ಅಕ್ಕಿನೇನಿ ಕಿವಿಮಾತು ಸಿನಿಮಾತು

7

ಅಕ್ಕಿನೇನಿ ಕಿವಿಮಾತು ಸಿನಿಮಾತು

Published:
Updated:
ಅಕ್ಕಿನೇನಿ ಕಿವಿಮಾತು ಸಿನಿಮಾತು

ಭಾರತೀಯ ಸಿನಿಮಾ ಶತಕ ಸಂಭ್ರಮಾಚರಣೆಯಲ್ಲಿದ್ದರೂ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ. ಜಗತ್ತಿನ ಅತಿದೊಡ್ಡ ಮಾರುಕಟ್ಟೆಯಾಗಿರುವ, ಅತಿ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ದೇಶವಾಗಿದ್ದರೂ ವಿಶ್ವಮಟ್ಟದ ಉತ್ಸವಗಳಲ್ಲಿ ಮಾತ್ರ ಭಾರತದ ಪ್ರಾತಿನಿಧ್ಯ ಹೇಳಿಕೊಳ್ಳುವಂತಿಲ್ಲ ಎಂದು ತೆಲುಗು ಹಾಗೂ ತಮಿಳು ಚಿತ್ರರಂಗದ ಹಿರಿಯ ನಟ ಅಕ್ಕಿನೇನಿ ನಾಗೇಶ್ವರ ರಾವ್‌ ವಿಷಾದದಿಂದ ಹೇಳಿದ್ದಾರೆ.ಸೆ.20ರಂದು 90 ವರ್ಷಕ್ಕೆ ಕಾಲಿಡಲಿರುವ ಅವರು ತಮ್ಮ ಚಿತ್ರಯಾನದ ನೆನಪುಗಳನ್ನೂ ಹಂಚಿಕೊಂಡಿದ್ದಾರೆ.

‘ವಿಶ್ವ ಮಾರುಕಟ್ಟೆಯಲ್ಲಿ ಪ್ರೇಕ್ಷಕರನ್ನು ಗಳಿಸಲು ಸಾಕಷ್ಟು ಪ್ರಯೋಗಾತ್ಮಕ ಹಾಗೂ ಸೃಜನಾತ್ಮಕ ಚಿತ್ರಗಳನ್ನು ಭಾರತೀಯ ಚಿತ್ರರಂಗ ಹೊರತರಬೇಕಿದೆ’ ಎಂಬುದು ಅವರ ಕಿವಿಮಾತು.250 ಚಿತ್ರಗಳಲ್ಲಿ ನಟಿಸಿರುವ ನಾಗೇಶ್ವರ್‌ರಾವ್‌ ತಮ್ಮ ಖ್ಯಾತಿ ಹಾಗೂ ಯಶಸ್ಸಿಗೆ ತಾಯಿ ಮತ್ತು ಘಂಟಸಾಲಾ ರಾಮಯ್ಯ ಕಾರಣ ಎಂದಿದ್ದು, ಅಭಿನಯಿಸುತ್ತಿದ್ದ ದಿನಗಳಲ್ಲಿ ತಮಗೆ ನಿರಾಳಭಾವವಿತ್ತು ಎಂಬುದು ಅವರ ಅನುಭವ ನುಡಿ.ಹತ್ತೊಂಬತ್ತರ ಯುವಕನನ್ನು ವಿಜಯವಾಡಾ ರೈಲು ನಿಲ್ದಾಣದಿಂದ ಕರೆತಂದು ‘ಸೀತಾರಾಮ ಜನನಮ್‌’ ಚಿತ್ರದಲ್ಲಿ ಮುಖ್ಯ ಪಾತ್ರಕ್ಕೆ ಬಣ್ಣ ಹಾಕಿಸಿದ್ದರು. ಹಲವು ದಶಕಗಳ ಹಿಂದೆಯೇ ಚೆನ್ನೈನಿಂದ ಹೈದರಾಬಾದಿಗೆ ತಮ್ಮ ನೆಲೆಯನ್ನು ಬದಲಿಸಿದರೂ ನಾಗೇಶ್ವರ್‌ ರಾವ್‌ ಈಗಲೂ ತಮ್ಮ ಸಿನಿಲೋಕದ ಯಶಸ್ಸಿನಲ್ಲಿ ಚೆನ್ನೈ ಕೊಡುಗೆಯೇ ದೊಡ್ಡದು ಎನ್ನುತ್ತಾರೆ.‘ಆ ಕಾಲದಲ್ಲಿ ಮದ್ರಾಸ್‌ ಚಿತ್ರನಿರ್ಮಾಣಕ್ಕೆ ಹೆಸರಾಗಿತ್ತು. ಚಿತ್ರೀಕರಣದ ನಂತರ ಖಾಲಿ ರಸ್ತೆಗಳಲ್ಲಿ ಇಳಿಸಂಜೆ ಕಾಫಿ ಹುಡುಕಿಕೊಂಡು ಸಹಕಲಾವಿದರೊಂದಿಗೆ ಓಡಾಡುತ್ತಿದ್ದೆವು. ಮದ್ರಾಸ್‌ನಲ್ಲಿ ಕಳೆದ ಆ ದಿನಗಳ ನೆನಪು ಹೃದಯದಲ್ಲಿ ಹಸಿರಾಗಿದೆ.ನನ್ನ ಮಕ್ಕಳು ಮಾತೃಭಾಷೆ ತೆಲುಗು  ಕಲಿಯಲಿ. ತೆಲುಗು ಮಾತನಾಡುವವರ ಒಡನಾಟದಲ್ಲಿ ಬೆಳೆಯಲಿ ಎಂದು ಬಯಸಿದೆ.

ಆದರೆ ಅವರಲ್ಲಿ ಯಾರೂ ಚಿತ್ರರಂಗ ಸೇರುವುದು ಇಷ್ಟವಿರಲಿಲ್ಲ. ನಾಗಾರ್ಜುನ ನನ್ನ ನಿರೀಕ್ಷೆಗೂ ಮೀರಿ ಬೆಳೆದ. ಸಿನಿಮಾ ಲೋಕ ಕೆಲವು ಪಾಠಗಳನ್ನೂ ಕಲಿಸಿದೆ. ಜೀವನದಲ್ಲಿ ಜವಬ್ದಾರಿಯನ್ನೂ ತಂದುಕೊಟ್ಟಿದೆ. ಜನರನ್ನು ಅರ್ಥ ಮಾಡಿಕೊಳ್ಳಲು, ಬದುಕನ್ನು ಸರಿದಾರಿಯಲ್ಲಿ ನಡೆಸಲು ಚಿತ್ರೋದ್ಯಮ ಖಂಡಿತವಾಗಿಯೂ ಸಹಾಯ ಮಾಡುತ್ತದೆ. ನಾನು ಕಲಿಸಿದ ಜೀವನಮೌಲ್ಯಗಳನ್ನು ಮಕ್ಕಳು ಬದುಕಿನಲ್ಲಿ ಪಾಲಿಸಿಕೊಂಡು ಬರುತ್ತಿರುವುದು ಸಮಾಧಾನ ತಂದಿದೆ’ ಎನ್ನುತ್ತಾರೆ ಅವರು.‘ಚಿತ್ರೋದ್ಯಮದಲ್ಲಿ ಏರಿಳಿತಗಳನ್ನು ಕಂಡಿದ್ದೇನೆ. ಅದು ನಿಮ್ಮೆಲ್ಲ ನಡೆ– ನಿಲುವುಗಳಿಗೆ ನೀವೇ ಜವಾಬ್ದಾರರಾಗುವುದನ್ನು ಕಲಿಸಿಕೊಡುತ್ತದೆ. ಮಕ್ಕಳು ಸಿನಿಲೋಕ ಪ್ರವೇಶಿಸಿವುದಾಗಿ ಹೇಳಿದಾಗ  ವಿರೋಧಿಸಿರಲಿಲ್ಲ. ನಾನು ಚಿತ್ರರಂಗಕ್ಕೆ ಕಾಲಿರಿಸಿದಾಗ ಸ್ಪರ್ಧೆ ಇರಲಿಲ್ಲ. ಹಾಗಾಗಿ ಮಾಡುವ ಕೆಲಸವನ್ನು ಆನಂದಿಸಿದೆ. ನೀವು ಇಷ್ಟಪಡುವ ಕೆಲಸವನ್ನು ಬಿಡುವ ಪ್ರಶ್ನೆಯೇ ಇರುವುದಿಲ್ಲ ಅಲ್ಲವೇ’ ಎಂದೂ ಪ್ರಶ್ನಿಸುತ್ತಾರೆ.ಹೆಸರು, ಹಣ, ಖ್ಯಾತಿಯನ್ನು ತಂದಿತ್ತ ಉದ್ಯಮಕ್ಕೆ ಏನನ್ನಾದರೂ ಮಾಡುವ ಬಯಕೆ ಇತ್ತು. ಅನ್ನಪೂರ್ಣ ಸ್ಟುಡಿಯೋ ಆರಂಭಿಸಿದೆ. ಈಚೆಗಷ್ಟೇ ಒಂದು ಫಿಲ್ಮ್‌ ಸ್ಕೂಲ್‌ ಸಹ ಆರಂಭಿಸಿದೆ. ಅಭಿಮಾನಿಗಳು ಇಂದಿಗೂ ನನ್ನನ್ನು ಪ್ರೀತಿಸುತ್ತಾರೆ. ಅಭಿಮಾನಿಗಳೊಂದಿಗೆ ನಾನೂ ‘ಮನಮ್‌’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದೇನೆ. ನಮ್ಮ ಕುಟುಂಬದ ಮೂರು ಪೀಳಿಗೆ ಇದರಲ್ಲಿ ನಟಿಸಿದ್ದೇವೆ. ನಾಗಾರ್ಜುನನ ಮಗ ನಾಗ ಚೈತನ್ಯ ಕೂಡ ಇದ್ದಾನೆ. ಮೊದಲ ಚಿತ್ರದ ಬಿಡುಗಡೆಗೂ ಇಷ್ಟೇ ಉತ್ಸಾಹ ಇತ್ತು’ ಎನ್ನುತ್ತ  ಮಾತಿಗೆ ವಿರಾಮ ಹಾಕುತ್ತಾರೆ ಅಕ್ಕಿನೇನಿ ನಾಗೇಶ್ವರ ರಾವ್‌.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry