ಮಂಗಳವಾರ, ಮೇ 18, 2021
30 °C

ಅಂಬೇಡ್ಕರ್ ಪುತ್ಥಳಿ ಅನಾವರಣ ವಿಳಂಬ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಇಲ್ಲಿನ ಬಸ್ ನಿಲ್ದಾಣದ ಹತ್ತಿರ ಇರುವ ಅಂಬೇಡ್ಕರ್ ವೃತ್ತದಲ್ಲಿ ಉದ್ದೇಶಿತ ಡಾ. ಅಂಬೇಡ್ಕರ್ ಪುತ್ಥಳಿಯನ್ನು ಅನಾವರಣ ಮಾಡಲು ಪುರಸಭೆ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಪುರಸಭೆಗೆ ಮುಳ್ಳು ಹಚ್ಚಿ ಪ್ರತಿಭಟನೆ ನಡೆಸಿದರು.ಪುರಸಭೆ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸ್ ಇನ್ಸ್ ಪೆಕ್ಟರ್ ಟಿ. ಜೆ. ದೊಡ್ಡಮನಿ ಸಮಾಧಾನ ಪಡಿಸಿ ಮುಳ್ಳು ಬೇಲಿ ತೆಗೆದು ಕಚೇರಿ ಕೆಲಸಕ್ಕೆ ಅನುವು ಮಾಡಿಕೊಡಿ. ಬೇಕಾದರೆ ಧರಣಿ ಮುಂದುವರೆಸಿ ಎಂದು ಮನವಿ ಮಾಡಿದರು.ಪುರಸಭೆ ಅಧ್ಯಕ್ಷ ಚಂದ್ರಶೇಖರ ಹಸನಾಪುರ್, ಸದಸ್ಯ ವೇಣುಮಾಧವನಾಯಕ್, ಮುಖ್ಯಾಧಿಕಾರಿ ಶಿವುಕುಮಾರಸ್ವಾಮಿ ಮನವೊಲಿಸಲು ಯತ್ನಿಸಿದರೂ ಸಫಲವಾಗಲಿಲ್ಲ.ಅಂಬೇಡ್ಕರ್ ಪುತ್ಥಳಿಯನ್ನು ಮುಂಬಯಿಯಲ್ಲಿ ಮಾಡಲು ಹಾಕಿದ್ದೇವೆ. ಪುತ್ಥಳಿ ಸಿದ್ಧವಾಗಿದೆ. ಅಂಬೇಡ್ಕರ್ ಜಯಂತಿಯ ದಿನ ಅನಾವರಣ ಮಾಡುತ್ತೇವೆ ಎಂದು ಪುರಸಭೆ ಸಿಬ್ಬಂದಿ ಹೇಳುತ್ತಿದ್ದಾರೆ. ಆದರೆ ಜಯಂತಿಗೆ ಇನ್ನು 4 ದಿನ ಮಾತ್ರ ಬಾಕಿಯಿದೆ. ಇದುವರೆಗೂ ಪುತ್ಥಳಿ ತಂದಿಲ್ಲ. ಪುರಸಭೆ ಸಿಬ್ಬಂದಿ ಮತ್ತು ಸದಸ್ಯರು ಪೊಳ್ಳು ಆಶ್ವಾಸನೆ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.ತಕ್ಷಣ ವಾಹನ ತರಿಸಿ ಮುಂಬಯಿಗೆ ಹೋಗೋಣ ನಾವೂ ಬರುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಆದರೆ ಕೊನೆಗೂ ಮಣಿದ ಪುರಸಭೆ ಮುಖ್ಯಾಧಿಕಾರಿ ಮೂರು ಜನ ಸಿಬ್ಬಂದಿಯನ್ನು ಪುತ್ಥಳಿ ತರಲು ವಾಹನದೊಂದಿಗೆ ಕಳಿಸಿಕೊಟ್ಟರು.

 

ಜೈಭೀಮ ತರುಣ ಸಂಘದ ಅಧ್ಯಕ್ಷ ಲಕ್ಷ್ಮಣ ಕಟ್ಟಿಮನಿ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಾನಪ್ಪ ಕರಡಕಲ್, ದಲಿತ ಮುಖಂಡರಾದ ವಿರುಪಾಕ್ಷಿ ಕಟ್ಟಿಮನಿ, ರಮೇಶ ಅರಿಕೇರಿ, ಮಾಳಪ್ಪ ಕಿರದಳ್ಳಿ, ಚನ್ನಬಸ್ಸು ಬೊಮ್ಮನಳ್ಳಿ, ವೆಂಕಟೇಶ ಸುರಪುರಕರ್, ಹರೀಶ ಶಾಖಾನವರ್, ದುರ್ಗಪ್ಪ ಚಿಂಚೋಡಿ, ರಾಜೇಂದ್ರ ಭಂಡಾರಿ, ಮರೆಪ್ಪ ತೇಲ್ಕರ್, ಬಸವರಾಜ ಮಾಲಗತ್ತಿ, ಚೀರಂಜೀವಿ ಹುಣಸಿಹೊಳೆ, ಭೀಮು ಚಕ್ರವರ್ತಿ, ಮುಕುಲ್ ತೇಲ್ಕರ್, ಮಂಜುನಾಥ ಹೊಸಮನಿ, ಶರಣಪ್ಪ ವಾಗಣಗೇರಾ ಮತ್ತಿತರರು ಪ್ರತಿಭಟನೆಯಲ್ಲಿದ್ದರು.ಮಾತಿನ ಚಕಮಕಿ: ಪುತ್ಥಳಿ ಸಿದ್ಧವಾಗಿದೆ. ಶೀಘ್ರದಲ್ಲಿ ತರಿಸುತ್ತೇವೆ. ರೂ. 11 ಲಕ್ಷ ವೆಚ್ಚದಲ್ಲಿ ಮೂರ್ತಿ ಸಿದ್ಧವಾಗಿದೆ. 1.5 ಟನ್ ಭಾರವಿರುವ ಮೂರ್ತಿಯನ್ನು ಶೀಘ್ರದಲ್ಲಿ ಅನಾವರಣ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಹೇಳಿದಾಗ ಪ್ರತಿಭಟನಾಕಾರರು ಮಾತಿನ ಚಕಮಕಿಗೆ ಇಳಿದರು.ಎಷ್ಟು ದಿನ ಸುಳ್ಳು ಹೇಳುತ್ತೀರಿ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬಗ್ಗೆ ರಾಜಕೀಯ ಮಾಡುವುದು ತರವಲ್ಲ. ಮೂರ್ತಿ ಸ್ಥಾಪನೆ ಬಗ್ಗೆ ನೆಪ ಹೇಳುತ್ತಾ 2 ವರ್ಷಗಳು ಗತಿಸಿವೆ ಎಂದು ಪ್ರತಿಭಟನಾಕಾರರು ದೂರಿದರು. ಈ ಬಗ್ಗೆ ಪುರಸಭೆ ಸಿಬ್ಬಂದಿ, ಪುರಸಭೆ ಅಧ್ಯಕ್ಷ ಮತ್ತು ಪ್ರತಿಭಟನಾಕಾರರ ಮಧ್ಯೆ ವಾಕ್ಸಮರವೆ ನಡೆಯಿತು.ಕೊನೆಗೆ ತಹಸೀಲ್ದಾರ್ ಎಸ್. ಡಿ. ಗಣಾಚಾರಿ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು. ಮುಂಬಯಿಗೆ ವಾಹನ ಕಳಿಸಿ ಶೀಘ್ರದಲ್ಲಿ ಪುತ್ಥಳಿ ತರುವಂತೆ ಸೂಚಿಸಿದರು. ಎರಡು ದಿನದಲ್ಲಿ ಪುತ್ಥಳಿ ತರದಿದ್ದರೆ ಮತ್ತೆ ಹೋರಾಟ ಆರಂಭಿಸಲಾಗುವುದು ಎಂದು ಧರಣಿ ನಿರತರು ಎಚ್ಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.