ಮಂಗಳವಾರ, ಮೇ 18, 2021
28 °C

ಅಂಬೇಡ್ಕರ್ ಜಯಂತಿ:ನನಸಾಗದ ಸಾಮಾಜಿಕ ನ್ಯಾಯದ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಕನಸು ಇಂದಿಗೂ ನನಸಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ವಸಂತ ಅಸ್ನೋಟಿಕರ್ ವಿಷಾದ ವ್ಯಕ್ತಪಡಿಸಿದರು.

ನಗರದ ತರಾಸು ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯ ಪೂರ್ವದಲ್ಲಿ ಅಂಬೇಡ್ಕರ್ ಅಂದಿನ ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಿದ್ದ ಸಮಯದಲ್ಲಿಯೇ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹಿಂದುಳಿದವರ ಮತ್ತು ಶೋಷಿತರ ವರ್ಗದವರ ಪರವಾಗಿ ಹೋರಾಟ ಮಾಡಿದ್ದರು. ಆದರೆ, ಅವರ ಸಾಮಾಜಿಕ ನ್ಯಾಯದ ಕನಸು ಕನಸಾಗಿಯೇ ಉಳಿದಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಸಮಾಜದಲ್ಲಿ ಸಮಾನತೆ ತರುವ ಮೂಲಕ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಲು ಮುಂದಾಗಬೇಕಿದೆ ಎಂದರು.ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಪರಿಶಿಷ್ಟಜಾತಿಯ ಅಭಿವೃದ್ಧಿಗಾಗಿ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರವಾರು ರೂ 1 ಕೋಟಿ ವಿಶೇಷ ಅನುದಾನ ನೀಡಿದೆ. ವಿವಿಧ ತಾಲ್ಲೂಕುಗಳಲ್ಲಿ ಅಂಬೇಡ್ಕರ್ ಭವನ, ಬಾಬಾ ಜಗಜೀವನ್ ರಾಂ ಮತ್ತು ಅಂಬೇಡ್ಕರ್ ಪ್ರತಿಮೆಗಳ ನಿರ್ಮಾಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಸವಲತ್ತು ಕಲ್ಪಿಸಲು ಹಣ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.ಉಪನ್ಯಾಸ ನೀಡಿದ ಮೈಸೂರಿನ ಎ.ಕೆ. ಹಂಪಣ್ಣ ಅವರು, ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ, ಸಂಘಟನಾತ್ಮಕ ಶಕ್ತಿ ಕುರಿತ ಹಲವು ವಿಚಾರಧಾರೆಗಳನ್ನು ಇಂದಿನ ಯುವಜನರಲ್ಲಿ ಅರಿವು ಮೂಡಿಸಬೇಕಿದೆ. ಪ್ರಸ್ತುತ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಓದುವ ಹವ್ಯಾಸ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮಹನೀಯರ ಜಯಂತಿಗಳನ್ನು ಕೇವಲ ಆಚರಣೆಗೆ ಸಿಮೀತಗೊಳಿಸದೆ ಅವರ ಆದರ್ಶಗಳ ಕುರಿತಾದ ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಸೂಕ್ತ ಎಂದರು.ಅಭಿಮಾನ ಮತ್ತು ಸ್ವಾಭಿಮಾನದ ಪಾಠ ಕಲಿಸಿದವರು ಅಂಬೇಡ್ಕರ್. ವಿದೇಶದಲ್ಲಿ ಉನ್ನತ ವ್ಯಾಸಂಗ ಪೂರೈಸಿ ದೇಶಕ್ಕೆ ಹಿಂತಿರುಗಿದ ನಂತರವೂ ಅವರನ್ನು ಅಸ್ಪೃಶ್ಯತನದಿಂದ ಕಂಡರೂ ಅವರು ಸ್ವಾಭಿಮಾನ ಮಾತ್ರ ಬಿಡಲಿಲ್ಲ. ಪ್ರಸ್ತುತ ದಿನಗಳಲ್ಲಿ ದಲಿತರು ಶಿಕ್ಷಣ ಪಡೆದಿದ್ದರೂ ಸಹ ಸಮಾಜದಲ್ಲಿ ಅವಮಾನಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ, ದಲಿತರು ಸ್ವಾಭಿಮಾನ ಬೆಳೆಸಿಕೊಂಡು ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸುವ ಮೂಲಕ ಬದುಕಿನಲ್ಲಿ ಸಫಲತೆ ಕಾಣಬೇಕು ಎಂದು ಸಲಹೆ ನೀಡಿದರು.    ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ. ಜಯಣ್ಣ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಮಹಾರಾಷ್ಟ್ರದಲ್ಲಿ `ವತನ್~ ಪದ್ಧತಿ ವಿರುದ್ಧ ಹೋರಾಟ ಮಾಡಿ ಮೂಲ ಗೇಣಿದಾರರಿಗೆ ಭೂಮಿ ನೀಡಬೇಕೆಂದು ಅಂದಿನ ಕಾಲದಲ್ಲಿಯೇ ಹೋರಾಟ ಮಾಡಿದವರು.ಇವರು ದೇವಸ್ಥಾನ ಪ್ರವೇಶ ನಿರಾಕರಣೆ ವಿರುದ್ಧ ಹೋರಾಟ ಮಾಡಿ ಅಸ್ಪಶ್ಯತೆ ವಿರುದ್ದವಾಗಿ ನಿರಂತರ ಹೋರಾಟ ನಡೆಸಿಕೊಂಡು ಬಂದವರು. ಸಂವಿಧಾನದಡಿ ನೀಡಲಾಗಿರುವ ಈಗಿನ ಮೀಸಲಾತಿ 1934ರಲ್ಲಿ ನಡೆದ ಪೂನಾ ಒಪ್ಪಂದದ ಫಲವಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಈಗಲೂ ಅಸ್ಪಶ್ಯತೆಯಂತಹ ಕೆಟ್ಟ ಆಚರಣೆ ಜೀವಂತವಾಗಿದೆ. ಇದನ್ನು ಶಾಶ್ವತವಾಗಿ ಹೋಗಲಾಡಿಸಿ ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಮನೋಭಾವ ಬೆಳೆಸಬೇಕಾಗಿದೆ ಎಂದರು.ಸಂಸದ ಜನಾರ್ದನಸ್ವಾಮಿ ಮಾತನಾಡಿ,  ತತ್ವ ಸಿದ್ದಾಂತ ಜೀವಂತವಾಗಿರಬೇಕೆ ವಿನಃ ಅಸಮಾನತೆ, ಅಸ್ಪಶ್ಯತೆಯಲ್ಲ. ಇಂದಿಗೂ ಸಹ ಅಸ್ಪಶ್ಯತೆ ಜೀವಂತವಾಗಿರುವುದು ದುರ್ದೈವದ ಸಂಗತಿಯಾಗಿದೆ. ಅನಕ್ಷರತೆ, ನಿರುದ್ಯೋಗ, ಬಡತನಗಳ ಮಧ್ಯೆ ಒಂದಕ್ಕೊಂದು ಸಂಬಂಧವಿದೆ. ಸಮಸ್ಯೆಗಳಿಂದ ಹೊರಬರಲು ಹಾಗೂ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದಲು ಶಿಕ್ಷಣವಂತರಾಗಿ ಅಸ್ಪೃಶ್ಯತೆ, ಅನಕ್ಷರತೆ ದೂರವಾಗಬೇಕಾಗಿದೆ ಎಂದರು.ಶಾಸಕ ಎಸ್.ಕೆ. ಬಸವರಾಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಜಯರಾಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಂ. ನಾಗರಾಜ್, ತಹಶೀಲ್ದಾರ್ ಕುಮಾರಸ್ವಾಮಿ, ಜಿ.ಪಂ. ಅಧ್ಯಕ್ಷ ಟಿ. ರವಿಕುಮಾರ್, ಸದಸ್ಯ ಡಿ. ರಮೇಶ್, ತಾ.ಪಂ. ಅಧ್ಯಕ್ಷ ಪರಮೇಶ್ವರ್, ಉಪಾಧ್ಯಕ್ಷೆ ಪ್ರತಿಭಾ ರಮೇಶ್, ನಗರಸಭೆ ಪೌರಾಯುಕ್ತ ವಿಜಯಕುಮಾರ್, ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್ ಇತರರು ಹಾಜರಿದ್ದರು.ಗಂಜಿಗಟ್ಟೆ ಕೃಷ್ಣಮೂರ್ತಿ ನಾಡಗೀತೆ ಹಾಡಿದರು. ಸಮಾಜ ಕಲ್ಯಾಣ ಇಲಾಖೆಯ ಆನಂದ್ ಸ್ವಾಗತಿಸಿದರು. ಕೆ. ವೆಂಕಣ್ಣಚಾರ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ರಂಗಮಂದಿರದವರೆಗೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದ ಜತೆಗೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.