ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ...

7

ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ...

Published:
Updated:

ಆಗ ಬೆಂಗಳೂರಿನ ರಾಜಾಜಿನಗರ ಅತ್ತ ಪಟ್ಟಣವೂ ಅಲ್ಲದ, ಇತ್ತ ನಗರವೂ ಅಲ್ಲದ ಒಂದು ಪ್ರದೇಶ. ನಮ್ಮ ತಾತಂದಿರು ಇಲ್ಲಿಯೇ ವ್ಯವಸಾಯ ಮಾಡಿ ಬದುಕುತ್ತಿದ್ದರು. ಇದೇ ರಾಜಾಜಿನಗರದ ವಿದ್ಯಾವರ್ಧಕ ಸಂಘದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ.

 

ಅಲ್ಲಿ ಪೂರ್ತಿ ಸಾಂಸ್ಕೃತಿಕ ವಾತಾವರಣ. ಜಿ.ಪಿ.ರಾಜರತ್ನಂ ಅಂತಹವರೆಲ್ಲಾ ಬಂದು ಉಪನ್ಯಾಸ ನೀಡುತ್ತಿದ್ದರು. ಎಸ್‌ಎಸ್‌ಎಲ್‌ಸಿ ಕಲಿಯುವ ವೇಳೆಗೆ ನನಗೆ ಕನ್ನಡ ಸಾಹಿತ್ಯದಲ್ಲಿ ಏನೇನು ನಡೆಯುತ್ತಿದೆ ಎಂಬುದೆಲ್ಲಾ ಅರಿವಾಗತೊಡಗಿತ್ತು.ಓದಿದ್ದು ವಿಜ್ಞಾನ. ಆದರೆ ಕಲೆ ಏಕೋ ಮೊದಲಿನಿಂದಲೂ ಸೆಳೆಯುತ್ತಿತ್ತು. ಕಡೆಕಡೆಗೆ ಅದರ ಕುರಿತೇ ಗಂಭೀರವಾಗಿ ಯೋಚಿಸಲು ಆರಂಭಿಸಿದೆ. ಕೆನ್ ಕಲಾಶಾಲೆ ಸೇರಿದೆ. ಅಲ್ಲಿ ಆರ್.ಎಂ.ಹಡಪದ ಮಾಸ್ತರರಿಂದ ಕಲಿತದ್ದು ಅಪಾರ.

 

ಅವರನ್ನು ನೋಡಿದಾಗಲೆಲ್ಲಾ ವಚನಕಾರರ `ಜಂಗಮ~ ಪದ ನೆನಪಿಗೆ ಬರುತ್ತಿತ್ತು. ಸ್ಥಾವರವಾಗದೇ ಬದುಕಿದವರು ಅವರು. ಹಾಗೆ ಬದುಕುವಂತೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾದವರು.

 

ಅಲ್ಲಿಂದ ಹೊರಟಿದ್ದು ದೂರದ ಕೊಲ್ಕತ್ತಾದತ್ತ. ಶಾಂತಿನಿಕೇತನ ನನ್ನಂತಹವರ ಪಾಲಿಗೆ ಕೇವಲ ಒಂದು ವಿಶ್ವವಿದ್ಯಾಲಯವಲ್ಲ. ಅದೊಂದು ಕನಸು. ಕೆ.ಜಿ.ಸುಬ್ರಹ್ಮಣ್ಯನ್‌ರಂತಹ ದೊಡ್ಡವರಿಂದ ಅರಿಯುವ ಅವಕಾಶ. ಶಾಂತಿನಿಕೇತನದ ಧೀಮಂತ ಪರಿಸರ, ವಸ್ತು ಸಂಗ್ರಹಾಲಯಗಳು, ಸಿನಿಮಾ ಕ್ಲಬ್‌ಗಳು, ಜತೆಗೆ ಸುತ್ತಲೂ ಇದ್ದ ಸಂತಾಲ ಹಳ್ಳಿಗಳು. ಎರಡು ವರ್ಷಗಳ ಅಲ್ಲಿನ ಅನುಭವ ವರ್ಣನೆಗೆ ನಿಲುಕದು. ಕಲೆಯ ಮೂಲಕ ಬದುಕನ್ನು ನೋಡುವ ಪರಿ ಒಲಿಯಿತು. ಅಲ್ಲಿ ಚಿತ್ರಕಲೆ, ಶಿಲ್ಪಕಲೆ ಹಾಗೂ ಗ್ರಾಫಿಕ್ಸ್‌ನ ಅ ಆ ಇ ಈ ಕಲಿತೆ.ಶಾಂತಿನಿಕೇತನದಿಂದ ಬಂದವಳೇ ಬೆಂಗಳೂರಿನ ಅದಿತಿ ಅಂತರರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿಕೊಂಡೆ. ಇದಕ್ಕೂ ಮುಂಚೆ ಓದುತ್ತಿರುವಾಗಲೇ ಪಾಠ ಮಾಡಿದ ಅನುಭವ ಇತ್ತು.  ನಾಲ್ಕು ವರ್ಷ ಕಲಾಸಕ್ತರಿಗೆ ನನಗೆ ತಿಳಿದಿದ್ದನ್ನು ಕಲಿಸಿದೆ. ಒಂದು ದಿನ ಅಲ್ಲಿಂದಲೂ ಹೊರಬಂದೆ. ಗೋಡೆಗಳ ಮಧ್ಯೆ ಕಲಿಸುವುದು ಏಕತಾನತೆ ಅನ್ನಿಸಿತು. ಪೂರ್ಣವಾಗಿ ಕಲೆಯಲ್ಲಿಯೇ ತೊಡಗಿಕೊಳ್ಳಬೇಕು ಎಂದುಕೊಂಡೆ.ಕಲಾ ವಿಮರ್ಶಕ ಎಚ್.ಎ.ಅನಿಲ್‌ಕುಮಾರ್ ಅವರನ್ನು ಭೇಟಿ ಮಾಡಿದ್ದು ಶಾಂತಿನಿಕೇತನದಲ್ಲಿ. ಪರಿಚಯ, ಪ್ರೇಮ, ನಂತರ ಮದುವೆ. ನಾವಿಬ್ಬರೂ ಕೇವಲ ಗಂಡ ಹೆಂಡತಿ ಅಲ್ಲ, ಸ್ನೇಹಿತರು. ನನಗನ್ನಿಸಿದ್ದನ್ನು ಅವರಿಗೆ ಅವರಿಗನ್ನಿಸಿದ್ದನ್ನು ನನಗೆ ಮುಕ್ತವಾಗಿ ಹೇಳಿಕೊಳ್ಳುತ್ತಿರುತ್ತೇವೆ. ಕಲೆಯ ಬಗ್ಗೆ ಹೊಸತನ್ನು ಅವರಿಂದ ಪಡೆಯುತ್ತಿರುತ್ತೇನೆ. ನನಗೆ ತಿಳಿದದ್ದನ್ನು ಹೇಳುತ್ತಿರುತ್ತೇನೆ.ಮಲೆಯಾಳಿ ಕತೆಯೊಂದರಲ್ಲಿ ಹೆಣ್ಣೊಬ್ಬಳನ್ನು ರವಿಕೆ ತೊಡದಂತೆ ಸಂಪ್ರದಾಯ ನಿರ್ಬಂಧಿಸುತ್ತದೆ. ಆದರೆ ಗಂಡನಿಗೆ ಆಕೆ ರವಿಕೆ ತೊಡಲು ಇಷ್ಟ. ಕಡೆಗೆ ಆಕೆ ರಾತ್ರಿ ವೇಳೆ ರವಿಕೆ ತೊಟ್ಟು ಹಗಲಿನ ವೇಳೆ ರವಿಕೆಯಿಲ್ಲದೆ ಕಾಣಿಸಿಕೊಳ್ಳುತ್ತಾಳೆ. ಇದು ಹೆಣ್ಣಿನ ಬಂಡಾಯ ಅನ್ನಿಸಿತು. `ಸೆಲ್ವಿಂಗ್ ಎ ಬಾಡಿ~ ಕಲಾ ಪ್ರದರ್ಶನಕ್ಕೆ ಇದೇ ಸ್ಫೂರ್ತಿಯಾಯಿತು.

 

ನನ್ನ ಊಹೆಗೂ ಮೀರಿದ ಪ್ರತಿಕ್ರಿಯೆ ದೇಶದೆಲ್ಲೆಡೆಯಿಂದ ಬಂತು. ಅನೇಕ ವಸ್ತು ಸಂಗ್ರಹಾಲಯಗಳಲ್ಲಿ ಕಲಾಕೃತಿಗಳು ಪ್ರದರ್ಶನಗೊಂಡವು. ಕಲಾ ವಿಮರ್ಶಕರು ಗುರುತಿಸಿದರು. ನಂತರ ಸ್ವೀಡನ್, ಟ್ರಿನಿಡಾಡ್, ಅಮೆರಿಕದಲ್ಲಿ ಕಲೆಯ ಬಗ್ಗೆ ಅಧ್ಯಯನ ನಡೆಸುವ ಅವಕಾಶ ದೊರೆಯಿತು.ಈ ಮಧ್ಯೆ ಇನ್‌ಸ್ಟಾಲೇಷನ್ ಜತೆಗೆ ಬೇರೇನಾದರೂ ಮಾಡಬೇಕು ಎನ್ನುವ ಹಂಬಲ ಮೂಡಿತು. ಚಿತ್ರ, ಶಿಲ್ಪ, ಇನ್‌ಸ್ಟಾಲೇಷನ್ ಮಾತ್ರವಲ್ಲದೇ ಬೇರೊಂದು ಮಾಧ್ಯಮದ ಹುಡುಕಾಟ ನನ್ನೊಳಗೆ ನಡೆಯಿತು.ಆಗ ಸೆಳೆದಿದ್ದು ವಿಡಿಯೊ ಕಲೆ ಮತ್ತು ಛಾಯಾಗ್ರಹಣ. `ಮೇಕಿಂಗ್ ಆಫ್ ಫ್ಲವರ್~, `ನಾಟ್ ಟು ಬಿ ಸೀನ್~, `ಎ ಮೊಮೆಂಟ್ ಆಫ್ ಸ್ಟ್ರೇಂಜ್ ಸ್ಟಿಲ್‌ನೆಸ್~, `ದಿ ಅದರ್ ಸೆಲ್ಫ್~ ಛಾಯಾಚಿತ್ರಗಳ ಪ್ರದರ್ಶನ ನಡೆಯಿತು. ಚಲಿಸುವ ದೃಶ್ಯಗಳಿಗೆ ಇರುವ ಶಕ್ತಿ ಅರಿವಾಯಿತು.

 

ಮಾತು, ಅಕ್ಷರಗಳ ಅಗತ್ಯವೇ ಇಲ್ಲದೇ ನಮಗೆ ಅನ್ನಿಸಿದ್ದನ್ನು ಜನರಿಗೆ ತಲುಪಿಸಬಹುದು ಎಂದುಕೊಂಡೆ. ವಿಡಿಯೊ ಕಲೆ ರೂಪಿಸಲು ಮುಂದಾದೆ.ಸ್ತ್ರೀವಾದಿಗಳಲ್ಲಿ ಎರಡು ಬಗೆ. ಒಂದು ತೋರಿಕೆಯದು.ಮತ್ತೊಂದುಅಕ್ಕಮಹಾದೇವಿಯಂತಹ ಗಂಭೀರ, ಸೌಂದರ್ಯಪೂರ್ಣ, ಪರಿಕಲ್ಪನಾತ್ಮಕ, ಬಂಡಾಯ ಮನೋಭಾವದ ಬೌದ್ಧಿಕ ನೆಲೆಯದ್ದು. ಅಕ್ಕನನ್ನೇ ಕೇಂದ್ರವಾಗಿರಿಸಿಕೊಂಡು `ಬಿಟ್ವೀನ್ ಫೈರ್ ಅಂಡ್ ಸ್ಕೈ~ ವೀಡಿಯೊ ಕಲೆ ಮಾಡಿದೆ.

ಉದ್ದ ಕೂದಲಿನ ಹುಡುಗಿಯೊಬ್ಬಳು ಆಕಾಶದಲ್ಲಿ ಕುಂಟೆ ಬಿಲ್ಲೆ ಆಡುವ ದೃಶ್ಯವದು. ವಚನಕಾರರು, ಸಿಮನ್ ದಿ ಬೋವಾರಂತಹ ಸ್ತ್ರೀವಾದಿ ಚಿಂತಕರನ್ನು ಕಲಾತ್ಮಕವಾಗಿ ಬೆಸೆದದ್ದು ಸಾಹಿತ್ಯ ವಲಯವನ್ನೂ ಕಲಾವಲಯವನ್ನೂ ತಟ್ಟಿತು. ಅಕ್ಕನಂತಹ ಮಹಿಳಾ ಪರ ಚಿಂತಕಿ ಮತ್ತೊಬ್ಬಳಿಲ್ಲ!

`ಫ್ರಾಗ್ರೆನ್ಸ್ ಆಫ್ ಜಾಸ್ಮಿನ್~ ಮೈಸೂರು ಮಲ್ಲಿಗೆಯನ್ನು ರೂಪಕವಾಗಿಟ್ಟುಕೊಂಡು ಮಾಡಿದ ಛಾಯಾಚಿತ್ರ ಕಲೆ. ಮೊಗ್ಗಿನ ಜಡೆ ಹೆಣ್ಣಿನ ಅನನ್ಯ ಸಂಕೇತ. ಹೀಗಾಗಿ ಮಲ್ಲಿಗೆಯ ಜಡೆಯನ್ನು ಹುಡುಕಿಕೊಂಡು ಹೊರಟೆ.

 

ಒಂದು ಫೋಟೊ ಅಂಗಡಿಯಲ್ಲಿ ಸುಮಾರು 2000 ಚಿತ್ರಗಳು ಸಿಕ್ಕವು. ಹಲವು ದಶಕಗಳ ಹಳೆಯ ಚಿತ್ರಗಳೂ ಅದರಲ್ಲಿದ್ದವು. ಅವನ್ನೆಲ್ಲ ಸೇರಿಸಿದೆ. ಅದು ಛಾಯಾಗ್ರಹಣದ ಇತಿಹಾಸವನ್ನೂ, ಜೀವನ ಶೈಲಿ ಬದಲಾಗುತ್ತಾ ಬಂದ ವಿಧಾನವನ್ನೂ ಚಿತ್ರವತ್ತಾಗಿ ಕಟ್ಟಿಕೊಟ್ಟಿದೆ.

 

ಇದನ್ನೇ ಆಧರಿಸಿ ಮಲ್ಲಿಗೆ ಮಾಲೆಯನ್ನು ಬುರ್ಖಾ ಮಾದರಿಯಲ್ಲಿ ತೊಟ್ಟು ನಾನೇ ಪಾತ್ರವಾದೆ. ಆ ಚಿತ್ರ ಹಲವು ಅರ್ಥಗಳನ್ನು ನೀಡುತ್ತಾ ಹೋಯಿತು.

ಜಕ್ಕೂರು ಕೆರೆ ಬಳಿ ನಮ್ಮ ಮನೆ ಇದೆ. ನಿತ್ಯ ಆ ಕೆರೆ ಬದಲಾಗುತ್ತಿರುವುದನ್ನು ಗಮನಿಸಿದ್ದೇನೆ.

 

ಅದನ್ನೇ ಆಧರಿಸಿ `ಲೇಕ್ ಟೇಲ್ಸ್~ ಹೆಣೆದೆ. ಸಾಕಷ್ಟು ಸಂದರ್ಶನಗಳನ್ನೂ ಮಾಡಿ ಅದಕ್ಕೊಂದು ಸಾಕ್ಷ್ಯಚಿತ್ರದ ಸ್ವರೂಪ ನೀಡಿದೆ. ಸತತ ಮೂರು ವರ್ಷದ ಬಳಿಕ ಅದಕ್ಕೊಂದು ಆಕಾರ ಮೂಡಿತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಾಕ್ಷ್ಯಚಿತ್ರ ನೋಡಿದರು. ಕೆರೆ ಉಳಿಸಿಕೊಳ್ಳುವ ಬಗ್ಗೆ ಅಲ್ಪಸ್ವಲ್ಪ ಜಾಗೃತಿ ಮೂಡಿತು.ನೀರಿನ ಬಗೆಗಿನ ಕೆಲಸ ನೋಡಿ  ಆರೊಗ್ ಸಂಸ್ಥೆ ಸ್ವಿಜರ್‌ಲೆಂಡ್‌ಗೆ ಆಹ್ವಾನ ನೀಡಿತು. ಅದು ನದಿ ಮತ್ತು ಕೆರೆಗಳ ಬಗ್ಗೆ ಅಧ್ಯಯನ ನಡೆಸುವ ಸಂಸ್ಥೆ. ಅಲ್ಲಿಗೆ ಹೋದ ಮೇಲೆ ಹೊಸ ಲೋಕವೇ ತೆರೆದುಕೊಂಡಿತು. ವಿಜ್ಞಾನಿಗಳು, ಪರಿಸರ ತಜ್ಞರ ಜತೆ ಕೆಲಸ ಮಾಡುವ, ಪ್ರಯೋಗಾಲಯಗಳನ್ನು, ನದಿ ಪಾತ್ರಗಳನ್ನು, ಗಂಗೋತ್ರಿಗಳನ್ನು ನೋಡುವ ಅವಕಾಶ.`ಜ್ಞಾನ~ ಎನ್ನುವುದು ನಾನು ಹಾಗೂ ನನ್ನ ನಾಲ್ಕು ಜನ ಚಡ್ಡಿದೋಸ್ತುಗಳು ಸೇರಿ ಕಟ್ಟಿದ ಪುಟ್ಟ ಸಂಘಟನೆ. ಶ್ರೀಧರ್, ಆಶಾ, ಶಶಿ ಆ ಗೆಳೆಯರು. ಮಕ್ಕಳಿಗೆ ಪುಸ್ತಕಗಳನ್ನು ಉಚಿತವಾಗಿ ಹಂಚುವ ಕಾಯಕವನ್ನು ಸಂಸ್ಥೆ ಮಾಡುತ್ತಿದೆ.ಅಂದಹಾಗೆ ನಾನೊಂದು ನಾಟಕ ನಿರ್ದೇಶನ ಮಾಡಿದೆ. ಇಸ್ಮತ್ ಚುಗ್ತಾಯಿ ಅವರ `ಕೌದಿ~ ಕತೆಯನ್ನು ಅದು ಆಧರಿಸಿತ್ತು. ರಂಗಕರ್ಮಿ ಭವಾನಿ ಪ್ರಕಾಶ್ ಅವರದು ಅದರಲ್ಲಿ ಪ್ರಮುಖ ಪಾತ್ರ. ಇನ್ನೊಂದು ಪಾತ್ರ ಬರೀ ಪರದೆಗಳನ್ನು ಬಳಸಿ ಮಾಡಿದ್ದು. ನಾಟಕಕ್ಕಿಂತ ಹೆಚ್ಚಾಗಿ ಅದೊಂದು ಕಲಾಕೃತಿಯಂತೆ ತೋರುತ್ತಿತ್ತು.

 

ಆಮೇಲೆ ಸಮಯದ ಅಭಾವದಿಂದಾಗಿ ರಂಗದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.  ನಾನು ತುಂಬಾ ಇಷ್ಟ ಪಡುವುದು ಚಾರಣ. ಸ್ವಿಜರ್‌ಲೆಂಡ್‌ನ ಅನುಭವ ನನಗೆ ಚಾರಣದ ಚಪಲ ಹತ್ತಿಸಿತು. ಅಲ್ಲಿನ `ಮೊಟರಾಜ್~ನಲ್ಲಿ ಸುತ್ತಿದ್ದು ಮರೆಯಲಾಗದ ಸಂಗತಿ. ನಂತರ ಜ್ಯೂರಿಕ್ ರಾಷ್ಟ್ರೀಯ ಉದ್ಯಾನದಲ್ಲಿ ಒಬ್ಬಳೇ ಕಾಡು ಅಲೆದೆ. ಗಗನ ಚುಂಬಿ ಮರಗಳು ಮತ್ತು ನಾನು ಮಾತ್ರ ಅಲ್ಲಿದ್ದದ್ದು. ಅಮೇಜಿಂಗ್!ನಿತ್ಯ ಪೇಪರ್ ಓದುವಾಗ ಭಯ ಆಗುತ್ತೆ. ಸಮಾಜದ ಶೇ 80ರಷ್ಟು ಜನ ಬದಲೇ ಆಗಿಲ್ಲವಲ್ಲಾ ಅನ್ನಿಸುತ್ತೆ. ಅದೇ ಕೊಲೆ, ಅತ್ಯಾಚಾರ. ಏನು ಸುಧಾರಣೆ ತಂದರೂ, ಎಷ್ಟೇ ಹೋರಾಟಗಳು ನಡೆದರೂ ಮನುಷ್ಯರೊಳಗೆ ಮನುಷ್ಯತ್ವ ಮೂಡುವುದಿಲ್ಲವೇ ಎನ್ನುವ ಪ್ರಶ್ನೆ ಹುಟ್ಟುತ್ತೆ. ಆದರೂ ಒಂದು ಕಡೆ ನಮ್ಮ ಪ್ರಯತ್ನ ಮುಂದುವರಿಸುತ್ತಲೇ ಇರಬೇಕು. ಯಾರ ಸುಧಾರಣೆಗೆ ಅಲ್ಲದಿದ್ದರೂ ನಮಗಾಗಿ, ನಮ್ಮ ಒಳಗಿನ ಬೆಳಕಿಗಾಗಿ ಅಲ್ಲವೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry