ಶನಿವಾರ, ಮಾರ್ಚ್ 6, 2021
20 °C

ಅಕಾಲಿಕ ಮಳೆಯಿಂದ ಅಪಾರ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕಾಲಿಕ ಮಳೆಯಿಂದ ಅಪಾರ ಹಾನಿ

ಆಲಮಟ್ಟಿ: ಒಂದೆಡೆ ಕಾಲುವೆಗೆ ನೀರು ಹರಿಸುವ ಪ್ರಕ್ರಿಯೆ ಸ್ಥಗಿತದ ಭೀತಿ, ಇನ್ನೊಂದೆಡೆ ಅಕಾಲಿಕವಾಗಿ ಸುರಿಯುತ್ತಿರುವ ಮಳೆ, ಇದರಿಂದಾಗಿ ಭರ್ಜರಿಯಾಗಿ ಕೈಗೆ ಬಂದ ಫಸಲು ಬಾಯಿಗೆ ಬಾರದಂತಾಗಿದೆ.ಹಿಂಗಾರು ಬೆಳೆಯಾಗಿ ಆಲಮಟ್ಟಿ, ನಾಯನೇಗಲಿ, ಸುತಗುಂಡಾರ, ವಂದಾಲ, ನಿಡಗುಂದಿ ಭಾಗದಲ್ಲಿ ವ್ಯಾಪಕವಾಗಿ ಬೆಳೆದ ಜೋಳದ ಬೆಳೆ ಅಕಾಲಿಕ ಮಳೆಗೆ ಕಾಳುಗಳು ಕರಿಯಾಗಿದ್ದು, ಬೆಲೆ ಕುಸಿತದ ಆತಂಕ ರೈತರಲ್ಲಿ ಎದುರಾಗಿದೆ.ಈ ಅಕಾಲಿಕ ಮಳೆಯಿಂದಾಗಿ ರಾಶಿಗೆ ಬಂದಿದ್ದ ಜೋಳ, ಮಳೆಯ ನೀರಿನಿಂದ ತೊಯ್ದಿದ್ದು, ಜೋಳಕ್ಕೆ ಕಲಿ ಬಿದ್ದಿವೆ. ಈ ಜೋಳದ ರೊಟ್ಟಿ ನಸುಗೆಂಪು ಬಣ್ಣ ಹೊಂದಲಿದ್ದು, ಜೋಳದ ಹಿಟ್ಟಿಗೆ ಜಿಗಿ ಕೂಡಾ ಕಡಿಮೆಯಾಗುತ್ತದೆ, ಹೀಗಾಗಿ ಈ ಜೋಳಕ್ಕೆ ಬೆಲೆ ಬಾರದು ಎಂದು ಸುತಗುಂಡಾರದ ರೈತ ಶಿವಪ್ಪ ನುಗ್ಲಿ ಆತಂಕ ವ್ಯಕ್ತಪಡಿಸಿದರು.ಅಲ್ಲದೇ ಈ ಮಳೆಯಿಂದಾಗಿ ಜೋಳದ ಕನಕಿ, ಮೇವು ಕೂಡಾ ತೊಯ್ದಿದ್ದು, ದನಕರುಗಳಿಗೆ ರುಚಿಸುವುದಿಲ್ಲ ಹಾಗೂ ಕೊಳೆಯುವ ಸಾಧ್ಯತೆ ಹೆಚ್ಚಾಗಿದೆ ಎಂದವರು ಅಭಿಪ್ರಾಯಪಟ್ಟರು.ಬಹುತೇಕ ಕಡೆ ಜೋಳದ ತೆನೆಯನ್ನು ಕಟಾವು ಮಾಡಿದ್ದು, ಸಂಗ್ರಹಿಸಿಟ್ಟಿದ್ದರು. ಶಿವರಾತ್ರಿಯ ಅಮಾವಾಸ್ಯೆ ನಂತರ ಬಹುತೇಕ ಕಡೆ ರಾಶಿ ಮಾಡಲು ರೈತರು ಇಚ್ಛಿಸಿದ್ದರು. ಅಕಾಲಿಕ ಮಳೆಯಿಂದಾಗಿ ಈ ಬೆಳೆಗಳು ಮಳೆಯಲ್ಲಿ ಸಿಕ್ಕಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಾಗಿವೆ ಎಂದು ವಂದಾಲದ ರೈತ ಶಂಕ್ರಪ್ಪ ಗಿಡಜಾಡರ ನೊಂದು ನುಡಿದರು.ಗುರುವಾರ ಆಲಮಟ್ಟಿಯಲ್ಲಿ 8.8 ಮಿ.ಮೀ ಮಳೆಯಾಗಿದ್ದು, ಶುಕ್ರವಾರ ಸಂಜೆಯೂ ಜಿಟಿ ಜಿಟಿ ಮಳೆ ಸುರಿಯಿತು. ಶುಕ್ರವಾರ ಮಧ್ಯಾಹ್ನ ದಿಂದಲೇ ಮೋಡ ಕವಿದ ವಾತಾವರಣ ಉಂಟಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.ಜೋಳ, ಗೋಧಿ, ಕಡಲೆ, ಕುಸುಬಿ ಬೆಳೆ ಹೆಚ್ಚಾಗಿ ಹಾನಿ ಸಂಭವಿಸಿದೆ. ಬಸವನಬಾಗೇವಾಡಿ ತಾಲ್ಲೂಕಿನಾ ದ್ಯಂತ ಬಹುತೇಕ ಕಡೆ ಜೋಳದ ರಾಶಿಯಾಗಿದ್ದು, ಕೆಲ ಕಡೆ ತಡವಾಗಿ ಬಿತ್ತನೆ ಮಾಡಿದ್ದ ಕಡಲೆ, ಜೋಳ, ಗೋಧಿಗೆ ಹಾನಿ ಮಾಡಿರುವ ಸಾಧ್ಯತೆ ಇದ್ದು, ಇನ್ನೂ ಒಂದೆರಡು ದಿನಗಳಲ್ಲಿ ಬೆಳೆಗಳಿಗೆ ಆದ ಹಾನಿಯ  ಬಗ್ಗೆ ನಿಖರ ಮಾಹಿತಿ ದೊರೆಯುತ್ತದೆ ಎಂದು ತಾಲ್ಲೂಕು ಕೃಷಿ ಅಧಿಕಾರಿ ರಕ್ಕಸಗಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.