ಅಂಬೇಡ್ಕರ್ ಭವನ: ಪ್ರತಿ ಜಿಲ್ಲೆಗೆ ರೂ 5 ಕೋಟಿ

7

ಅಂಬೇಡ್ಕರ್ ಭವನ: ಪ್ರತಿ ಜಿಲ್ಲೆಗೆ ರೂ 5 ಕೋಟಿ

Published:
Updated:

ಬೇಲೂರು: `ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಅಂಬೇಡ್ಕರ್ ಭವನ ನಿರ್ಮಿಸಲು ಪ್ರತಿ ಜಿಲ್ಲಾ ಕೇಂದ್ರಗೆ ಐದು ಕೋಟಿ ರೂಪಾಯಿ ಮತ್ತು ತಾಲ್ಲೂಕು ಕೇಂದ್ರಗಳಿಗೆ ಒಂದು ಕೋಟಿ ರೂಪಾಯಿ ನೀಡಲು ಉದ್ದೇಶಿಸಿದೆ~ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್.ಕೃಷ್ಣಮೂರ್ತಿ ಹೇಳಿದರು.ಪರಿಶಿಷ್ಟ ಜಾತಿ, ವರ್ಗದ ರಾಜ್ಯಮಟ್ಟದ ಸಮಾವೇಶದ ಹಿನ್ನೆಲೆಯಲ್ಲಿ ಭಾನುವಾರ ಇಲ್ಲಿಗೆ ಆಗಮಿಸಿದ್ದ ಅವರು ತಾಲ್ಲೂಕು ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ವರ್ಗದವರ ಕಲ್ಯಾಣಕ್ಕಾಗಿ ಮೊದಲ ಬಜೆಟ್‌ನಲ್ಲಿ 2960 ಕೋಟಿ, 2ನೇ ಬಜೆಟ್‌ನಲ್ಲಿ 3358 ಕೋಟಿ ಮತ್ತು 3ನೇ ಬಜೆಟ್‌ನಲ್ಲಿ 4633 ಕೋಟಿ ರೂ. ಹಣ ನೀಡಲಾಗಿದೆ ಎಂದರು.ದಲಿತ ಕಾಲೋನಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ 22 ಶಾಸಕರಿದ್ದು, ಇವರೆಲ್ಲರೂ ಈ ಜನಾಂಗದ ಏಳಿಗೆಗೆ ಶ್ರಮಿಸುತ್ತಿದ್ದಾರೆ.

 

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಯೂನಿಟ್‌ಗೆ ಒಂದು ಲಕ್ಷ ರೂಪಾಯಿಯಿಂದ 1.5ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಆದರೆ ಇದನ್ನು ಸಹಿಸದ ವಿರೋಧ ಪಕ್ಷಗಳು ಇಲ್ಲಸಲ್ಲದ ಟೀಕೆ ಮಾಡುತ್ತಿವೆ ಎಂದು ಆರೋಪಿಸಿದರು.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ 300 ಕಾರುಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಹಣವನ್ನು ಹೆಚ್ಚಿಸಲಾಗಿದೆ. ಬೇಲೂರು ತಾಲ್ಲೂಕಿನ 32 ಮಂದಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ನೀಡಲಾಗಿದೆ ಎಂದು ತಿಳಿಸಿದರು.ಬಿಜೆಪಿ ಎಸ್.ಸಿ. ಮೋರ್ಚಾ ವತಿಯಿಂದ ಮೈಸೂರಿ ನಲ್ಲಿ ಮೇ 18ರಂದು ಪರಿಶಿಷ್ಟ ಜಾತಿ ವರ್ಗದ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಕೃಷ್ಣೇಗೌಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ರೇಣುಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಇ.ಎಚ್.ಲಕ್ಷ್ಮಣ್, ಬಿಜೆಪಿ ಮುಖಂಡ ಬಿ.ಶಿವರುದ್ರಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪರ್ವತಯ್ಯ, ಶೇಖರಯ್ಯ, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಮುಖಂಡರಾದ ಎಚ್.ಎಂ.ಗೋವಿಂದಪ್ಪ, ಸುರೇಶ್‌ಬಾಬು, ಆನಂದ್, ರಮೇಶ್, ಭಾಸ್ಕರ್, ಜೈಶಂಕರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry