ಶುಕ್ರವಾರ, ನವೆಂಬರ್ 22, 2019
25 °C

ಅಕ್ಕಿ ಗಿರಣಿ ಕಷ್ಟ-ಸುಖ

Published:
Updated:
ಅಕ್ಕಿ ಗಿರಣಿ ಕಷ್ಟ-ಸುಖ

ಗದ್ದೆಯಿಂದ ಕಣಜಕ್ಕೆ, ಕಣಜದಿಂದ ಗಿರಣಿಗೆ ಹೋಗುವ ಬಂಗಾರ ವರ್ಣದ ಬತ್ತ, ನಂತರ ಅಕ್ಕಿಯಾಗಿ, ಸಣ್ಣ ನುಚ್ಚಾಗಿ, ಎಣ್ಣೆ ಮಿಶ್ರಿತ ತೌಡಾಗಿ, ಜೊಳ್ಳಾಗಿ  ಪ್ರತ್ಯೇಕಗೊಳ್ಳುತ್ತದೆ. ಇದಿಷ್ಟೂ ಕೆಲಸವನ್ನು ಕ್ಷಣ ಮಾತ್ರದಲ್ಲಿ ಪೂರ್ಣಗೊಳಿಸುತ್ತಿವೆ ಆಧುನಿಕ ಅಕ್ಕಿ ಗಿರಣಿ.ಬತ್ತದ ಮೇಲಿನ ಹೊಟ್ಟು ತೆಗೆದು ತುಸು ಸ್ವಚ್ಛಗೊಳಿಸಿದರೆ ಕಚ್ಚಾ ಅಕ್ಕಿ ಸಿದ್ಧ. ನಂತರ ವೇಗವಾಗಿ ತಿರುಗುತ್ತಿರುವ ರಬ್ಬರ್ ರೋಲ್‌ಗಳ ನಡುವೆ ಹಾಯಿಸಿದರೆ(ಪಾಲಿಷಿಂಗ್) ಬೆಳ್ಳಗೆ ಫಳಗುಟ್ಟುವ ಅಕ್ಕಿ ಹೊರಬರುತ್ತದೆ. ಜತೆಗೇ ಸಾಕಷ್ಟು ಎಣ್ಣೆ ಅಂಶವನ್ನು ಹೊಂದಿರುವ ತೌಡು ಸಹ ಲಭಿಸುತ್ತದೆ. ಈ ತೌಡಿನಿಂದಲೇ ಖಾದ್ಯ ತೈಲವನ್ನೂ ತೆಗೆಯಲಾಗುತ್ತದೆ (ರೈಸ್‌ಬ್ರಾನ್ ಆಯಿಲ್).ಇನ್ನೊಂದೆಡೆ ಗಿರಣಿಯ ಹೊರಭಾಗದಲ್ಲಿ ಜಳ್ಳು ರಾಶಿಯಾಗಿ ಬೀಳುತ್ತದೆ. ಇದನ್ನು ಗ್ರಾಮೀಣ ಭಾಗದಲ್ಲಿ ಇಟ್ಟಿಗೆ ಭಟ್ಟಿಗಳಲ್ಲಿ, ಹೋಟೆಲ್‌ಗಳಲ್ಲಿ ಉರುವಲಾಗಿ ಬಳಸಲಾಗುತ್ತದೆ.ಗಿರಣಿ ಪಾತ್ರ

ಬತ್ತ ಅಕ್ಕಿಯಾಗಿ ಬದಲಾಗುವಲ್ಲಿ ಗಿರಣಿಗಳ ಪಾತ್ರ ಮಹತ್ವದ್ದು. ಕರ್ನಾಟಕದಲ್ಲಿ 2000ಕ್ಕೂ ಅಧಿಕ ಅಕ್ಕಿ ಗಿರಣಿಗಳಿವೆ. ಆದರೆ, ಆಧುನೀಕರಣದ ಸ್ಪರ್ಶವಾಗದೇ ಉದ್ಯಮ ಹಿನ್ನಡೆಯಲ್ಲಿದೆ. ಅರ್ಧದಷ್ಟು ಗಿರಣಿಗಳು ಮಾತ್ರವೇ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ.ಅಕ್ಕಿ ಗಿರಣಿ ಸ್ಥಿತಿಗತಿ

ದೇಶದ ಅತ್ಯಂತ ಹಳೆಯ ಹಾಗೂ ಕೃಷಿ ಸಂಸ್ಕರಣ ಉದ್ಯಮ ಅಕ್ಕಿ ಗಿರಣಿ. ಈ ಕ್ಷೇತ್ರದ ಸದ್ಯದ ವಾರ್ಷಿಕ ವಹಿವಾಟು ಅಂದಾಜು ್ಙ25,500 ಕೋಟಿಗೂ ಅಧಿಕ. ದೇಶದಲ್ಲಿ ಹಾಲಿ ಇರುವ ಗಿರಣಿಗಳಿಂದ ವಾರ್ಷಿಕ ಅಂದಾಜು 850 ಲಕ್ಷ ಟನ್ ಬತ್ತವನ್ನು ಸಂಸ್ಕರಿಸಲಾಗುತ್ತಿದ್ದು, ಶೇ 60ರಷ್ಟು ಜನಸಂಖ್ಯೆಗೆ ಅತಿಮುಖ್ಯ ಆಹಾರವಾಗಿದೆ.ದೇಶದ ಬಹಳಷ್ಟು ಅಕ್ಕಿ ಗಿರಣಿಗಳು  ಸಂಬಂಧಿಸಿದ ಇಲಾಖೆಗಳಲ್ಲಿ ನೋಂದಾಯಿಸಿಕೊಳ್ಳದ ಪರಿಣಾಮ ಅವುಗಳ ಖಚಿತ ಸಂಖ್ಯೆ ತಿಳಿಯುತ್ತಿಲ್ಲ. ಆದರೆ 82,000ಕ್ಕೂ ಹೆಚ್ಚು ಗಿರಣಿಗಳು ನೋಂದಾಯಿಸಿಕೊಂಡಿವೆ. ಬಹುತೇಕ ಘಟಕಗಳು ಅಧಿಕ ಸಾಮರ್ಥ್ಯದವಾಗಿವೆ ಎಂಬುದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ನಬಾರ್ಡ್)ನ ಅಂಕಿ-ಅಂಶಗಳಿಂದ ತಿಳಿದುಬರುತ್ತದೆ.ನೋಂದಣಿಯಾಗದ ಅಕ್ಕಿ ಗಿರಣಿಗಳಲ್ಲಿ ಬಹುತೇಕ ಘಟಕಗಳು ಹಳೆಯವು, ಇಲ್ಲವೇ ಸಾಂಪ್ರದಾಯಿಕ ಮಾದರಿಯವು. ಇವುಗಳಲ್ಲಿ ನಷ್ಟದ ಪ್ರಮಾಣ ಸಹಜವಾಗಿ ಹೆಚ್ಚಾಗಿರುತ್ತದೆ.ರಾಜ್ಯದಲ್ಲಿ...

ರಾಜ್ಯದಲ್ಲಿ ಸಣ್ಣ ಮತ್ತು ದೊಡ್ಡ ಪ್ರಮಾಣದವೂ ಸೇರಿದಂತೆ ಒಟ್ಟು 2,438 ಅಕ್ಕಿ ಗಿರಣಿಗಳಿದ್ದರೂ ಇವುಗಳಲ್ಲಿ ಬಹುತೇಕ ಹಳೆಯ ತಂತ್ರಜ್ಞಾನವುಳ್ಳವೇ ಆಗಿದ್ದು, ಕಡಿಮೆ ಸಾಮರ್ಥ್ಯ ಹೊಂದಿವೆ. `ಅಕ್ಕಿ ಗಿರಣಿಗಳ ಪೈಕಿ 2,170 ರಾ ರೈಸ್ (ಕಚ್ಚಾ ಅಕ್ಕಿ), 268 ಬಾಯಿಲ್ಡ್ ರೈಸ್(ಕುಚ್ಚಲಕ್ಕಿ) ತಯಾರಿಸುವ ಗಿರಣಿಗಳಾಗಿವೆ. ಒಟ್ಟು 800 ಗಿರಣಿಗಳಷ್ಟೇ ಈವರೆಗೆ ಯಾಂತ್ರಿಕವಾಗಿ ಆಧುನೀಕರಣಗೊಂಡಿವೆ. ಗಿರಣಿಗಳು ಆಧುನೀಕರಣಗೊಂಡಲ್ಲಿ ಗ್ರೇಡಿಂಗ್ ಪದ್ಧತಿಯಿಂದ ಗ್ರಾಹಕರಿಗೆ ಗುಣಮಟ್ಟದ ಅಕ್ಕಿ ಪೂರೈಸಬಹುದು. ವಿಶ್ವದಾದ್ಯಂತ ಉತ್ಪಾದನೆ ಆಗುವ ಒಟ್ಟಾರೆ ಬತ್ತದಲ್ಲಿ ಶೇ 21ರಷ್ಟು ಬತ್ತ ಭಾರತದ ಗದ್ದೆಗಳಿಂದಲೇ ಬರುತ್ತದೆ. 2035ರ ವೇಳೆಗೆ ದೇಶದಲ್ಲಿ 55 ಕೋಟಿ ಟನ್ ಅಕ್ಕಿ ಉತ್ಪಾದನೆ ಗುರಿ ಹೊಂದಲಾಗಿದ್ದು, ಗಿರಣಿಗಳ ಆಧುನೀಕರಣದಿಂದ ಮಾತ್ರ ಈ ಗುರಿ ತಲುಪಲು ಸಾಧ್ಯ' ಎನ್ನುತ್ತಾರೆ `ಮಿಲ್‌ಟೆಕ್ ಮಿಷನರಿ' ಕಂಪೆನಿ ಅಧಿಕಾರಿ ರಾಜೇಶ್ ಕಶ್ಯಪ್.ಸಣ್ಣ ಕೈಗಾರಿಕೆ

ಅಕ್ಕಿ ಗಿರಣಿಗಳು ಸಣ್ಣ ಕೈಗಾರಿಕೆ ವ್ಯಾಪ್ತಿಗೆ ಬರುತ್ತವೆ. ಗಿರಣಿಗಳ ಆಧುನೀಕರಣಕ್ಕೆ ಸಹಾಯಧನವೇನೋ ಮಂಜೂರಾಗಿ 3-4    ವರ್ಷಗಳೇ ಕಳೆದಿವೆ. ಆದರೆ, ಈವರೆಗೂ ಹಣ ಬಿಡುಗಡೆ ಆಗಿಯೇ ಇಲ್ಲ. ಗಿರಣಿಗಳನ್ನು ಆರಂಭಿಸಲು ಕೇಂದ್ರದಿಂದ ಸಬ್ಸಿಡಿ ನೆರವೂ ಸಿಗಬೇಕು. ಸದ್ಯ ರಾಜ್ಯದ ಗಿರಣಿಗಳಲ್ಲಿ ಶೇ 30ರಷ್ಟು ಮಾತ್ರವೇ ಆಧುನೀಕರಣಗೊಂಡಿವೆ. ಬತ್ತವನ್ನು ಅಕ್ಕಿಯನ್ನಾಗಿಸಲು ಈಗಲೂ ರೈತರು ಬಹುದೂರ ತೆರಳಬೇಕಾಗಿದೆ. ಇದರಿಂದ ಸಾಗಣೆ ವೆಚ್ಚದ ಜತೆಗೆ ನಷ್ಟದ ಪ್ರಮಾಣವೂ ಹೆಚ್ಚಾಗುವುದರಿಂದ ಲಾಭ ಕೈತಪ್ಪಿ ಹೋಗುತ್ತದೆ. 2015ರ ವೇಳೆಗೆ ಎಲ್ಲ ಗಿರಣಿಗಳೂ ಆಧುನೀಕರಣಗೊಂಡಲ್ಲಿ ಮಾತ್ರ ನೆರೆಯ ರಾಜ್ಯಗಳಿಗೆ ಮಾರುಕಟ್ಟೆಯಲ್ಲಿ ತುರುಸಿನ ಸ್ಪರ್ಧೆ ನೀಡಬಹುದು.ಗಿರಣಿಗೆ ಏನೇನು ಬೇಕು ?

ಸುಧಾರಿತ ಅಕ್ಕಿ ಗಿರಣಿ ಸ್ಥಾಪಿಸಲು ಮುಖ್ಯವಾಗಿ ಬೇಕಾಗಿದ್ದು ಜಾಗ. ಸಾಮಾನ್ಯವಾಗಿ ಎರಡರಿಂದ ಎರಡೂವರೆ ಎಕರೆ ಜಾಗದಲ್ಲಿ ಆಧುನಿಕ ಘಟಕವನ್ನು ಆರಂಭಿಸಲು ಯಾವ ತೊಂದರೆಯೂ ಆಗದು.ಒಳಚರಂಡಿ, ಸಂಪರ್ಕ ರಸ್ತೆ, ಸಮರ್ಪಕ ನೀರು ಪೂರೈಕೆ ವ್ಯವಸ್ಥೆ ಇದ್ದಲ್ಲಿ ಘಟಕದ ಸುಗಮ ಕಾರ್ಯಾಚರಣೆಗೆ ಅನುಕೂಲ.ಯಂತ್ರೋಪಕರಣ

ಬತ್ತವನ್ನು ಅಕ್ಕಿಯಾಗಿಸುವ ಪ್ರಕ್ರಿಯೆಗೆ ಹಲವು ಯಂತ್ರೋ ಪಕರಣಗಳು ಅಗತ್ಯ. ಹೆಚ್ಚಿನ ಸಾಮರ್ಥ್ಯದ ಜತೆಗೆ ವಿದ್ಯುತ್ ಬಳಕೆ ಪ್ರಮಾಣಕ್ಕೆ ಅನುಗುಣವಾಗಿ ಯಂತ್ರಗಳೂ ಗಿರಣಿಯಲ್ಲಿ ಇರಬೇಕಾಗುತ್ತದೆ. ಹುಲ್ಲಿನ ತುಣುಕು, ಮಣ್ಣಿನ ಹೆಂಟೆ, ಸಣ್ಣ ಕಲ್ಲುಗಳು ಮಿಶ್ರಿತವಾಗಿರುವ ಕಚ್ಚಾ ಬತ್ತವನ್ನು ಸ್ವಚ್ಛಗೊಳಿಸುವ ಯಂತ್ರ, ನಂತರ ಬತ್ತವನ್ನು ಗಾತ್ರಕ್ಕೆ ಅನುಗುಣವಾಗಿ ಬೇರ್ಪಡಿಸುವ ಉಪಕರಣ, ಅಕ್ಕಿ ಹೆಚ್ಚು ನುಚ್ಚಾಗದಂತೆ ಬತ್ತಕ್ಕೆ ಶಾಖ ನೀಡಲು ಹಬೆ(ಸ್ಟೀಮ್) ಯಂತ್ರ, ಬತ್ತದ ಹೊಟ್ಟು ತೆಗೆಯುವ ರಬ್ಬರ್ ರೋಲರ್, ಅಕ್ಕಿಗೆ ಪಾಲಿಷ್ ಮಾಡುವ ಉಪಕರಣ, ಅಕ್ಕಿಯನ್ನು ಮತ್ತೆ ಶುದ್ಧೀಕರಿಸಿ ಗಾತ್ರಕ್ಕೆ ಅನುಗುಣವಾಗಿ (ದೊಡ್ಡ ಕಾಳು, ನುಚ್ಚು, ಚೂರು) ಜಾಲರಿ ಆಡಿಸುತ್ತಾ ಬೇರ್ಪಡಿಸುವ ಉಪಕರಣ.ಹೆಚ್ಚಿನ ಸಾಮರ್ಥ್ಯದ ಮೋಟಾರ್, ಬೆಲ್ಟ್, ಪುಲ್ಲಿ, ರಾಡ್‌ಗಳು ಸೇರಿದಂತೆ ವಿವಿಧ ಉಪಕರಣಗಳೂ ಒಂದು ಗಿರಣಿ ಸ್ಥಾಪನೆಗೆ ಅಗತ್ಯ.

`ಸ್ಟೀಮ್ ರೈಸ್' ಪ್ರಕ್ರಿಯೆ ವೇಳೆ ಹಬೆ ಹಾಯಿಸುವ   ವಾಲ್ವ್‌ನ ಸಮಯದತ್ತ ನಿಗಾ ಇಡುವುದು ಮುಖ್ಯ. ಎಲ್ಲಾ ಬತ್ತ ಒಂದೇ ಸಮಯದಲ್ಲಿ ಹಬೆ ಪ್ರಕ್ರಿಯೆಗೆ ಒಳಗಾಗಬೇಕು. ಅಂತೆಯೇ ಬಿಸಿ ಬತ್ತವನ್ನು ಬೇಗ ತಂಪು ಮಾಡಬಾರದು. ಆ ರೀತಿ ಮಾಡಿದಲ್ಲಿ ಅಕ್ಕಿ ಒಳಗೇ ತುಂಡಾಗಿ ಹೆಚ್ಚು ನುಚ್ಚಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಅನುಭವಿ ಕೆಲಸಗಾರರು.ಸುಧಾರಿತ ಘಟಕ

ಒಂದು ಅಕ್ಕಿ ಗಿರಣಿ ಸುಧಾರಿತ ಘಟಕ ಎನಿಸಿಕೊಳ್ಳಲು, ಕಚ್ಚಾ ಬತ್ತ ಸಂಗ್ರಹಣೆಗೆ ದೊಡ್ಡ ಸ್ಥಳಾವಕಾಶ, ಶುದ್ಧೀಕರಿಸಿದ ಅಕ್ಕಿಯನ್ನು ಕೆಡದಂತೆ, ಹುಳುಗಳು ಬೀಳದಂತೆ ದಾಸ್ತಾನು ಮಾಡಲು ಗೋದಾಮು ವ್ಯವಸ್ಥೆ, ಯಂತ್ರೋಪಕರಣ ಕೋಣೆ, ಶುದ್ಧೀಕರಣ ಘಟಕ ಒಳಗೊಂಡಂತೆ ಹಲವು  ಮೂಲಸೌಲಭ್ಯಗಳನ್ನು ಹೊಂದಿರಬೇಕಾಗುತ್ತದೆ. ಬಾಯ್ಲರ್, ಕಚೇರಿ, ಭದ್ರತಾ ಕೋಣೆ ಮತ್ತಿತರ ಸೌಲಭ್ಯಗಳಿದ್ದಲ್ಲಿ ಅದನ್ನು ಆಧುನಿಕ ಅಕ್ಕಿ ಗಿರಣಿ ಘಟಕಗಳ ಸಾಲಿಗೆ ಸೇರಿಸಬಹುದು. ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯುತ್ ಬೇಕಿದೆ. ವಿದ್ಯುತ್ ಕಡಿತವಾದಾಗ ತುರ್ತು ಬಳಕೆಗೆ ಜನರೇಟರ್ ಅನುಕೂಲವೂ ಇರಬೇಕಾಗುತ್ತದೆ.ಅಗತ್ಯ ಸಿಬ್ಬಂದಿ

ಇಡೀ ಗಿರಣಿಯನ್ನು ಸಮರ್ಪಕವಾಗಿ ನಿರ್ವಹಿಸಲು ಒಬ್ಬ ವ್ಯವಸ್ಥಾಪಕ, ಒಬ್ಬ ಮೇಲ್ವಿಚಾರಕ, ಒಬ್ಬ ಲೆಕ್ಕಾಧಿಕಾರಿ, ಮೂವರು ಮೆಷಿನ್ ಆಪರೇಟರ್ಸ್‌, ಇವರ ಜತೆಗೆ ಮೂವರು ನುರಿತ ಕೆಲಸಗಾರರು, ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 12 ಮಂದಿ ಕೆಲಸಗಾರರು ಅಗತ್ಯ. ಅಧಿಕ ಸಾಮರ್ಥ್ಯದ ಘಟಕವಾದಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚುತ್ತದೆ.ಗಿರಣಿಗೆ ಸಾಲ

ಅಕ್ಕಿ ಗಿರಣಿ ಆರಂಭಕ್ಕೆ ಅಗತ್ಯವಾದ ಸಾಲವನ್ನು ಬ್ಯಾಂಕುಗಳು ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳು ನೀಡುತ್ತವೆ. ಗಿರಣಿ ಸ್ಥಾಪನೆ ವಿಷಯದಲ್ಲಿ ಸಹಕಾರಿ ಸಂಘಗಳು, ನಿಗಮಗಳು, ಎಪಿಎಂಸಿಗಳು, ಸ್ವಯಂಸೇವಾ ಸಂಸ್ಥೆಗಳ ನೆರವೂ ಅಗತ್ಯವಾಗುತ್ತದೆ.ವಿದ್ಯುತ್-ಸ್ವಾವಲಂಬನೆ

ಮೂರು ಹಂತಗಳಲ್ಲಿ ಸಂಸ್ಕರಣೆಯಾಗುವ ಬತ್ತ, ಆಧುನಿಕ ಯಂತ್ರೋಪಕರಣಗಳಲ್ಲಿ ಶೀಘ್ರವಾಗಿ ಡ್ರೈ ಆಗಿ ಹೊರಬರುತ್ತದೆ. ಆದರೆ, ಮಳೆಗಾಲ, ಚಳಿಗಾಲದಲ್ಲಿ ರೈತರು ಬತ್ತವನ್ನು ತೇವಾಂಶವಿರದಂತೆ ಸಂಗ್ರಹಿಸಿಟ್ಟಿದ್ದರೆ ಗಿರಣಿಗಳಿಗೆ ಕಷ್ಟ ಕಡಿಮೆ. ಇಲ್ಲವಾದಲ್ಲಿ ಬತ್ತವನ್ನು ಅಕ್ಕಿಯಾಗಿಸುವುದಕ್ಕೆ ಮುನ್ನ ಡ್ರೈಯರ್‌ನಲ್ಲಿ ಹೆಚ್ಚು ಸಮಯ ಒಣಗಿಸಬೇಕಾಗುತ್ತದೆ. ಆಗ ಹೆಚ್ಚು ವಿದ್ಯುತ್ ವ್ಯರ್ಥವಾಗುತ್ತದೆ ಎನ್ನುತ್ತಾರೆ ಗಿರಣಿಯಲ್ಲಿ ನುರಿತ ಕೆಲಸಗಾರರು.

`ಅಕ್ಕಿ ಗಿರಣಿಗಳು ವಿದ್ಯುತ್ ಬಳಸಲಿ ಬಿಡಲಿ ತಿಂಗಳಿಗೆ ಒಂದು ಗಿರಣಿ ಕನಿಷ್ಠ ್ಙ45,000ದಿಂದ 50,000ವರೆಗೂ ವಿದ್ಯುತ್ ಬಿಲ್ ಪಾವತಿಸಬೇಕಿದೆ.ಬತ್ತದ ಜೊಳ್ಳು ಉರಿಸಿ ಶಾಖದಿಂದ  ವಿದ್ಯುತ್ ತಯಾರಿಸಬಹುದು ಎಂಬ ಮಾತುಗಳೇನೋ ಕೇಳಿಬರುತ್ತಿವೆ. ಆದರೆ, ಇಂತಹುದೊಂದು `ಜೊಳ್ಳಿನ ಶಾಖದ ವಿದ್ಯುತ್ ಘಟಕ' ಆರಂಭಿಸಲು ರೂ25 ಕೋಟಿ ಬಂಡವಾಳ ಬೇಕು. ಇದಕ್ಕೆ ಅಕ್ಕಿ ಗಿರಣಿ ಮಾಲೀಕರು ಸಹಕಾರ ಸಂಘಗಳನ್ನು ರೂಪಿಸಬೇಕು. ನಾವು ಶೇ 20ರಷ್ಟು ಬಂಡವಾಳ ಹಾಕಿದಲ್ಲಿ ಕೇಂದ್ರ ಸರ್ಕಾರ ಶೇ 80ರಷ್ಟು ಸಬ್ಸಿಡಿ ನೀಡುತ್ತದೆ' ಎನ್ನುತ್ತಾರೆ ಕರ್ನಾಟಕ ರಾಜ್ಯ ಅಕ್ಕಿ ಗಿರಣಿದಾರರ ಸಂಘದ ಕಾರ್ಯಾಧ್ಯಕ್ಷ ಬಿ.ಎಂ.ನಂಜಯ್ಯ.`ಅಕ್ಕಿ ಸಂಸ್ಕರಣೆ, ಗುಣಮಟ್ಟ ಕಾಪಾಡುವಿಕೆ, ಸಂಗ್ರಹಗಳ ನಡುವೆ ಸರ್ಕಾರದ ನಿರ್ಲಕ್ಷ್ಯ, ವಿದ್ಯುತ್ ಕೊರತೆಯ ನಡುವೆ ಅಕ್ಷರಶಃ ಅಕ್ಕಿ ಉದ್ಯಮ ನಲುಗುವಂತಾಗಿದೆ. ಅಪಾರ ಬಂಡವಾಳ ಬೇಡುವ ಈ ಉದ್ಯಮದಲ್ಲಿ ತಾಳ್ಮೆ ಮತ್ತು ದೂರದೃಷ್ಟಿ ಇದ್ದಲ್ಲಿ ಲಾಭ ಗ್ಯಾರಂಟಿ' ಎನ್ನುತ್ತಾರೆ ಅಕ್ಕಿ ಗಿರಣಿ ಕ್ಷೇತ್ರದ ಹಿರಿಯ ಉದ್ಯಮಿಗಳು.ಸವಾಲು-ಸಮಸ್ಯೆ

ಕಚ್ಚಾವಸ್ತು ಕೊರತೆ, ಅಸಮರ್ಪಕ ವಿದ್ಯುತ್ ಪೂರೈಕೆ ಮತ್ತು ಸರ್ಕಾರದ ವಿವಿಧ ನಿಯಮಗಳು ಅಕ್ಕಿ ಗಿರಣಿ ಸ್ಥಾಪನೆಯನ್ನು ತುಸು ಕಷ್ಟದ ಕೆಲಸವಾಗಿಸಿವೆ ಎನ್ನುವುದು ಗಿರಣಿಗಳ ಮಾಲೀಕರ ಬೇಸರದ ಮಾತು.ಜತೆಗೆ `ಲೆವಿ ಅಕ್ಕಿ' ಎಂಬುದೂ ದೊಡ್ಡ ಸಮಸ್ಯೆಯಾಗಿದೆ. ಲೆವಿಗಾಗಿಯೇ ಈ ಹಿಂದೆ ಬೆಳೆಯಲಾಗುತ್ತಿದ್ದ ಐಆರ್-64, ಐಆರ್-8 ಮತ್ತು ಹಂಸ ಬತ್ತ ತಳಿಯನ್ನು ಇತ್ತೀಚಿನ ವರ್ಷಗಳಲ್ಲಿ ರೈತರು ಹೆಚ್ಚಾಗಿ ಬೆಳೆಯುತ್ತಿಲ್ಲ. ಬಹುತೇಕರು ಸೋನಾ ಮಸೂರಿ ತಳಿಗೇ ಆದ್ಯತೆ ನೀಡುತ್ತಾರೆ. ದಪ್ಪ ಅಕ್ಕಿ ಬಗ್ಗೆ ಬತ್ತ ಬೆಳೆಗಾರರೂ ಅಷ್ಟಾಗಿ ಒಲವು ತೋರದೇ ಇರುವುದು `ಲೆವಿ' ಸಮಸ್ಯೆಯ ಉಲ್ಬಣಕ್ಕೆ ಕಾರಣ.`ಲೆವಿ ಅಕ್ಕಿ ಉತ್ಪಾದನೆಯೇ ಕಡಿಮೆಯಾಗಿರುವಾಗ ಎಲ್ಲಿಂದ ಲೆವಿ ಪಾವತಿಸಲು ಸಾಧ್ಯ? ಲೆವಿ ಸಲ್ಲಿಸದೇ ಇದ್ದರೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕು. ಅಲ್ಪಪ್ರಮಾಣದಲ್ಲಿ ಅಕ್ಕಿ ಸಂಗ್ರಹಿಸಿಟ್ಟಿದ್ದರೂ ದಾಳಿ ನಡೆಯುತ್ತದೆ ಎನ್ನುವುದು ಗಿರಣಿ ಮಾಲೀಕರ ಅಳಲು.ವರ್ಷಕ್ಕೆ ಎರಡು ಬೆಳೆ ಆಧರಿಸಿ ಕೆಲಸ ನಿರ್ವಹಿಸುತ್ತಿರುವ ಅಕ್ಕಿ ಗಿರಣಿಗಳಿಗೆ ಕನಿಷ್ಠ 10 ತಿಂಗಳಾದರೂ ಕೆಲಸ ನಿರ್ವಹಿಸುವಂತಹ ಪರಿಸರ ನಿರ್ಮಿಸಬೇಕು. ಸೋನಾ ಮಸೂರಿ ಮತ್ತು ದಪ್ಪ ಅಕ್ಕಿ ನಡುವೆ ಒಂದು ಕ್ವಿಂಟಲ್‌ಗೆ ಕನಿಷ್ಠ ್ಙ280ರಿಂದ 300ರಷ್ಟು ವ್ಯತ್ಯಾಸವಿದೆ. ಸೋನಾ ಮಸೂರಿಯನ್ನೇ ಲೆವಿಗೆ ಪೂರೈಸಿದಲ್ಲಿ ಒಂದು ಲೋಡ್‌ಗೆ (10 ಟನ್) ಕನಿಷ್ಠ ್ಙ20,000ದಿಂದ 30,000ವರೆಗೂ ನಷ್ಟವಾಗುತ್ತದೆ. ಲಕ್ಷಗಟ್ಟಲೆ ಬಂಡವಾಳ ಹೂಡಿ, ಸರ್ಕಾರಿ ನಿಯಮಗಳನುಸಾರ ಕೆಲಸ ನಿರ್ವಹಿಸಿದರೂ ಲಾಭ ಮಾತ್ರ ಅಷ್ಟಾಗಿ ದಕ್ಕುತ್ತಿಲ್ಲ ಎನ್ನುವುದು ಅಕ್ಕಿ ಗಿರಣಿ ಮಾಲೀಕರ ಕೊರಗು.ರಾಜ್ಯದಲ್ಲಿ 2011-12ರಲ್ಲಿ 2.60 ಲಕ್ಷ ಟನ್ ಲೆವಿ ಅಕ್ಕಿ ಸಂಗ್ರಹಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲೇ 28,766 ಮೆಟ್ರಿಕ್ ಟನ್ ಅಕ್ಕಿ ಸಂಗ್ರಹಿಸಲಾಗಿದೆ. ರೈತರು ಕೂಡಾ ಗುಣಮಟ್ಟದ ಬತ್ತ ಬೆಳೆಯುವತ್ತ ಆದ್ಯತೆ ನೀಡಬೇಕು. ಆಗ ಮಾತ್ರವೇ ಗುಣಮಟ್ಟದ ಅಕ್ಕಿ ದೊರೆಯುತ್ತದೆ. ಸರ್ಕಾರ ಲೆವಿಗೆ ವಿನಾಯ್ತಿ ನೀಡಬೇಕು ಎಂಬುದು ಕರ್ನಾಟಕ ರಾಜ್ಯ ಅಕ್ಕಿ ಗಿರಣಿದಾರರ ಸಂಘದ ಒತ್ತಾಯ.ಅಗತ್ಯ ಬಂಡವಾಳ

ಆಧುನಿಕ ಅಕ್ಕಿ ಗಿರಣಿ ಆರಂಭಿಸಲು ಅಗತ್ಯವಾದ ಯಂತ್ರೋಪಕರಣಗಳಿಗೆ ಕನಿಷ್ಠ ರೂ. 25 ಲಕ್ಷ ವೆಚ್ಚವಾಗುತ್ತದೆ. ಇನ್ನು  ಗಿರಣಿ ಕಟ್ಟಡ, ಗೋದಾಮು ಮೊದಲಾದವಕ್ಕೆ ಕನಿಷ್ಠ ರೂ. 35 ಲಕ್ಷ ಬೇಕಾಗುತ್ತದೆ. ಒಂದು ಪುಟ್ಟ ಆಧುನಿಕ ಅಕ್ಕಿ ಗಿರಣಿ ಸ್ಥಾಪನೆಗೆ ಕನಿಷ್ಠ ರೂ. 65 ಲಕ್ಷದಿಂದ 70 ಲಕ್ಷವಾದರೂ ಬೇಕಾಗುತ್ತದೆ. ಭೂಮಿ ಲೆಕ್ಕ ಪತ್ರ್ಯೇಕ.ಬಿನ್ನಿಮಿಲ್

`ಗಿರಣಿಗೆ ಬಿನ್ನಿ ಮಿಲ್ ಅಳವಡಿಸಿಕೊಳ್ಳುವುದಾದರೆ ಯಂತ್ರೋಪಕರಣಕ್ಕೆ ರೂ. 20 ಲಕ್ಷ ವಿನಿಯೋಗಿಸಬೇಕು. ಕಟ್ಟಡಕ್ಕೆ ರೂ. 25-30 ಲಕ್ಷ ಬೇಕಾಗುತ್ತದೆ. ವಿದ್ಯುತ್ ಸಂಪರ್ಕ, ಮೋಟರ್, ಗಿರಣಿ ಲೈಸೆನ್ಸ್‌ಗೆ ರೂ. 5 ಲಕ್ಷದವರೆಗೂ ವೆಚ್ಚವಾಗುತ್ತದೆ. ಜತೆಗೆ ಗಿರಣಿಯಲ್ಲಿನ ನಿರಂತರ ವಹಿವಾಟು ಮತ್ತು ಯಾಂತ್ರಿಕ ಚಟುವಟಿಕೆ ಸತತವಾಗಿರುವಂತೆ ನೋಡಿಕೊಳ್ಳಲು ಸಾಕಷ್ಟು ಪ್ರಮಾಣದಲ್ಲಿ ಬತ್ತವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಇದಕ್ಕೆ ರೂ. 20 ಲಕ್ಷದಿಂದ 25 ಲಕ್ಷದಷ್ಟು ಬಂಡವಾಳ (ರನ್ನಿಂಗ್ ಕ್ಯಾಪಿಟಲ್) ಬೇಕಾಗುತ್ತದೆ' ಎನ್ನುತ್ತಾರೆ ಹಾಸನ ಜಿಲ್ಲೆಯ ಬಸವಾಪಟ್ಟಣದಲ್ಲಿ ಅಕ್ಕಿಗಿರಣಿ ಹೊಂದಿರುವ ಯುವ ಉದ್ಯಮಿ ಜಿ. ಚನ್ನಬಸಪ್ಪ.ಗಂಗಾವತಿ, ತುಮಕೂರು ಸೇರಿದಂತೆ ಕೆಲವೆಡೆ(ಬತ್ತ ಹೆಚ್ಚು ಬೆಳೆಯುವ ಪ್ರದೇಶ) ದೊಡ್ಡ ಪ್ರಮಾಣದಲ್ಲಿಯೇ ಅಕ್ಕಿ ಗಿರಣಿ ಸ್ಥಾಪಿಸುತ್ತಾರೆ. ಈ ದೊಡ್ಡ ರೈಸ್ ಮಿಲ್‌ಗಳಿಗೆ ಅಗತ್ಯವಾದ ಯಂತ್ರೋಪಕರಣಕ್ಕೇ ರೂ. 1.50 ಕೋಟಿ ವೆಚ್ಚವಾಗುತ್ತದೆ. ಅಷ್ಟೇ ದೊಡ್ಡ ಗಾತ್ರದ ಕಟ್ಟಡ ನಿರ್ಮಿಸಬೇಕು. ಅದಕ್ಕೂ ಕನಿಷ್ಠ ರೂ. 75 ಲಕ್ಷದಿಂದ 80 ಲಕ್ಷವಾದರೂ ಬೇಕಾಗುತ್ತದೆ. ಗಿರಣಿಯ ಸಾಮರ್ಥ್ಯಕ್ಕೆ ತಕ್ಕಂತೆ ನಿತ್ಯ ವಹಿವಾಟು ಬಂಡವಾಳ(ರನ್ನಿಂಗ್ ಕ್ಯಾಪಿಟಲ್)ಕ್ಕೆ ರೂ. 2 ಕೋಟಿಯಷ್ಟನ್ನಾದರೂ ಮೀಸಲಿಡಬೇಕು. ಅಂದರೆ, ಗಿರಣಿ ದೊಡ್ಡ ಸಾಮರ್ಥ್ಯದ್ದಾದರೆ ಬಂಡವಾಳವೂ ಭಾರಿ. ಅಂದಾಜು ರೂ. 4.50 ಕೋಟಿಯಷ್ಟು ಬೇಕಾಗುತ್ತದೆ ಎನ್ನುತ್ತಾರೆ 30 ವರ್ಷಗಳಿಂದಲೂ ಕುಟುಂಬದ ಅಕ್ಕಿ ಗಿರಣಿಯಲ್ಲಿ ಅನುಭವ ಪಡೆದಿರುವ ಚನ್ನಬಸಪ್ಪ.

ಪ್ರತಿಕ್ರಿಯಿಸಿ (+)