ಶುಕ್ರವಾರ, ಮೇ 14, 2021
32 °C

ಅಂಬೇಡ್ಕರ್ ದಲಿತರ ಆಶಾಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ರಾಷ್ಟ್ರದಲ್ಲಿ ಅಸಮಾನತೆ, ಅಸ್ಪೃಶ್ಯತೆ, ಮೌಢ್ಯತೆಗಳು ತಾಂಡವವಾಡುತ್ತಿರುವ ವಿರುದ್ಧ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದ ರಾಷ್ಟ್ರಕ್ಕೆ ಸಂವಿಧಾನದ ಮೂಲಕ ಮಹಾನ್ ಕೊಡುಗೆ ನೀಡಿದ್ದಾರೆ. ಪ್ರಸ್ತುತ ದಿನಮಾನಗಳಲ್ಲು ಕೂಡ ಅಂಬೇಡ್ಕರ್ ಅವರು ದಲಿತರ ಆಶಾಕಿರಣವಾಗಿದ್ದಾರೆ ಎಂದು ಸಹಾಯಕ ಆಯುಕ್ತ ಟಿ. ಯೊಗೇಶ ಅಭಿಮತ ವ್ಯಕ್ತಪಡಿಸಿದರು.ಶನಿವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಭಾರತದ ಮೊದಲ ಕಾನೂನು ಸಚಿವರಾಗಿದ್ದ ಅಂಬೇಡ್ಕರ್ ಅವರು, ಸಮಾಜದಲ್ಲಿ ನಡೆಯುತ್ತಿರುವ ಅಂಕುಡೊಂಕುಗಳನ್ನು ಮನಗೊಂಡಿದ್ದರು. ಅವರ ಅನುಭವಗಳ ಸರಮಾಲೆಗಳು ಸಂವಿಧಾನದ ಕಲಂಗಳಾಗಿ ಮಾರ್ಪಟ್ಟಿವೆ. ಅಂತಹ ಧೀಮಂತ ನಾಯಕರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವಂತೆ ಮನವಿ ಮಾಡಿದರು.ಶಾಸಕ ಮಾನಪ್ಪ ವಜ್ಜಲ, ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಆರ್. ಮಾನಸಯ್ಯ, ಕವಿ ಪ್ರಮೋದ ತುರ್ವಿಹಾಳ ಮಾತನಾಡಿ, ದಲಿತ ಸಮುದಾಯದ ಕಡು ಬಡತನದಲ್ಲಿ ಜನಿಸಿದ್ದ ಅಂಬೇಡ್ಕರ್ ಅವರು, ಈ ನಾಡು ಕಂಡರಿಯದಂತಹ ವಿಚಾರಧಾರೆಗಳನ್ನು ಸಂವಿಧಾನದ ಮೂಲಕ ಕೊಡುಗೆಯಾಗಿ ನೀಡಿದ್ದಾರೆ. ಅಂಬೇಡ್ಕರ್ ಅವರನ್ನು ಯಾವುದೇ ಒಂದು ಜಾತಿ, ಜನಾಂಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರನ್ನು ರಾಷ್ಟ್ರ ನಾಯಕರನ್ನಾಗಿ ಗೌರವ ಭಾವದಿಂದ ಕಾಣುವಂತೆ ವಿವರಿಸಿದರು.ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತ್ಯುತ್ಸವ ಅಂಗವಾಗಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ಭಾವಚಿತ್ರದ ಮೆರವಣಿಗೆಗೆ ಗೈರು ಹಾಜರಿದ್ದು, ವಿಶೇಷ ಉಪನ್ಯಾಸದ ಬಹಿರಂಗ ಸಭೆಗೆ ತಡವಾಗಿ ಆಗಮಿಸಿದ ಶಾಸಕ ಮಾನಪ್ಪ ವಜ್ಜಲ ಅವರ ನಿರ್ಲಕ್ಷ್ಯ ವಿರೋಧಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಧಿಕ್ಕಾರ ಹಾಕುವ ಮೂಲಕ ಎಚ್ಚರಿಕೆ ಸಂದೇಶ ನೀಡಿರುವುದು ಕಂಡು ಬಂದಿತು.ಮೆರವಣಿಗೆ: ವಿಶೇಷ ಉಪನ್ಯಾಸದ ಬಹಿರಂಗ ಸಭೆಗೆ ಮುಂಚೆ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಅಲಂಕೃತಗೊಳಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರು, ಸಿಬ್ಬಂದಿ, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ಡೊಳ್ಳು ಮೇಳ, ಭಾಜಾ ಭಜಂತ್ರಿ ಸೇರಿದಂತೆ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದುಕೊಟ್ಟವು.ತಾಪಂ ಅಧ್ಯಕ್ಷ ತಿಮ್ಮಣ್ಣ ನಾಯಕ, ಪುರಸಭೆ ಅಧ್ಯಕ್ಷೆ ದುರುಗಮ್ಮ ರಾಮಸ್ವಾಮಿ. ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಂಬನಗೌಡ ಕಾಚಾಪುರ, ತಹಸೀಲ್ದಾರ ಜಿ. ಮುನಿರಾಜಪ್ಪ. ಪೊಲೀಸ್ ಉಪ ವಿಭಾಗಾಧಿಕಾರಿ ಡಿ.ಎ. ಸೂರ್ಯವಂಶಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ. ಮಹಾದೇವಯ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.