ಶನಿವಾರ, ಜೂನ್ 19, 2021
23 °C

ಅಕಾಲಿಕ ಮಳೆಗೆ ಮುನ್ನೆಚ್ಚರಿಕಾ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಏಪ್ರಿಲ್- ಮೇ ತಿಂಗಳಲ್ಲಿ ಸುರಿಯುವ ಅಕಾಲಿಕ ಮಳೆಯಿಂದ ಉಂಟಾಗಲಿರುವ ಆಸ್ತಿ-ಪಾಸ್ತಿ ನಷ್ಟ ಹಾಗೂ ಸಾವು-ನೋವಿನಂತಹ ಅನಾಹುತಗಳನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಅವರು ಎಲ್ಲ ವಲಯ ಹೆಚ್ಚುವರಿ/ ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದಾರೆ.ಅಕಾಲಿಕ ಮಳೆ ಸುರಿಯುವ ಸಂದರ್ಭದಲ್ಲಿ ರಸ್ತೆ, ರಸ್ತೆಯ ಪಕ್ಕದಲ್ಲಿ ನೀರು ನಿಂತು ವಾಹನ ಸಂಚಾರ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗುವ ಹಿನ್ನೆಲೆಯಲ್ಲಿ ಚರಂಡಿಗಳಲ್ಲಿ ಹೂಳೆತ್ತಿ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಯುಕ್ತರು ನಿರ್ದೇಶನ ನೀಡಿದ್ದಾರೆ.ಮುಖ್ಯ ಮಳೆ ನೀರು ಚರಂಡಿಗಳಲ್ಲಿ ಹೂಳು ತೆಗೆದು ನೀರು ಸರಾಗವಾಗಿ ಹರಿದು ಹೋಗಲು ಕ್ರಮ ವಹಿಸುವುದು. ರಸ್ತೆ ಬದಿಯ ಚರಂಡಿ ಹಾಗೂ ರಸ್ತೆಯ ಇಕ್ಕೆಲಗಳಲ್ಲಿರುವ ಚರಂಡಿಗಳಲ್ಲಿ ಹೂಳೆತ್ತಿ ಸಾಗಿಸಿ ಸ್ವಚ್ಛವಾಗಿಟ್ಟುಕೊಳ್ಳುವುದು. ಎಲ್ಲಿ ಅತಿಯಾದ ನೆರೆ ಬರುವುದೋ ಅಂತಹ ಸ್ಥಳಗಳಲ್ಲಿ ಮಳೆ ನೀರು ಚರಂಡಿ ಮೇಲೆ ಉಕ್ಕಿ ಹರಿಯುವುದನ್ನು ತಡೆಯಲು ಮರಳು ಚೀಲಗಳನ್ನು ಶೇಖರಿಸುವುದು.ಮಳೆ ನೀರು ಚರಂಡಿಗಳ ಒತ್ತುವರಿ ತೆರವುಗೊಳಿಸುವುದು. ಮಳೆಯಿಂದ ರಸ್ತೆಯಲ್ಲಿ ಉಂಟಾಗುವ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಕ್ರಮ ಕೈಗೊಳ್ಳುವುದು. ಚರಂಡಿಗಳ ಮಧ್ಯೆ ಹಾದು ಹೋಗಿರುವ ಕೊಳವೆಗಳಿಗೆ ಅಂಟಿಕೊಂಡಿರುವ ತ್ಯಾಜ್ಯ ವಸ್ತುಗಳನ್ನು ತೆಗೆದು ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ವಹಿಸುವುದು. ನೆರೆಯುಂಟಾಗುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಯಂತ್ರ ಹಾಗೂ ಸಿಬ್ಬಂದಿಯನ್ನು ಹೊಂದಿಸಿಟ್ಟುಕೊಳ್ಳುವುದು.ಕೇಂದ್ರ ಕಚೇರಿಯಲ್ಲದೆ, ಎಲ್ಲ ವಲಯ ಕೇಂದ್ರಗಳಲ್ಲಿ ತೆರೆದಿರುವ ನಿಯಂತ್ರಣ ಕೊಠಡಿಗಳ ನಿರ್ವಹಣೆ ಜವಾಬ್ದಾರಿಯನ್ನು ಹಿರಿಯ ಅಧಿಕಾರಿಗಳಿಗೆ ವಹಿಸುವುದು. ಈ ನಿಯಂತ್ರಣ ಕೊಠಡಿಗಳು ದಿನದ 24 ಗಂಟೆಯೂ ಕೆಲಸ ಮಾಡುವಂತೆ ನೋಡಿಕೊಳ್ಳುವುದು.ಮಳೆಗಾಲದಲ್ಲಿ ಪ್ರತಿ ನಿಯಂತ್ರಣ ಕೊಠಡಿಯಲ್ಲಿಯೂ 20 ಕೆಲಸಗಾರರನ್ನು ಒಳಗೊಂಡ ಪ್ರಹರಿ ದಳವು ಕೆಲಸ ನಿರ್ವಹಿಸಲು ಅನುವಾಗುವಂತೆ, ಅವಶ್ಯಕ ಸಲಕರಣೆ ಹಾಗೂ ವಾಹನಗಳನ್ನು ಸಜ್ಜಾಗಿಡುವುದು.ಗುರುತಿಸಲಾಗಿರುವ ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾ ಇಡಲು, ಅಗತ್ಯ ಬಿದ್ದಲ್ಲಿ ತಕ್ಷಣ ಕಾರ್ಯಾಚರಣೆ ನಡೆಸಲು ಅಧಿಕಾರಿಗಳನ್ನು ಸಜ್ಜಾಗಿಡುವುದು. ಆರೋಗ್ಯ ಇಲಾಖೆಯು ತಗ್ಗು ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವಂತೆ ಆಯುಕ್ತರು ಆದೇಶಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.