ಮಂಗಳವಾರ, ನವೆಂಬರ್ 19, 2019
28 °C
36 ವರ್ಷದ ಎಲೆತೋಟವೂ ನಾಶ

ಅಕಾಲದಲ್ಲಿ ಆಲಿಕಲ್ಲು ಮಳೆ: ಬೆಳೆ ನಷ್ಟ

Published:
Updated:

ಕೋಲಾರ: ಭಾನುವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ತಾಲ್ಲೂಕಿನ ಸೀಸಂದ್ರ ಗ್ರಾಮದ ಸುತ್ತಮುತ್ತ ಟೊಮೆಟೋ, ಪಪ್ಪಾಯ, ಹಿಪ್ಪುನೇರಳೆ, ವೀಳ್ಯದ ಎಲೆ ಬೆಳೆಗಳು ಅಪಾರ ನಷ್ಟಕ್ಕೆ ತುತ್ತಾಗಿವೆ.ಕೆಲವೆಡೆ ಹಿಪ್ಪು ನೇರಳೆ ಎಲೆಗಳು ತೂತು ಬಿದ್ದಿವೆ, ಕೆಲವೆಡೆ ಹಿಪ್ಪು ನೇರಳೆ ಗಿಡಗಳು ಮುರಿದುಬಿದ್ದಿವೆ. ಎಲೆತೋಟವೂ ಕೂಡ ನಾಶವಾಗಿದೆ. ಪಪ್ಪಾಯ ಬೆಳೆಗೂ ಹಾನಿಯಾಗಿದ್ದು ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.ಸೀಸಂದ್ರ ಗ್ರಾಮದ ರೈತರಾದ ಶ್ರೀನಾಥ ಅವರ 2 ಎಕರೆಯಲ್ಲಿದ್ದ ಟೊಮೆಟೋ ಪೂರ್ಣ ನೆಲಕಚ್ಚಿದ್ದು ಸುಮಾರು 2 ಲಕ್ಷ ರೂಪಾಯಿ ನಷ್ಟವಾಗಿದೆ. ಅದೇ ಗ್ರಾಮದ ಎಲೆತೋಟದ ನಾರಾಯಣಸ್ವಾಮಿಯವರು 20 ಗುಂಟೆಯಲ್ಲಿ ಬೆಳೆದಿದ್ದ ವೀಳ್ಯದ ಎಲೆತೋಟವು ನಾಶವಾಗಿದೆ. ಎಲ್ಲ ಎಲೆಗಳಿಗೂ ಆಲಿಕಲ್ಲು ಏಟು ಬಿದ್ದಿರುವುದರಿಂದ ಬುಡಸಮೇತ ಅದನ್ನು ಕೀಳಲೇಬೇಕಾದ ಸನ್ನಿವೇಶ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದ್ದ ತೆರಳಿದ್ದ `ಪ್ರಜಾವಾಣಿ' ಪ್ರತಿನಿಧಿಯೊಡನೆ ಮಾತನಾಡಿದ ಅವರು, 36 ವರ್ಷಗಳಿಂದ ಈ ಎಲೆತೋಟವನ್ನು ರಕ್ಷಿಸಿದ್ದೆವು. 25 ವರ್ಷದ ಹಿಂದೆಯೂ ಆಲಿಕಲ್ಲು ಮಳೆ ಬಿದ್ದಿದ್ದರೂ ತೋಟದ ಮೇಲೆ ಬಿದ್ದಿರಲಿಲ್ಲ. ಆದರೆ ಭಾನುವಾರದ ಮಳೆಯಿಂದ ಎಲೆತೋಟ ನಾಶವಾಗಿದೆ. ಅದನ್ನು ಕತ್ತರಿಸಿ ಹೊಸ ಬಳ್ಳಿಯನ್ನು ನಾಟಿ ಮಾಡಲೇಬೇಕು ಎಂದರು.ಪ್ರತಿ ತಿಂಗಳ ಕಟಾವಿನಿಂದ ಅವರಿಗೆ ಈ ತೋಟದಿಂದ 20ರಿಂದ 30 ಸಾವಿರ ಆದಾಯ ದೊರಕುತ್ತಿತ್ತು. ಈಗ ಅದು ಇಲ್ಲವಾಗಿದೆ ಎಂದು ವಿಷಾದಿಸಿದರು. ಅವರು ತಮ್ಮ ಎರಡು ಎಕರೆಯಲ್ಲಿಬೆಳೆದಿರುವ ಹಿಪ್ಪುನೇರಳೆಯೂ ನಾಶವಾಗಿದೆ. ಆಲಿಕಲ್ಲಿನ ಏಟಿಗೆ ಹಿಪ್ಪುನೇರಳೆ ಎಲೆಗಳೆಲ್ಲವೂ ತೂತುಬಿದ್ದಿವೆ. ಗ್ರಾಮದ ಜಯರಾಮೇಗೌಡರ ಎರಡು ಎಕರೆ ಹಿಪ್ಪುನೇರಳೆ ತೋಟಕ್ಕೂ ಇದೇ ಗತಿಯಾಗಿದೆ.ತಮ್ಮ 3 ಎಕರೆ ತೋಟದಲ್ಲಿ ಪಿಂದಿ ಹಂತದಲ್ಲಿರುವ ಪಪ್ಪಾಯ, ಒಂದೂವರೆ ಎಕರೆಯಲ್ಲಿನ ಟೊಮೆಟೋ, 5 ಎಕರೆಯಲ್ಲಿನ ಹಿಪ್ಪುನೇರಳೆಗೆ ಹಾನಿಯಾಗಿದೆ ಎಂದು ಆರ್.ಸ್ವಾಮಪ್ಪ ತಿಳಿಸಿದರು.ಸೀಸಂದ್ರ ಗ್ರಾಮದ ಸಮೀಪ, ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿರುವ ಕಂಪ್ಯೂಟರ್ ನಾರಾಯಣಸ್ವಾಮಿ ಎಂಬುವವರು 7 ಎಕರೆಯಲ್ಲಿ ಬೆಳೆದಿದ್ದ ಹಿಪ್ಪುನೇರಳೆ ಗಿಡಗಳ ಮೇಲ್ಭಾಗ ಮುರಿದುಬಿದ್ದಿದೆ. ಎಲೆಗಳು ತೂತುಬಿದ್ದಿವೆ. ಮೂರು ವರ್ಷದ ಪಪ್ಪಾಯ ಮರಗಳಲ್ಲಿ ಹಲವು ಮುರಿದುಬಿದ್ದಿವೆ.ಮರಗಳಲ್ಲಿದ್ದ ಎಲ್ಲ ಪಪ್ಪಾಯ ಕಾಯಿಗಳಿಗೂ ಆಲಿಕಲ್ಲು ಏಟು ಬಿದ್ದು ಹಾಲು ಸೋರುತ್ತಿವೆ. ಒಂದು ವಾರದ ಹಿಂದೆ ನೆಟ್ಟಿದ್ದ ಸೌತೆ ಸಸಿಗಳೂ ನೆಲಕಚ್ಚಿವೆ.

ಪ್ರತಿಕ್ರಿಯಿಸಿ (+)