ಮಂಗಳವಾರ, ನವೆಂಬರ್ 19, 2019
28 °C

ಅಕ್ಕಿ ವಿತರಣೆಗೆ ಕತ್ತರಿ: ಸದಾನಂದ ಗೌಡ ಆರೋಪ

Published:
Updated:

ಉಡುಪಿ: `ಪ್ರಸಕ್ತ ಚುನಾವಣೆ ಸಚ್ಚಾರಿತ್ರ್ಯ ಹಾಗೂ ಕೀಳು ರಾಜಕಾರಣದ ನಡುವಿನ ಹೋರಾಟವಾಗಿದ್ದು, ಅದರ ನಡುವೆ ಗೆಲ್ಲುವ ಅನಿವಾರ್ಯತೆ ಬಿಜೆಪಿಗಿದೆ. ಅದನ್ನು ಶ್ರೀಕೃಷ್ಣನ ನಾಡಿನಲ್ಲಿ ತೋರಿಸುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ಸ್ಪಷ್ಟ ಸಂದೇಶ ನೀಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು' ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ.ಸದಾನಂದ ಗೌಡ ಹೇಳಿದರು.ಉಡುಪಿಯಲ್ಲಿ ಭಾನುವಾರ ನಡೆದ ಭಾರತೀಯ ಜನತಾ ಪಕ್ಷದ ಉಡುಪಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ತ್ಯಾಗಕ್ಕೆ ಸಿದ್ದವಾದ ಬಿಜೆಪಿ ಎಂದೂ ಅಧಿಕಾರಕ್ಕಾಗಿ ಅಂಟಿಕೊಂಡಿಲ್ಲ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಾದ ಭ್ರಷ್ಟಾಚಾರರಹಿತವಾದ ಅಭಿವೃದ್ಧಿ ಯನ್ನು ಜನ ಗುರುತಿಸಿದ್ದಾರೆ. ರಾಜ್ಯ ಸರ್ಕಾರ ಎರಡು ರೂಪಾಯಿಗೆ ಅಕ್ಕಿ ವಿತರಿಸಲು ಆದೇಶ ನೀಡಿದರೆ ಕಾಂಗ್ರೆಸ್ಸಿಗರು ಚುನಾವಣಾ ಆಯೋಗಕ್ಕೆ ದೂರು ನೀಡುವ ಮೂಲಕ ಬಡ ಜನರಿಗೆ ಅನ್ಯಾಯ ಮಾಡಿದ್ದಾರೆ' ಎಂದರು.ಕಾಂಗ್ರೆಸ್ಸಿಗರು ಕೇಂದ್ರದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಮರೆತು ರಾಜ್ಯದ ಭ್ರಷ್ಟಾಚಾರವನ್ನು ಜನರ ಮುಂದೆ ಹೇಳಲು ಹೊರಟಿರುವುದು ಹಾಸ್ಯಾಸ್ಪದ ಎಂದು ಸದಾನಂದ ಗೌಡ ಎಂದು ಟೀಕಿಸಿದರು.ಉಡುಪಿ ಕ್ಷೇತ್ರದಲ್ಲಿ ರಘುಪತಿ ಭಟ್ ಅವರು ಸಾರಥಿಯಾಗಿ ಸುಧಾಕರ ಶೆಟ್ಟಿ ಬಿಜೆಪಿ ವೀರಯೋಧನಾಗಿ ಕೆಲಸ ಮಾಡ ಲಿದ್ದಾರೆ. ಪಕ್ಷವನ್ನು ಉತ್ತಮವಾಗಿ ಕಟ್ಟಿ ಬೆಳೆಸಿದ ರಘುಪತಿ ಭಟ್ ಅವರಿಗೆ ರಾಜ್ಯ ಮಟ್ಟದಲ್ಲಿ ಅವಕಾಶ ನೀಡಲಾಗುವುದು ಎಂದು ಹೇಳಿದರು.ರಾಜಕೀಯ ವಿರೋಧಿಗಳು ನೇರವಾಗಿ ಚುನಾವಣೆಯಲ್ಲಿ ನನ್ನನ್ನು ಎದುರಿಸಲಾಗದೇ ರಾಜಕೀಯ ತಂತ್ರಗಾರಿಕೆ ಮೂಲಕ ಸ್ಪರ್ಧಿಸದಂತೆ ತಡೆದಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು ಹಾಗೂ ಪಕ್ಷಕ್ಕೆ ಯಾವುದೇ ರೀತಿಯ ಹಾನಿಯಾ ಗಬಾರದು ಎಂಬ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದರು.`ನನ್ನ ಮಾನಹಾನಿ ಮಾಡಿದ ವಿರೋಧಿಗಳ ಬಾಯಿಮುಚ್ಚಿಸಲು ಕಾರ್ಯಕರ್ತರು ಹಾಗೂ ಮತದಾರರು ಶೆಟ್ಟಿ ಅವರನ್ನು ಗೆಲ್ಲಿಸುವ ಮೂಲಕ ಉತ್ತರ ನೀಡಬೇಕು' ಎಂದು ಹೇಳಿದರು.`ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ನೀಡಿದೆ. ಕೇತ್ರದಲ್ಲಿ ರಘುಪತಿ ಭಟ್ ಶಾಸಕತ್ವದ ಅವಧಿಯಲ್ಲಾದ ಆದ ಅಭಿವೃದ್ಧಿ ಮುಂದಿಟ್ಟುಕೊಂಡು ಮತದಾರರು ಬೆಂಬಲಿಸುವಂತೆ ಅಭ್ಯರ್ಥಿ ಸುಧಾಕರ  ಮನವಿ ಮಾಡಿದರು.ಜಿಲ್ಲಾ ಅಧ್ಯಕ್ಷ ಕೆ.ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ಯಶಪಾಲ್ ಸುವರ್ಣ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಪಕ್ಷದ ಮುಖಂಡರಾದ ಮಟ್ಟಾರ್ ರತ್ನಾಕರ ಹೆಗ್ಡೆ, ಜ್ಞಾನ ವಸಂತ ಶೆಟ್ಟಿ, ಬಿ.ಎನ್.ಶಂಕರ ಪೂಜಾರಿ, ರಘುಪತಿ ಬ್ರಹ್ಮಾವರ, ಮೋಹನ್ ಶೆಟ್ಟಿ, ವಿಠಲ ಮಾಸ್ತರ್, ನಳಿನಿ ರಾವ್, ದಿನಕರ ಶೆಟ್ಟಿ, ಪ್ರಶಾಂತ್ ಕಡೆಕಾರ್ ಉಪಸ್ಥಿತರಿದ್ದರು.ಪಕ್ಷದ ಗ್ರಾಮಾಂತರ ಅಧ್ಯಕ್ಷ ಹರಿಮಕ್ಕಿ ರತ್ನಾಕರ ಶೆಟ್ಟಿ ಸ್ವಾಗತಿಸಿದರು. ನಗರ ಅಧ್ಯಕ್ಷ ಮನೋ ಹರ ಎಸ್. ಕಲ್ಮಾಡಿ ವಂದಿಸಿದರು.

ಪ್ರತಿಕ್ರಿಯಿಸಿ (+)