ಅಕಾಡೆಮಿಗಳಿಗೆ ಹೆಚ್ಚಿನ ಅನುದಾನ

7

ಅಕಾಡೆಮಿಗಳಿಗೆ ಹೆಚ್ಚಿನ ಅನುದಾನ

Published:
Updated:
ಅಕಾಡೆಮಿಗಳಿಗೆ ಹೆಚ್ಚಿನ ಅನುದಾನ

ಬೆಂಗಳೂರು: ಅಕಾಡೆಮಿಗಳಿಗೆ ಹೆಚ್ಚಿನ ಅನುದಾನ ಒದಗಿಸುವ ಬೇಡಿಕೆ ಕುರಿತು ಮುಖ್ಯಮಂತ್ರಿಗಳ ಜತೆ ಪ್ರಸ್ತಾಪಿಸುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು  ಅವರು ಮಂಗಳವಾರ ಇಲ್ಲಿ ಭರವಸೆ ನೀಡಿದರು.`ಪ್ರಯೋಗ ರಂಗ~ ಸಂಘಟನೆಯು ಆರು ಅಕಾಡೆಮಿಗಳ ನೂತನ ಅಧ್ಯಕ್ಷರಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಅಭಿನಂದನಾ ನುಡಿಗಳನ್ನಾಡಿದರು.ಈ ನಡುವೆ, ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ, `ಸಾಂಸ್ಕೃತಿಕ ಕ್ಷೇತ್ರಕ್ಕೆ ರಾಜ್ಯ ಸರ್ಕಾರ 269 ಕೋಟಿ ರೂಪಾಯಿಗಳ ಅನುದಾನ ಒದಗಿಸುತ್ತಿದ್ದರೂ ಅಕಾಡೆಮಿಗಳಿಗೆ ಕೇವಲ 45 ಲಕ್ಷ ರೂಪಾಯಿ ಅನುದಾನ ನೀಡುತ್ತಿದೆ. ಅದೇ ಕೇರಳದಲ್ಲಿ ಲಲಿತ ಕಲಾ ಅಕಾಡೆಮಿಗೆ ಅಲ್ಲಿನ ಸರ್ಕಾರ ವಾರ್ಷಿಕ 2.5 ಕೋಟಿ ರೂಪಾಯಿ ಅನುದಾನ ನೀಡುತ್ತಿದೆ~ ಎಂದು ಸರ್ಕಾರದ ಗಮನಸೆಳೆದರು.ಚಿ.ಸು. ಕೃಷ್ಣಶೆಟ್ಟಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ `ಮುಖ್ಯಮಂತ್ರಿ~ ಚಂದ್ರು, `ಈ ವಿಚಾರವನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಬಳಿ ಪ್ರಸ್ತಾಪಿಸಲಾಗುವುದು~ ಎಂದು ಆಶ್ವಾಸನೆ ನೀಡಿದರು.

`ಅಕಾಡೆಮಿಗಳ ಸಹಯೋಗದಲ್ಲಿ ರಾಜ್ಯದ ವಿವಿಧೆಡೆ ಸಾಂಸ್ಕೃತಿಕ ಉತ್ಸವ ಹಾಗೂ ಹಬ್ಬಗಳನ್ನು ನಡೆಸಲು ಪ್ರಾಧಿಕಾರ ಮುಂದಾಗಲಿದೆ. ಆ ಮೂಲಕ ಕನ್ನಡ ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸಲು ಪ್ರಯತ್ನ ನಡೆಸಲಿದೆ~ ಎಂದರು. `ಕೇಂದ್ರ ಲೋಕಸೇವಾ ಆಯೋಗ ನಡೆಸಲಿರುವ ಐಎಎಸ್ ಪರೀಕ್ಷೆಯನ್ನು ರಾಜ್ಯದ ಅಭ್ಯರ್ಥಿಗಳು ಸುಲಭವಾಗಿ ಎದುರಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪರೀಕ್ಷೆಯ ಪಠ್ಯ ಕ್ರಮವನ್ನು ಕನ್ನಡದಲ್ಲಿ ತರುವ ಬಗ್ಗೆ ಪ್ರಯತ್ನ ನಡೆಸಲಾಗುವುದು~ ಎಂದು ಅವರು ತಿಳಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಗೊ.ರು. ಚನ್ನಬಸಪ್ಪ, `ಅಕಾಡೆಮಿಗಳ ಆಡಳಿತ ವ್ಯವಹಾರದಲ್ಲಿ ರಾಜ್ಯ ಸರ್ಕಾರ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ಆದರೂ, ಅಕಾಡೆಮಿಗಳ ಕಾರ್ಯಭಾರ ಹಾಗೂ ಕಾರ್ಯ ವ್ಯಾಪ್ತಿಗೆ ಪೂರಕವಾಗಿ ನಿಬಂಧನೆಗಳಿಗೆ ತಿದ್ದುಪಡಿ ತರಲು ಪ್ರಯತ್ನಿಸಬೇಕು~ ಎಂದು ಸಲಹೆ ಮಾಡಿದರು.ಇದಕ್ಕೂ ಮುನ್ನ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಹಾಗೂ ಜಾನಪದ ಅಕಾಡೆಮಿ ಅಧ್ಯಕ್ಷ ಬಾನಂದೂರು ಕೆಂಪಯ್ಯ ಅವರನ್ನು ಸನ್ಮಾನಿಸಲಾಯಿತು.ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಸಿದ್ದಪ್ಪ ಉಪಸ್ಥಿತರಿದ್ದರು. ರಂಗಕರ್ಮಿ ಕೆ.ವಿ. ನಾಗರಾಜಮೂರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಅಧ್ಯಕ್ಷರಿಗೆ ಕಾರು ಒದಗಿಸಲಿ

`ಕೆಲವು ಅಕಾಡೆಮಿಗಳ ವ್ಯಾಪ್ತಿ ರಾಜ್ಯದ 30 ಸಾವಿರ ಹಳ್ಳಿಗಳನ್ನು ಒಳಗೊಳ್ಳುವುದರಿಂದ ಇಡೀ ರಾಜ್ಯದಲ್ಲಿ ಸಂಚರಿಸಲು ಅಧ್ಯಕ್ಷರಿಗೆ ಸರ್ಕಾರ ಕಾರು ಒದಗಿಸಬೇಕು. ಅಕಾಡೆಮಿ ಅಧ್ಯಕ್ಷರ ಮೂರು ವರ್ಷಗಳ ಅವಧಿ ಮುಗಿದ ತಕ್ಷಣ ಸರ್ಕಾರ ಹೊಸ ಅಧ್ಯಕ್ಷರನ್ನು ನೇಮಿಸಬೇಕು. ಅ ಸಕಾಲದಲ್ಲಿ ಸದಸ್ಯರನ್ನೂ ನೇಮಿಸಬೇಕು~ ಎಂದು ಗೊ.ರು. ಚನ್ನಬಸಪ್ಪ ಒತ್ತಾಯಿಸಿದರು.`ಅಕಾಡೆಮಿಗಳಲ್ಲಿ ಬಹಳ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯ ಸೇವೆಯನ್ನು ಕಾಯಂಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು~ ಎಂದು ಅವರು ಆಗ್ರಹಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry