ಅಂಬಿ ಅಂಬರ

7

ಅಂಬಿ ಅಂಬರ

Published:
Updated:
ಅಂಬಿ ಅಂಬರ

ಅಲ್ಲಿನ ಬೃಹತ್ ಪರದೆಯ ಮೇಲೆ `ಒಂಟಿ ಸಲಗ~ದ ಬದುಕಿನ ಚಿತ್ರ ಓಡುತ್ತಿತ್ತು. ಒಬ್ಬ ಕಲಾವಿದ, ಒಬ್ಬ ರಾಜಕಾರಣಿ, ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಅಪ್ಪಟ ಮನುಷ್ಯ ಮೂಡಿ ಬರುತ್ತಿದ್ದರು. ಒಂದು ಕೈಯಲ್ಲಿ ಸಿಗರೇಟು ಮತ್ತೊಂದು ಕೈಯಲ್ಲಿ ಕ್ಯಾಮೆರಾ... ಅದು ಅಂಬರೀಷ್, ಅರವತ್ತರ ಅಂಬರೀಷ್.ಇದೇ 29ರಂದು ಅವರ ಜನ್ಮದಿನಾಚರಣೆ ಅರಮನೆ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಅಂದಿನಿಂದ ಮೂರು ದಿನಗಳ ಕಾಲ ಅಂಬಿ ಮನೆಗೆ ಸಮೀಪ ಇರುವ ಜೆ.ಪಿ.ನಗರದ ದುರ್ಗಾಪರಮೇಶ್ವರಿ ಆಟದ ಮೈದಾನದಲ್ಲಿ ಅವರ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಅಲ್ಲದೆ ಅಂಬಿ ಅವರಿಗೆ ಅಕ್ಷರ ನಮನ ಸಲ್ಲಿಸಲು `ಅಂಬರ~ ಹೆಸರಿನ ಅಭಿನಂದನಾ ಗ್ರಂಥ ರೂಪುಗೊಳ್ಳುತ್ತಿದೆ. `ಅಂಬಿ ಸಂಭ್ರಮ~ ಅಭಿನಂದನಾ ಸಮಾರಂಭದ ನೇತೃತ್ವ ವಹಿಸಿರುವವರು ನಿರ್ದೇಶಕ ಎಸ್.ನಾರಾಯಣ್. ಈ ಹೊಣೆ ಹೊತ್ತಾಗ ಅವರಿಗೆ ಅದೆಲ್ಲಾ ತುಂಬಾ ಕಷ್ಟದ ಕೆಲಸ ಅನ್ನಿಸಿರಲಿಲ್ಲ. ಆದರೆ ಅಂಬರೀಷ್ ಅವರ ಸ್ನೇಹ ಸಾಗರ ಅವರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ. ದೇಶ ವಿದೇಶಗಳಲ್ಲಿರುವ ಅವರ ಸ್ನೇಹಿತರಿಗೆ ಕರೆಯೋಲೆ ಕಳಿಸುವಾಗ, ಕಾರ್ಯಕ್ರಮದ ಪೂರ್ವ ತಯಾರಿಯನ್ನು ನೋಡುವಾಗ ಅಂಬಿ ಬದುಕನ್ನು ಇನ್ನಷ್ಟು ಹತ್ತಿರದಿಂದ ನೋಡಿದ ಅನುಭವ ಅವರಿಗೆ ಆಗಿದೆ. ಅವರು ಕಾರ್ಯಕ್ರಮದ ರಿಹರ್ಸಲ್‌ನ ವಿವರ ನೀಡಿದರು. `ಅಂಬಿ ಬಿಂಬ~ ಛಾಯಾಗ್ರಹಣ ಪ್ರದರ್ಶನ ಹಾಗೂ `ಅಂಬರ~ ಅಭಿನಂದನಾ ಗ್ರಂಥದ ತಂಡಗಳಿಗೆ ಶುಭ ಹಾರೈಸಿದರು.

ಹತ್ತು ಸಾವಿರ ಚದರ ಅಡಿ ವಿಸ್ತೀರ್ಣದ ದುರ್ಗಾಪರಮೇಶ್ವರಿ ಮೈದಾನದಲ್ಲಿ ಛಾಯಾಚಿತ್ರ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಅಂಬಿ ಅವರ ಆರಂಭದ ಬದುಕು, ಚಿತ್ರರಂಗ ಪ್ರವೇಶ, ಖಳನಾಯಕನಾಗಿ ಮಿಂಚಿದ್ದು, ನಂತರ ನಾಯಕನಾಗಿ ಬದಲಾದದ್ದು, ದಿನಗಳೆದಂತೆ ಚಿತ್ರರಂಗದ ದೊಡ್ಡಣ್ಣನಾಗಿ ಬೆಳೆದದ್ದನ್ನು ಸಚಿತ್ರವಾಗಿ ದಾಖಲಿಸಲಾಗುತ್ತಿದೆ. ಅಲ್ಲದೆ ಅವರ ರಾಜಕೀಯ ರಂಗವನ್ನೂ ಛಾಯಾಚಿತ್ರಗಳು ಉಲ್ಲೇಖಿಸಲಿವೆ. ಮಂಡ್ಯ ಸಂಸದರಾಗಿ, ಕೇಂದ್ರ ಸಚಿವರಾಗಿ, ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆಯನ್ನು ಚಿತ್ರಗಳ ಮುಖಾಂತರ ಸ್ಮರಿಸಲಾಗುತ್ತಿದೆ.ಪ್ರದರ್ಶನದಲ್ಲಿ ಬೃಹತ್ ಬ್ಲೋಅಪ್‌ಗಳಿವೆ. ಅಲ್ಲದೆ 24/10 ಅಡಿ ವಿಸ್ತೀರ್ಣದ ದೊಡ್ಡ ತೆರೆಯ ಮೇಲೆ ಅಂಬರೀಷ್ ಸಾಕ್ಷ್ಯಚಿತ್ರ ಮೂಡಿ ಬರಲಿದೆ. ಅಂಬಿ ಅವರ ಹತ್ತಿರದ ಸಂಬಂಧಿಗಳು, ಅವರ ಒಡನಾಡಿಗಳು, ಸಹಪಾಠಿಗಳು, ಚಿತ್ರರಂಗದ ಗಣ್ಯರು ಆಡಿರುವ ಮಾತುಗಳು ಕೂಡ ಅಲ್ಲಿ ಮೂಡಿ ಬರಲಿವೆ. ಅಂಬಿ ಬಿಂಬದ ಪ್ರಮುಖ ರೂವಾರಿ ಚಿತ್ರಲೋಕ ಡಾಟ್‌ಕಾಂನ ಕೆ.ಎಂ.ವೀರೇಶ್. ಇಂಥ ಪ್ರದರ್ಶನ ಏರ್ಪಡಿಸಬೇಕು ಎಂಬ ಬಯಕೆ ಅವರೊಳಗೆ ಮೊಳಕೆಯೊಡೆದದ್ದು ಆಕಸ್ಮಿಕವಾಗಿ; `ಅಂಬರ~ ಗ್ರಂಥಕ್ಕೆ ಛಾಯಾಚಿತ್ರಗಳನ್ನು ಒದಗಿಸುವಾಗ.ಪ್ರದರ್ಶನದಲ್ಲಿ ಅಂಬಿ ಬದುಕನ್ನು ಆಧರಿಸಿ ವಿಶಿಷ್ಟ ವಿಭಾಗಗಳನ್ನು ಮಾಡಲಾಗಿದೆ. ಅಂಬರೀಷ್ ಬಾಲ್ಯ ಹಾಗೂ ಕಾಲೇಜು ದಿನಗಳನ್ನು ಬಿಂಬಿಸುವ ಛಾಯಾಚಿತ್ರ ವಿಭಾಗಕ್ಕೆ `ಅಮರನಾಥ್~, ತಂದೆ ತಾಯಿ ಸೋದರರ ಜತೆಗಿನ ಒಡನಾಟ ಕುರಿತ ಛಾಯಾಚಿತ್ರಗಳಿಗೆ `ಒಡ ಹುಟ್ಟಿದವರು~, ಪುಟ್ಟಣ್ಣ ಕಣಗಾಲ್ ಜತೆಗಿನ ನಂಟನ್ನು ತೋರಿಸಲು `ಗುರು~, ಡಾ.ರಾಜ್ ಆಪ್ತತೆಗೆ `ಅಣ್ಣಾವ್ರ~, ವಿಷ್ಣುವರ್ಧನ್ ಸ್ನೇಹವನ್ನು ಬಿಂಬಿಸಲು `ಸ್ನೇಹದ ಸಂಕೋಲೆ~, ಅಭಿಮಾನಿಗಳ ಪ್ರೀತಿಗೆ `ಮಧುರ ಬಾಂಧವ್ಯ~ ಕೌಟುಂಬಿಕ ಜೀವನ ಚಿತ್ರಣಕ್ಕೆ `ಹೃದಯ ಹಾಡಿತು~, ರಾಜಕೀಯ ಬದುಕನ್ನು ಉಣಬಡಿಸಲು `ಪ್ರಜಾಪ್ರಭುತ್ವ~ ಕೇಂದ್ರದಲ್ಲಿ ಸಚಿವರಾಗಿದ್ದ ದಿನಗಳನ್ನು ನೆನಪು ಮಾಡಿಕೊಳ್ಳಲು ನ್ಯೂಡೆಲ್ಲಿ, ಸ್ನೇಹಿತರ ಸ್ನೇಹಿತನಾಗಿ `ಸ್ನೇಹ ಸಂಬಂಧ~, ನಿರ್ದೇಶಕರ ಜತೆಗಿನ ಸಂಬಂಧವನ್ನು ವಿವರಿಸಲು `ಆಪದ್ಭಾಂದವ~ ಎಂದು ವರ್ಗೀಕರಿಸಲಾಗಿದೆ.`ಅಂಬರ~ವನ್ನು ರೂಪಿಸುತ್ತಿರುವುದು ಗಂಗ ಪ್ರಕಾಶನ. ವಿಶಾಲಾಕ್ಷಿ ನಾರಾಯಣಗೌಡರು ಗ್ರಂಥದ ಸಂಪಾದಕರು ಪ್ರಕಾಶಕರು. ಸಂಪಾದಕ ಮಂಡಳಿಯಲ್ಲಿ ದುಡಿಯುತ್ತಿರುವವರು ಕನ್ನಡವೇ ಸತ್ಯ ರಂಗಣ್ಣ, ಭಾನುಮತಿ. ಜೂನ್ ಮೊದಲ ವಾರದಲ್ಲಿ `ಅಂಬರ~ ಬಿಡುಗಡೆಯಾಗಲಿದೆ ಎಂದರು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡರು. ರಾಮಲಿಂಗಯ್ಯ ಗ್ರಂಥಕ್ಕೆ ಅಗತ್ಯವಾದ ಸಹಕಾರ ನೀಡುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry