧುಗಳು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವುದು ತಮ್ಮ ಗುರುತರವಾದ ಜವಾಬ್ದಾರಿಯನ್ನು ಮರೆಯಕೂಡದು ಎಂದು ಸಲಹೆ ನೀಡಿದರು.ನಿರಂತರ ಹೋರಾಟದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿದ ಕಾರಣಕ್ಕಾಗಿಯೇ ಈಗ 13 ವಿಶ್ವವಿದ್ಯಾಲಯಗಳಲ್ಲಿ ಅಂಬಿಗರ ಚೌಡಯ್ಯನವರ ಅಧ್ಯಯನ ಪೀಠಗಳಿಗೆ ಮಂಜೂರಾತಿ ನೀಡಿದೆ. ಈಗ ನಾಲ್ಕು ಅಧ್ಯಯನ ಪೀಠಗಳಿಗೆ ಅನುದಾನ ಬಿಡುಗಡೆಗೊಳಿಸಿ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.ಇನ್ನೋರ್ವ ಮುಖ್ಯ ಅತಿಥಿ ಯುವ ಧುರೀಣ ಅಶೋಕ ಮನಗೂಳಿ ಅಂಬಿಗರ ಚೌಡಯ್ಯನವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರು ಎಲ್ಲ ಸಮುದಾಯವೂ ಗೌರವಿಸಲ್ಪಡುವ ಮಹಾನ್ ಶರಣರು ಎಂದು ಮಾತನಾಡಿದರು.ಸಮಾರಂಭವನ್ನು ಮಾಜಿ ಶಾಸಕ ಶರಣಪ್ಪ ಸುಣಗಾರ ಉದ್ಘಾಟಿಸಿ, ಅಂಬಿಗರ ಚೌಡಯ್ಯನವರಿಗೆ ಗೌರವ ಸಲ್ಲಬೇಕಾದರೆ ಕಬ್ಬಲಿಗ ಸಮುದಾಯದ ಯುವಕರು ದುಶ್ಷಟಗಳಿಂದ ಮುಕ್ತರಾಗಬೇಕು ಎಂದು ಹೇಳಿದರು.ಭೋವಿ ಸಮುದಾಯದ ಮುಖಂಡ ಅಶೋಕ ಒಡೆಯರ, ಕಬ್ಬಲಿಗ ಸಮುದಾಯದ ಧುರೀಣ ಶರಣಪ್ಪ ಕಣ್ಮೇಶ್ವರ, ಗೊಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಜಿ.ಎಂ.ಪಾಟೀಲ ಮಾಗಣಗೇರಿ, ಗುಲಬರ್ಗಾ ಜಿಪಂ ಸದಸ್ಯ ಪ್ರಕಾಶ ಜಮಾದಾರ, ದಲಿತ ನಾಯಕ ಮಲಕಣ್ಣ ಗಡಿಗೇನವರ, ಚಂದ್ರಕಾಂತ ಬೂದಿಹಾಳ, ವೀರೇಶ ಕೊಟಾರಗಸ್ತಿ, ಬಿ.ಎಂ. ದೂಳಬಾ, ಕಲ್ಯಾಣಿ ಯಂಕಂಚಿ ಮಾತನಾಡಿದರು.ಶಾಂತಗಂಗಾಧರ ಸ್ವಾಮೀಜಿ, ಮುನೇಂದ್ರ ಶಿವಾಚಾರ್ಯರು, ಧರ್ಮದರ್ಶಿ ಹೊಳೆಪ್ಪನವರು ದೇವರಮನಿ ಸಾನ್ನಿಧ್ಯ ವಹಿಸಿದ್ದರು. ಪ್ರಭುಗೌಡ ಪಾಟೀಲ ಡಂಬಳ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರವುಳ್ಳ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.ಜಯಂತ್ಯುತ್ಸವದ ಸಂಘಟಕ, ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನಕಾರ್ಯದರ್ಶಿ ಮಲ್ಲು ಘತ್ತರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭರತೇಶ ಹಿರೊಳ್ಳಿ ನಿರೂಪಿಸಿದರು. ಗೊಲ್ಲಾಳಪ್ಪ ನಾಯ್ಕೋಡಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.