ಅಕ್ಕಿ ಯೋಜನೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ
ಹಾಸನ: `ಬಿ.ಪಿ.ಎಲ್. ಕಾರ್ಡುದಾರರಿಗೆ ಕೆ.ಜಿ.ಗೆ 1 ರೂಪಾಯಿಯಂತೆ ಅಕ್ಕಿ ವಿತರಿಸುವ ಯೋಜನೆ ಜುಲೈ 10ರಿಂದ ಜಾರಿಗೆ ಬರಲಿದ್ದು, ಅದಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ನ್ಯಾಯಬೆಲೆ ಅಂಗಡಿಗಳ ಮಾಲೀಕರು ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಇದಕ್ಕೆ ಸಹಕಾರ ನೀಡಬೇಕು' ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್ ನುಡಿದರು.
ಯೋಜನೆಗೆ ಜಾರಿಗೆ ಸಂಬಂಧಿಸಿದಂತೆ ಸೋಮ ವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ನ್ಯಾಯ ಬೆಲೆ ಅಂಗಡಿಗಳ ಮಾಲಿಕರಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
`ಅಂಗಡಿ ಮಾಲೀಕರು ಅಕ್ಕಿ ಸಂಗ್ರಹಣೆಗೆ ಉಗ್ರಾಣ, ವಿತರಣೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳು ವುದರ ಜೊತೆಗೆ ಅನುಷ್ಠಾನದಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕು. ಬಡಜನತೆಗೆ ಕನಿಷ್ಠ ದರದಲ್ಲಿ ಅಕ್ಕಿ ನೀಡಿ, ಹಸಿವು ನೀಗಿಸುವುದು ಈ ಯೋಜನೆಯ ಉದ್ದೆೀಶ ಎಂದರು.
ಜಿಲ್ಲೆಯಲ್ಲಿ ಪಡಿತರ ಕಾರ್ಡ್ದಾರರಿಗೆ ವಿತರಿಸಲು 97ಸಾವಿರ ಕ್ವಿಂಟಾಲ್ ಅಕ್ಕಿ 18 ಸಾವಿರ ಕ್ವಿಂಟಾಲ್ ಗೋಧಿ ಪೂರೈಕೆಯಾಗಲಿದ್ದು, ಇದರ ವಿತರಣೆಯಲ್ಲಿ ಯಾವುದೇ ಲೋಪವಾಗಬಾರದು ಎಂದರು.
ಬಹುತೇಕ ಬಿ.ಪಿ.ಎಲ್. ಕುಟುಂಬಗಳಿಗೆ ಪಡಿತರ ಕಾರ್ಡ್ ವಿತರಿಸಲಾಗಿದೆ. ಇನ್ನೂ ಹಲವು ಕಾರ್ಡ್ಗಳು ವಿತರಣೆಗೆ ಬಾಕಿ ಇವೆ. ಗ್ರಾಮ ಪಂಚಾಯಿತಿಗಳ ಜೊತೆಗೆ ನ್ಯಾಯ ಬೆಲೆ ಅಂಗಡಿ ಮಾಲೀಕರು ಸ್ಥಳೀಯ ಜನರೊಂದಿಗೆ ನಿರಂತರವಾಗಿ ಒಡನಾಟ ಹೊಂದಿರುವುದರಿಂದ ಬಾಕಿ ಉಳಿದ ಕಾರ್ಡ್ ಗಳನ್ನು ಪಡೆಯಲು ಸಾರ್ವಜನಿಕರಿಗೆ ಮಾಹಿತಿ ನೀಡಿ ಪ್ರೇರೇಪಿಸಬೇಕು ಎಂದರು.
ನ್ಯಾಯ ಬೆಲೆ ಅಂಗಡಿಗಳ ಬಗ್ಗೆ ದೂರುಗಳು ಬರುತ್ತಿವೆ. ಧಾನ್ಯ ವಿಲೇವಾರಿಯಲ್ಲಿ ಲೋಪವಾದರೆ ಕಾನೂನು ಕ್ರಮ ಜರುಗಿಸಲಾಗುವುದು. ಅದಕ್ಕೆ ಅವಕಾಶ ಮಾಡಿಕೊಡದೆ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಂದು ನ್ಯಾಯಬೆಲೆ ಅಂಗಡಿ ಮಾಲಿಕರಿಗೆ ಕಿವಿ ಮಾತು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಪಿ.ಸಿಂಗ್, `ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಎತ್ತುವಳಿ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಾರ್ಯದರ್ಶಿಗಳಿಗೆ ಮಾಹಿತಿ ನೀಡಬೇಕು. ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿಗೆ ಹಣ ಪಡೆಯಬಾರದು. ಸಮಯಕ್ಕೆ ಸರಿಯಾಗಿ ಅಂಗಡಿ ಬಾಗಿಲು ತೆರೆದು ಆಹಾರ ಸಾಮಗ್ರಿ ವಿತರಿಸಬೇಕು' ಎಂದು ಸೂಚಿಸಿದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕಾ.ರಾಮೇಶ್ವರಪ್ಪ ಪ್ರಾಸ್ತಾವಿಕ ಮಾತನಾಡಿ ಅಕ್ಕಿ ವಿತರಿಣೆಯ ಉದ್ದೆೀಶ, ಯೋಜನೆಯ ಸ್ವರೂಪ ನ್ಯಾಯಬೆಲೆ ಅಂಗಡಿ ಮಾಲಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಜುಲೈ 10ರಂದು ಜಿಲ್ಲಾ ಮಟ್ಟದಲ್ಲಿ ಯೋಜನೆ ಉದ್ಘಾಟನೆಯಾಗಲಿದ್ದು, ಶಾಸಕರು ಬಯಸಿದಲ್ಲಿ ಆಯಾ ತಾಲ್ಲೂಕುಗಳಲ್ಲಿ ಜು.11ರಂದು ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳಬಹುವುದು ಎಂದರು.
ಉಗ್ರಾಣ ನಿಗಮದ ಜಿಲ್ಲಾ ವ್ಯವಸ್ಥಾಪಕ ವಿಠಲ್ ರಾವ್ ಮತ್ತು ಆಹಾರ ನಾಗರೀಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ರಾಮಚಂದ್ರ ಇದ್ದರು.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಶೇ 99 ಫಲಿತಾಂಶ
ಹಾಸನ: 2012-13ನೇ ಸಾಲಿಗೆ ನಡೆದ ಅಂತಿಮ ವರ್ಷದ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಶೇ 99 ಫಲಿತಾಂಶ ದಾಖಲಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಕರಿಸಿದ್ದಪ್ಪ ತಿಳಿಸಿದ್ದಾರೆ.
ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಸಿವಿಲ್ ವಿಭಾಗ ಶೇ 100, ಮೆಕ್ಯಾನಿಕಲ್ ಹಾಗೂ ಇ ಆ್ಯಂಡ್ ಸಿ ವಿಭಾಗ ಶೇ 98 ಫಲಿತಾಂಶ ದಾಖಲಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಹಾಸ್ಟೆಲ್ಗೆ ಅರ್ಜಿ ಆಹ್ವಾನ
ಹೊಳೆನರಸೀಪುರ ತಾಲ್ಲೂಕಿನಲ್ಲಿರುವ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿ ನಿಲಯ ಗಳಿಗೆ 2013-14ನೇ ಸಾಲಿಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಪಡೆದು ತಹಶೀಲ್ದಾರ್ರವರಿಂದ ಪಡೆದ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ, ಭರ್ತಿ ಮಾಡಿದ ಅರ್ಜಿಯನ್ನು ಜುಲೈ 15 ರೊಳಗೆ ಸಲ್ಲಿಸುವಂತೆ ಕೊರಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.