ಶನಿವಾರ, ಮೇ 8, 2021
23 °C

ಅಕ್ಕಿ ಆರಿಸುವಾಗ...

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

`ಅನ್ನಂ ಬ್ರಹ್ಮಾಸ್ಮಿ~ - ಎಂದ ಶ್ರೀಕೃಷ್ಣ ಪರಮಾತ್ಮ. ಅನ್ನವನ್ನು ವಿವಿಧ ರೋಗಗಳಿಗೆ ಔಷಧವಾಗಿ ನೀಡಬಹುದು ಎಂದಿತು ವೈದ್ಯ ಶಾಸ್ತ್ರ. `ಅಕ್ಕಿಯನು ತಿಂಬುವವನು ಹಕ್ಕಿಯಂತೆ ಹಾರುವನು~ ಎಂದರು ಜನಪದರು. `ಅನ್ನ ತಿನ್ನೋ ಬಾಯಲ್ಲಿ ಇಂಥ ಮಾತು ಬರಬಾರ‌್ದು...~ ಎಂಬ ಗಾದೆ ಮಾತೂ ಇದೆ.ಅನ್ನ ಎಂದರೆ ಅಮ್ಮನಷ್ಟೇ ಪ್ರೀತಿ. ಅದರಿಂದ ತಯಾರಾಗುವ ಖಾದ್ಯಗಳಲ್ಲಿ `ಆರೋಗ್ಯ ವಿಶೇಷಣ~ಗಳಿವೆ ಎಂದು ಗುರುತಿಸ್ದ್ದಿದು ಕೂಡ ನಮ್ಮ ಪ್ರಾಚೀನರು ಎಂಬುದು ವಿಶೇಷ.

ಏಷ್ಯಾ ರಾಷ್ಟ್ರಗಳ ಪ್ರಮುಖ ಪದಾರ್ಥ ಅನ್ನ.ಧಾರ್ಮಿಕ, ಸಾಮಾಜಿಕ, ಲೌಕಿಕ, ಪಾರಮಾರ್ಥಿಕ ಸಮಾರಂಭಗಳಲ್ಲಿ ಅನ್ನಕ್ಕೆ ಅಗ್ರ ಸ್ಥಾನ. ಪ್ರಾಚೀನ ವೈದ್ಯಶಾಸ್ತ್ರ ಗ್ರಂಥಗಳಲ್ಲಿ ಅನ್ನಕ್ಕೆ ಭೇದಿ, ವಾಂತಿ, ಜ್ವರ, ಮೂಲವ್ಯಾಧಿ, ಎದೆನೋವು, ಹಳೆಗಾಯ, ಸುಟ್ಟಗಾಯ, ದೇಹ ದುರ್ಬಲತೆಯಲ್ಲಿ ಬಳಕೆಯಾಗುವ ಸಂಜೀವಿನಿ ಎಂಬ ಉಲ್ಲೇಖವಿದೆ.ಚರ್ಮರೋಗ, ರಕ್ತದ ಏರೊತ್ತಡ, ಪಾರ್ಶ್ವವಾಯು, ಬಿಳಿಮುಟ್ಟು ಪರಿಹಾರಕ್ಕೆ ಇಂದಿಗೂ ಹಿಮಾಚಲದ ಪಶ್ಚಿಮ ಘಟ್ಟದ ಗುಡ್ಡಗಾಡು ಜನರು ವಿವಿಧ ಔಷಧ ಗುಣವಿರುವ ಅಕ್ಕಿಯ ಅನ್ನವನ್ನೇ ಬಳಸಿ ಚಿಕಿತ್ಸೆ ನೀಡುತ್ತಾರೆ.ಕೇರಳದಲ್ಲಿ `ನವರ~ ಎಂದು ಕರೆಯುವ ವಿಶೇಷ ತಳಿಯ ಅಕ್ಕಿಯ ಹೆಸರು ಹುಟ್ಟಿದ್ದು `ನೀವಾರ~ ಎಂಬ ಮೂಲ ದೇವಭಾಷೆಯ ಪದದಿಂದ. ಅಕ್ಕಿಯ ಪ್ರಭೇದವದು. ಮುಪ್ಪು ಮುಂದೂಡುವ ಮತ್ತು ದೇಹಾರೋಗ್ಯ ಕಾಪಾಡುವ ಪಂಚಕರ್ಮ ಚಿಕಿತ್ಸೆಯ ಪೂರ್ವ ಕರ್ಮಗಳಾದ ಸ್ನೇಹನ - ಸ್ವೇದನದಲ್ಲಿ ನೀವಾರ ಧಾನ್ಯದ ಪಾತ್ರ ಪ್ರಮುಖ. ಬಿಳಿಯಕ್ಕಿಗಿಂತ ಕಂದು, ಕೆಂಪು ಅಕ್ಕಿ ಉತ್ತಮ ಎಂದು ಪ್ರಾಚೀನರಿಗೇ ತಿಳಿದಿತ್ತೆಂಬುದನ್ನು ಆಹಾರ ತಜ್ಞೆ ಡಾ.ಎಚ್.ಎಸ್.ಪ್ರೇಮ ಉಪನ್ಯಾಸವೊಂದರಲ್ಲಿ ಹೇಳಿದ್ದರು.ಚೀನಾ ದೇಶದ ರಾಜವೈದ್ಯನೊಬ್ಬ ಕ್ರಿ. ಪೂ. 2800ರಲ್ಲಿಯೇ ಅಕ್ಕಿಯ ವೈದ್ಯಕೀಯ ಗುಣಧರ್ಮ ವರ್ಣಿಸಿದ್ದಾನೆ. ಕ್ರಿ. ಪೂ. 5000ರಲ್ಲಿ ವೇದಾಂಗ ಸಂಹಿತೆಗಳೂ ಅಕ್ಕಿ, ಭತ್ತ, ಭತ್ತದ ಬೇರಿನ ಮದ್ದಿನ ಗುಣಗಳನ್ನು ಪ್ರಶಂಸಿಸಿವೆ. ವಿಶ್ವ ಆರೋಗ್ಯ ಸಂಸ್ಧೆಯ ಪ್ರಕಾರ ಯಾವುದೇ ದೇಹದಲ್ಲಿ ನೀರಿನಂಶ ಕಡಿಮೆಯಾದಾಗ (ಡೀ ಹೈಡ್ರೇಷನ್) ರೈಸ್‌ವಾಟರ್ (ಗಂಜಿ ಅಗುಳುಸಹಿತ) ಅತ್ಯುತ್ತಮ ಪರಿಹಾರ.ಗೋಧಿ ಬಿಟ್ಟರೆ ವಿಶ್ವದ ಹಸಿವನ್ನು ನೀಗಿಸುತ್ತಿರುವುದು ಅಕ್ಕಿಯೇ. ವಿಶ್ವದ ಜನ ಸಂಖ್ಯೆಯ ಮೂರನೇ ಎರಡಂಶ ಜನ `ಅನ್ನ~ದಿಂದಲೇ ಬದುಕುತ್ತಿದ್ದಾರೆ. ತಮ್ಮ ಆಹಾರದ ಕ್ಯಾಲೊರಿಯ ಶೇಕಡಾ 80ರಷ್ಟು ಅಂಶವನ್ನು ಅಕ್ಕಿಯಿಂದಲೇ ಪಡೆಯುತ್ತಿದ್ದಾರೆ. ಅನ್ನದಲ್ಲಿ ಸಸಾರಜನಕ, ಕೊಬ್ಬು, ನಾರಿನಂಶ ಎಲ್ಲವೂ ಸರಿ ಪ್ರಮಾಣದಲ್ಲಿವೆ.ನಮ್ಮ ರಾಜ್ಯದಲ್ಲೂ ಪ್ರದೇಶಕ್ಕೊಂದು ಅಕ್ಕಿ ವೈವಿಧ್ಯವಿತ್ತು (ಕೆಲವೆಡೆ ಈಗಲೂ ಇವೆ). ಹಾಸನದಲ್ಲಿ `ರಾಜಮುಡಿ, ರಾಜಭೋಗ~, ಉತ್ತರ ಕನ್ನಡದಲ್ಲಿ `ಕೇಸರಿ~, ಕರಾವಳಿಯಲ್ಲಿ `ರಾಜಕಯಮೆ~, ಬಯಲು ಸೀಮೆಯಲ್ಲಿ `ಬಂಗಾರ ಸಣ್ಣ, ರತ್ನಚೂಡಿ, ಸಣ್ಣವ್ಯಾಳ್ಯ, ಗೌರಿಸಣ್ಣ..ಹೀಗೆ ಅಕ್ಕಿ ವೈವಿಧ್ಯವೇ ಇದೆ. ಪ್ರತಿ ಅಕ್ಕಿಗೂ ಒಂದೊಂದು ವಿಶೇಷ ಗುಣ. ಬೆಳಗಾವಿಯ `ಕರಿಗಿಜಿವಿಲಿ~ ಬಾಣಂತಿಯರಿಗೆ ಎದೆ ಹಾಲು ಹೆಚ್ಚಳಕ್ಕೆ ಉಪಯೋಗವಾದರೆ, `ನವರ~ ಮೂಲವ್ಯಾಧಿಗೆ ಉತ್ತಮ ಔಷಧ. ಕೆಂಪಕ್ಕಿ - ಸಕ್ಕರೆ ಕಾಯಿಲೆ ನಿಯಂತ್ರಣಕ್ಕಾದರೆ, `ಕರಿಭತ್ತ~ ಸರ್ಪಸುತ್ತು ರೋಗ ಉಪಶಮನಕ್ಕೆ ಔಷಧ.ಇಂಥ `ಔಷಧ ಹಾಗೂ ಪೌಷ್ಟಿಕ ಖಜಾನೆ~ಯ ಅಕ್ಕಿಗೆ ಈಗ `ಅಪರಾಧಿ~ ಸ್ಥಾನ. ಸಕ್ಕರೆ ಕಾಯಿಲೆಯವರಿಗೆ ಅಕ್ಕಿ ವರ್ಜ್ಯ. ಅಕ್ಕಿಯ ಖಾದ್ಯಗಳಿಂದಲೇ ಬೊಜ್ಜು ಎನ್ನುವ ಆರೋಪ. ಅಂಗೈಯಲ್ಲಿದ್ದ ಆಹಾರಯುಕ್ತ ಔಷಧವನ್ನು ಕೈಚೆಲ್ಲಿ, ಔಷಧದ ಅಂಗಡಿಗಳ ಎದುರು ಸರದಿ ಸಾಲಿನಲ್ಲಿ ನಿಲ್ಲುವಂತಹ ಸ್ಥಿತಿ ಇದೆ ಎಂದೂ ಕೆಲವರು ಹೇಳುತ್ತಾರೆ.ಇಂಥ ಸಮಸ್ಯೆಗಳನ್ನು ಗಮನಿಸಿದ ಹಲವು ಸ್ವಯಂ ಸೇವಾ ಸಂಸ್ಥೆಗಳು ನಮ್ಮ ನಡುವೆ ಅಲ್ಲಲ್ಲಿ ಉಳಿದುಕೊಂಡಿರುವ ದೇಸಿ ಭತ್ತ(ಅಕ್ಕಿ)ದ ತಳಿಗಳ ಸಂರಕ್ಷಣೆಗೆ ಮುಂದಾಗಿವೆ. ದಶಕಗಳಿಂದ `ದೇಸಿ ಅಕ್ಕಿ~ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. `ದೇಸಿ ಅಕ್ಕಿ ಹೊಟ್ಟೆಗಷ್ಟೇ ಅಲ್ಲ, ಮನಸ್ಸನ್ನು ಪ್ರಫುಲ್ಲಗೊಳಿಸುವ, ನಾಲಿಗೆಗೆ ರುಚಿ, ದೇಶಕ್ಕೆ ಶಕ್ತಿ, ರೋಗಕ್ಕೆ ಮದ್ದಾಗುತ್ತದೆ~ ಎಂಬ ಮಾಹಿತಿಯನ್ನೂ ಸಾರುತ್ತಿವೆ.ಇಂಥ ಮಾಹಿತಿಪೂರ್ಣ `ದೇಸಿ ಅಕ್ಕಿ ಮೇಳ~ ನಗರದ ಚಾಲುಕ್ಯ ವೃತ್ತದ ಸಮೀಪವಿರುವ ಬಸವ ಭವನದಲ್ಲಿ ಶುಕ್ರವಾರದಿಂದ ಆರಂಭವಾಗಲಿದೆ. ಸಹಜ ಆರ್ಗಾನಿಕ್ಸ್, ನಬಾರ್ಡ್ ಹಾಗೂ ಪ್ರಿಸ್ಟೀನ್ ಆರ್ಗಾನಿಕ್ಸ್ ಸಂಸ್ಥೆಗಳ ಸಹಯೋಗದಲ್ಲಿ ಮೂರು ದಿನ (6ರಿಂದ 8ರವರೆಗೆ) ಈ ಮೇಳವನ್ನು ಆಯೋಜಿಸಲಾಗಿದೆ. ದೇಸಿ ಅಕ್ಕಿ ಬೆಳೆಯುವ ರೈತರು, ಸಂಘ ಸಂಸ್ಥೆಗಳು, ತಳಿ ಸಂರಕ್ಷಕರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ.ನೂರಕ್ಕೂ ಹೆಚ್ಚು ದೇಸಿ ಅಕ್ಕಿ ತಳಿಗಳು, ಇನ್ನೂರಕ್ಕೂ ಹೆಚ್ಚು ದೇಸಿ ಭತ್ತದ ತಳಿಗಳು ಪ್ರದರ್ಶನ ಮತ್ತು ಮಾರಾಟಕ್ಕಿರುತ್ತವೆ. ಇಂಥ ಅಕ್ಕಿಗಳಿಂದ ತಯಾರಾಗುವ ಕಜ್ಜಾಯ, ಹೋಳಿಗೆ, ಹಪ್ಪಳ, ಸಂಡಿಗೆ, ಕೋಡುಬಳೆಯಂತಹ ಖಾದ್ಯಗಳೂ ಸವಿಯಲು ಲಭ್ಯ. ಜೊತೆಗೆ, ಅವುಗಳ ಮಹತ್ವದ ವಿವರಣೆಯೂ ಇರುತ್ತದೆ.ನಿಮಗೆ ಆಸಕ್ತಿ ಇದ್ದರೆ, ಈ ಮೇಳದಲ್ಲಿ ಏರ್ಪಡಿಸುವ `ಅಡುಗೆ ಸ್ಪರ್ಧೆ~ಯಲ್ಲೂ ಭಾಗವಹಿಸಬಹುದು. ಬಹುಮಾನ ಗೆಲ್ಲಬಹುದು. ಮೇಳದ ಹೆಚ್ಚಿನ ಮಾಹಿತಿಗೆ  ಈ ದೂರವಾಣಿಗಳಿಗೆ ಸಂಪರ್ಕಿಸಿ: 2661231, 74830-88144.ಮೇಳ ನಡೆಯುವ ಸ್ಥಳ : ಬಸವಭವನ, ಚಾಲುಕ್ಯ ವೃತ್ತದ ಹತ್ತಿರ, ದಿನಾಂಕ : ಏಪ್ರಿಲ್ 6ರಿಂದ 8.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.