ಶುಕ್ರವಾರ, ಮೇ 14, 2021
29 °C
ಮುಕ್ತ ಮಾರುಕಟ್ಟೆಯಲ್ಲಿ ಖರೀದಿ- ಎಪಿಎಲ್ ಗ್ರಾಹಕರಿಗೆ ಅನಿವಾರ್ಯ

ಅಕ್ಕಿದರ ಏರುವ ಭೀತಿ

ಪ್ರಜಾವಾಣಿ ವಾರ್ತೆ/ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಅಕ್ಕಿದರ ಏರುವ ಭೀತಿ

ಬೆಂಗಳೂರು:  ಎಪಿಎಲ್ ಕಾರ್ಡುದಾರರಿಗೆ ಅಕ್ಕಿ ನೀಡುವುದನ್ನು ನಿಲ್ಲಿಸಲು ಸರ್ಕಾರ ಯೋಚಿಸಿರುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಹೆಚ್ಚಾಗಬಹುದು ಎಂಬ ಭೀತಿ ಕಾಡುತ್ತಿದೆ.ಈವರೆಗೆ ಎಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ 34 ಲಕ್ಷ ಕುಟುಂಬಗಳಿಗೆ ರಾಜ್ಯ ಸರ್ಕಾರ 10 ರೂಪಾಯಿಗೆ ಒಂದು ಕೆ.ಜಿ.ಯಂತೆ 10 ಕೆ.ಜಿ. ಅಕ್ಕಿಯನ್ನು ನೀಡುತ್ತಿತ್ತು. ಎಪಿಎಲ್ ಕಾರ್ಡುದಾರರಿಗೆ ಹಂಚಲು 85 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರದಿಂದ ಅಕ್ಕಿ ಬಂದಿಲ್ಲ ಎಂಬ ನೆಪವೊಡ್ಡಿ ಕಳೆದ ಏಪ್ರಿಲ್ ತಿಂಗಳಿನಿಂದಲೇ ಎಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಅಕ್ಕಿ ವಿತರಣೆ ನಿಲ್ಲಿಸಲಾಗಿದೆ. ಈಗ ಬಡವರಿಗೆ ಕೆ.ಜಿ. 1 ರೂಪಾಯಿ ದರದಲ್ಲಿ ತಿಂಗಳಿಗೆ 30 ಕೆ.ಜಿ. ಅಗ್ಗದ ಅಕ್ಕಿ ವಿತರಣೆ ಮಾಡುವ ಕಾರಣದಿಂದಾಗಿ ಜುಲೈದಿಂದ ಎಪಿಎಲ್‌ಗೆ ಅಕ್ಕಿ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ.ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ದೊರೆಯದೇ ಇರುವುದರಿಂದ 34 ಲಕ್ಷ ಕುಟುಂಬಗಳು ಈಗ ಮುಕ್ತ ಮಾರುಕಟ್ಟೆಯಲ್ಲಿಯೇ ಅಕ್ಕಿಯನ್ನು ಖರೀದಿಸಬೇಕಾಗುತ್ತದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಹೆಚ್ಚಾಗಬಹುದು. ಈಗ ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಅಕ್ಕಿಯ ಬೆಲೆ ಕೆ.ಜಿ.ಗೆ 55 ರೂಪಾಯಿ ಹಾಗೂ ಸಾಧಾರಣ ದರ್ಜೆಯ ಅಕ್ಕಿ ಬೆಲೆ ಕೆ.ಜಿ.ಗೆ 28 ರೂಪಾಯಿ ಇದೆ. ಇನ್ನು ಮುಂದೆ ಕಡಿಮೆ ದರ್ಜೆಯ ಅಕ್ಕಿಯ ಬೆಲೆಯೇ 30ರಿಂದ 40 ರೂಪಾಯಿಗೆ ಏರಬಹುದು. ಉತ್ತಮ ಅಕ್ಕಿಯ ಬೆಲೆ ಇನ್ನೂ ಹೆಚ್ಚಾಗಬಹುದು ಎಂಬ ಭೀತಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳೇ ವ್ಯಕ್ತಪಡಿಸುತ್ತಾರೆ.ಎಪಿಎಲ್ ಕಾರ್ಡ್‌ನವರಿಗೆ ಕಳೆದ ಮಾರ್ಚ್ ತಿಂಗಳವರೆಗೆ 10 ಕೆ.ಜಿ ಅಕ್ಕಿಯ ಜೊತೆ ಹಾಗೂ 8 ರೂಪಾಯಿಗೆ ಒಂದು ಕೆ.ಜಿ.ಯಂತೆ 5 ಕೆ.ಜಿ. ಗೋಧಿ ನೀಡಲಾಗುತ್ತಿತ್ತು. ಸಕ್ಕರೆ ಅಥವಾ ಸೀಮೆ ಎಣ್ಣೆ ನೀಡುತ್ತಿರಲಿಲ್ಲ. ಈಗ ಅಕ್ಕಿಯನ್ನೂ ಬಂದ್ ಮಾಡಿರುವುದರಿಂದ ಕೇವಲ 5 ಕೆ.ಜಿ. ಗೋಧಿಯನ್ನು ಮಾತ್ರ ಪಡೆಯಬೇಕಾಗಿದೆ. ಆದರೆ ಏಪ್ರಿಲ್ ತಿಂಗಳಿನಿಂದ ಈ ಗೋಧಿಯನ್ನೂ ನೀಡಿಲ್ಲ.ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಯೂನಿಟ್ ಪದ್ಧತಿಯಂತೆ ಮೂರು ರೂಪಾಯಿಗೆ ಒಂದು ಕೆ.ಜಿ.ಯಂತೆ ಅಕ್ಕಿ ಮತ್ತು ಗೋಧಿ, ಒಂದು ಕೆ.ಜಿ.ಗೆ 13.50 ರೂಪಾಯಿಯಂತೆ 1 ಕೆ.ಜಿ. ಸಕ್ಕರೆ ಹಾಗೂ ಒಂದು ಲೀಟರ್‌ಗೆ 16 ರೂಪಾಯಿಯಂತೆ ಸೀಮೆ ಎಣ್ಣೆ ವಿತರಿಸಲಾಗುತ್ತಿತ್ತು. ಅಡುಗೆ ಅನಿಲದ ಸಂಪರ್ಕ ಇಲ್ಲದವರಿಗೆ ಮಾತ್ರ ಸೀಮೆಎಣ್ಣೆ ನೀಡಲಾಗುತ್ತಿತ್ತು.ಎಪಿಎಲ್ ಕಾರ್ಡುದಾರರಿಗೂ ಒಂದು ಕೆ.ಜಿ.ಗೆ 6 ರೂಪಾಯಿ ದರದಲ್ಲಿ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ ಈಗ ಏಕಾಏಕಿ ಈ ನಿರ್ಧಾರ ಬದಲಾಯಿಸಿರುವುದು ಸರಿಯಲ್ಲ ಎಂಬ ಭಾವನೆ ಇಲಾಖೆ ಅಧಿಕಾರಿಗಳಲ್ಲಿ ಇದೆ.ಬಿಪಿಎಲ್‌ಗೆ ಬೇಡಿಕೆ ಜಾಸ್ತಿ: ಗ್ರಾಮಾಂತರ ಪ್ರದೇಶದಲ್ಲಿ ವಾರ್ಷಿಕ 12 ಸಾವಿರ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿದವರಿಗೆ ಹಾಗೂ ಪಟ್ಟಣ, ನಗರ ಪ್ರದೇಶಗಳಲ್ಲಿ ವಾರ್ಷಿಕ 17 ಸಾವಿರ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿದವರಿಗೆ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ.ಅಗ್ಗದ ಅಕ್ಕಿ ದೊರೆಯಲಿದೆ ಎಂಬ ಕಾರಣದಿಂದ ಬಿಪಿಎಲ್ ಕಾರ್ಡ್ ಪಡೆಯಲು ಈಗಾಗಲೇ ಮಿತಿಮೀರಿ ಪೈಪೋಟಿ ಆರಂಭವಾಗಿದೆ. ಇದರಿಂದ ನಕಲಿ ಕಾರ್ಡ್‌ಗಳ ಸಂಖ್ಯೆ ಕೂಡ ಹೆಚ್ಚಾಗಬಹುದು. ಕೆಳಮಟ್ಟದಲ್ಲಿ ಭ್ರಷ್ಟಾಚಾರಕ್ಕೂ ಇದು ಕಾರಣವಾಗಬಹುದು ಎಂಬುದು ಅಧಿಕಾರಿಗಳ ಆತಂಕ.ಅಗ್ಗದ ಅಕ್ಕಿ, ದುರುಪಯೋಗಕ್ಕೂ ಕಾರಣವಾಗಬಹುದು. ನ್ಯಾಯಬೆಲೆ ಅಂಗಡಿಯವರೂ ದುರುಪಯೋಗಪಡಿಸಿಕೊಳ್ಳಬಹುದು. ಅಕ್ಕಿ ಬಳಕೆ ಕಡಿಮೆ ಇರುವ ಭಾಗದಲ್ಲಿ ಬಿಪಿಎಲ್ ಗ್ರಾಹಕರು ಒಂದು ರೂಪಾಯಿಯ ಅಕ್ಕಿಯನ್ನು ಹೆಚ್ಚಿನ ದರಕ್ಕೆ ಮಾರಿಕೊಳ್ಳಬಹುದು ಎಂಬ ಶಂಕೆ ಅಧಿಕಾರಿಗಳದ್ದು. ಈ ಪ್ರವೃತ್ತಿಯನ್ನು ಇಲಾಖೆ ತಡೆಯಬಹುದಲ್ಲವೇ ಎಂದು ಪ್ರಶ್ನಿಸಿದರೆ `ನಿಮಗೆ ಗ್ರಾಮೀಣ ಭಾಗದ ಪರಿಸ್ಥಿತಿ ಗೊತ್ತಿಲ್ಲ.ಬಡವರಿಗೆ ಒಂದು ರೂಪಾಯಿಗೆ ಅಕ್ಕಿ ಸಿಗುತ್ತದೆ. ಬಡತನ ರೇಖೆಗಿಂತ ಕೊಂಚ ಮೇಲಿದ್ದವರೂ ಕೂಡ ಮುಕ್ತ ಮಾರುಕಟ್ಟೆಯಲ್ಲಿ 30-40 ರೂಪಾಯಿ ಕೊಟ್ಟು ಅಕ್ಕಿ ಖರೀದಿಸಬೇಕು. ಈ ತಾರತಮ್ಯ ದುರುಪಯೋಗಕ್ಕೆ ಕಾರಣವಾಗುತ್ತದೆ' ಎಂಬ ಉತ್ತರ ಬರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.