ಭಾನುವಾರ, ಮೇ 16, 2021
23 °C

`ಅಕ್ಕಿ ನೀಡುವ ಬದಲು ಕೆಲಸ ಕೊಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಒಂದು ರೂಪಾಯಿಗೆ ಕೆ.ಜಿ ಅಕ್ಕಿಯನ್ನು ನೀಡುವುದರಿಂದ ಬಡವರ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ಬದಲಿಗೆ ಹೆಚ್ಚು ಹೆಚ್ಚು ಕೂಲಿ ನೀಡುವ ಮೂಲಕ, ದುಡಿಮೆಗೆ ಹಚ್ಚುವ ಮೂಲಕ ಅವರನ್ನು ಸಶಕ್ತರನ್ನಾಗಿ ಮಾಡಬೇಕು. ಆ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ರೂಪಿಸಬೇಕು' ಎಂದು ಸಾಣೇಹಳ್ಳಿ ಮಠದ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಬೊಮ್ಮನಾಯಕನಹಳ್ಳಿ ಕೃಷ್ಣಪ್ಪ ಅವರ `ಬಯಲು ಸೀಮೆಯ ಕತೆಗಳು' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ರೈತರ ಆತ್ಮಹತ್ಯೆ, ಮಹಿಳೆಯ ಶೋಷಣೆಗಳಲ್ಲದೆ ಅನೇಕ ಉತ್ತಮ ಅಂಶಗಳು ಗ್ರಾಮಗಳಲ್ಲಿವೆ. ನಕರಾತ್ಮಕ ಚಿಂತನೆಗಳಿಂದ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ' ಎಂದು ಅವರು ಹೇಳಿದರು `ಕೃಷ್ಣಪ್ಪ ಅವರ ಮುಂದಿನ ಕತೆಗಳು ಸಕಾರಾತ್ಮಕ ದೃಷ್ಟಿಕೋನದಿಂದ ರಚನೆಯಾಗಬೇಕು' ಎಂದು ಕಿವಿಮಾತು ಹೇಳಿದರು.

ಕಾವ್ಯಮಂಡಲದ ನಿರ್ದೇಶಕ ಎಲ್.ಎನ್.ಮುಕುಂದರಾಜ್ ಮಾತನಾಡಿ, `ಕುವೆಂಪು, ಜಯಂತ ಕಾಯ್ಕಿಣಿ ಕತೆಗಳು ಮಾತ್ರ ಕತೆಗಳು ಎಂದು ಆಧುನಿಕ ವಿಮರ್ಶಕರು ಭಾವಿಸಿದ್ದಾರೆ. ಕೃಷ್ಣಪ್ಪ ಅವರಂತಹ ಗ್ರಾಮೀಣ ಲೇಖಕರ ಕತೆಗಳು ಎಲ್ಲಿಯೂ ಚರ್ಚೆಗೆ ಒಳಗಾಗುತ್ತಿಲ್ಲ. ಇದರಿಂದಾಗಿ ಅವರ ಆಶಯಗಳು ಮರೆಯಾಗುತ್ತಿವೆ' ಎಂದು ವಿಷಾದಿಸಿದರು.`ಕೃಷ್ಣಪ್ಪ ಅವರ ಕತೆಗಳು ಆಳವಾದ ಜೀವನಾನುಭವದಿಂದ ಕೂಡಿವೆ. 3-4 ದಶಕಗಳ ಹಿಂದಿನ ಗ್ರಾಮಗಳ ಸ್ಥಿತಿ, ದಲಿತರು, ಮಹಿಳೆಯರು ಮೇಲಿನ ಶೋಷಣೆ, ರೈತರ ಆತ್ಮಹತ್ಯೆಯಂತಹ ವಿಷಯಗಳು ಅವರ ಕತೆಯಲ್ಲಿ ಇವೆ. ಒಂದು ನೀಳ್ಗತೆ ಸೇರಿದಂತೆ 56 ಕತೆಗಳು ಕೃತಿಯಲ್ಲಿ ಇವೆ' ಎಂದರು.ಲೇಖಕ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, `ಗ್ರಾಮೀಣ ಭಾರತದ ನಿಜವಾದ ಚಿತ್ರಣ ಕೃಷ್ಣಪ್ಪ ಅವರ ಕೃತಿಯಲ್ಲಿ ಅನಾವರಣಗೊಂಡಿದೆ. ಕೃಷ್ಣಪ್ಪ ಅವರು ದಲಿತರಲ್ಲದಿದ್ದರೂ ದಲಿತರ ಮೇಲಿನ ಶೋಷಣೆಯನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ' ಎಂದು ಶ್ಲಾಘಿಸಿದರು.ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್‌ನ ಡಾ.ಎಂ.ಬೈರೇಗೌಡ, ನಿವೃತ್ತ ಪ್ರಾಧ್ಯಾಪಕ ಡಾ.ಸಿ.ಪಿ.ನಾಗರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ಕಥೆಗಾರ ಬೊಮ್ಮನಾಯಕನಹಳ್ಳಿ ಕೃಷ್ಣಪ್ಪ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.