`ಅಕ್ಕ-ಪಕ್ಕ' ನಕ್ಕ

7

`ಅಕ್ಕ-ಪಕ್ಕ' ನಕ್ಕ

Published:
Updated:

ಕಣ್ಣು ಕಾಣದ, ಕಿವಿ ಕೇಳದ ಗೆಳೆಯರಿಬ್ಬರು ಕೊಲೆಯೊಂದಕ್ಕೆ ಸಾಕ್ಷಿಯಾಗುತ್ತಾರೆ. ಅವರನ್ನು ಕರೆತಂದು ತನಿಖೆ ನಡೆಸುವಾಗ ಪೊಲೀಸರು ಪಡಿಪಾಟಲು ಪಡುತ್ತಾರೆ. ಅಂತ್ಯದಲ್ಲಿ ಅವರಿಬ್ಬರ ಸಾಧನೆ ಸ್ಫೂರ್ತಿ ಎನಿಸುವುದಂತೆ. ಇಂಥ ಹಾಸ್ಯಕತೆಯುಳ್ಳ ಸಿನಿಮಾ `ಅಕ್ಕ-ಪಕ್ಕ'. ಈ ಮೊದಲು ಚಿತ್ರಕ್ಕೆ `ಹಕ್ಕಾ-ಬುಕ್ಕಾ' ಎಂಬ ಹೆಸರಿತ್ತು. ಅದೀಗ ಬದಲಾಗಿದೆ. `ಅಕ್ಕ-ಪಕ್ಕ' ಡಿ.28ರಂದು ತೆರೆಗೆ ಬರಲು ಸಿದ್ಧವಾಗಿದೆ.ಚಿತ್ರದ ನಾಯಕ ರವಿಶಂಕರ್. ಅವರು ಕಿವುಡನ ಪಾತ್ರದಲ್ಲಿ ನಟಿಸಿದ್ದಾರೆ. `ತುಟಿ ಚಲನೆಯಿಂದ ಮಾತುಗಳನ್ನು ಅರ್ಥಮಾಡಿಕೊಳ್ಳುವ ಚಾಣಾಕ್ಷ ಕಿವುಡನ ಪಾತ್ರ ನನ್ನದು. ಚಿತ್ರದಲ್ಲಿ ಎಲ್ಲಿಯೂ ಕಿವುಡ- ಕುರುಡ ಎಂಬ ಹೆಸರನ್ನು ಬಳಸಿಲ್ಲ. ನಾಯಕಿ ಇಲ್ಲದ ಈ ಚಿತ್ರ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡುವುದು ನಿಶ್ಚಿತ. ಕಣ್ಣು ಕಾಣದವರು, ಕಿವಿ ಕೇಳದವರು ಎಂಥ ದೊಡ್ಡ ಸಾಧನೆ ಮಾಡಬಲ್ಲರು ಎಂಬುದೇ ಚಿತ್ರದ ಸಂದೇಶ' ಎಂದರವರು.ತಬಲಾ ನಾಣಿ ಅವರಿಗೆ ಕುರುಡನ ಪಾತ್ರವಂತೆ. `ನಾನು ಈ ಚಿತ್ರದಲ್ಲಿ ಕನ್ನಡಕ ಧರಿಸದ ಆತ್ಮವಿಶ್ವಾಸಿ ಕುರುಡನ ಪಾತ್ರ ನಿರ್ವಹಿಸಿರುವೆ. ಇಲ್ಲಿ ಕುರುಡರನ್ನು ಅವಹೇಳನ ಮಾಡಿಲ್ಲ. ನಮ್ಮಿಬ್ಬರ ಕಿಲಾಡಿತನವಷ್ಟೇ ಚಿತ್ರದಲ್ಲಿ ಇರುವುದು' ಎಂದು ನಕ್ಕರು.ಚಿತ್ರದಲ್ಲಿ ಬರುವ ಸಣ್ಣ ಪಾತ್ರವೊಂದನ್ನು ರಾಧಿಕಾ ಗಾಂಧಿ ನಿರ್ವಹಿಸಿದ್ದಾರೆ. ಅದು ನಾಯಕಿ ಪಾತ್ರವಲ್ಲ ಎಂಬುದು ಚಿತ್ರತಂಡದ ಸ್ಪಷ್ಟನೆ.`ಚಿತ್ರದ ಪ್ರಮುಖ ಪಾತ್ರಧಾರಿಗಳಾದ ರವಿಶಂಕರ್ ಮತ್ತು ತಬಲಾನಾಣಿ ಅವರಿಗೆ ಚಿತ್ರದಲ್ಲಿ ಹರಿಕೃಷ್ಣ, ಭುವನಕಾಂತ ಎಂಬ ಹೆಸರು. ಆ ಹೆಸರುಗಳಿಗೆ ಹೊಂದುವಂತೆ ಚಿತ್ರಕ್ಕೆ `ಹಕ್ಕಾ-ಬುಕ್ಕಾ' ಎಂದು ಹೆಸರಿಡಲಾಗಿತ್ತು. ಆದರೆ ವಾಣಿಜ್ಯ ಮಂಡಳಿಯವರು, ಹಿರಿಯ ಸಾಹಿತಿಗಳು, ಚಳವಳಿಗಾರರು ಒತ್ತಡ ಹೇರಿದ ಪರಿಣಾಮ ಹೆಸರು ಬದಲಿಸಬೇಕಾಯಿತು' ಎಂದು ಸ್ಪಷ್ಟನೆ ನೀಡಿದರು ನಿರ್ಮಾಪಕರಲ್ಲಿ ಒಬ್ಬರಾದ ಸಂತೋಷ್.ಚಿತ್ರದ ನಿರ್ದೇಶಕ ಯು. ಕೆ. ದಾಸ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿರಲಿಲ್ಲ. `ಅವರು ಇತ್ತೀಚೆಗೆ ಮದುವೆಯಾದ ಕಾರಣ ಚಿತ್ರೀಕರಣ ನಂತರದ ಚಟುವಟಿಕೆಗಳಲ್ಲಿ ಭಾಗವಹಿಸಿರಲಿಲ್ಲ. ಅವರೊಂದಿಗೆ ಚರ್ಚಿಸಿಯೇ ಚಿತ್ರದ ಹೆಸರನ್ನು ಬದಲಿಸಿದ್ದೇವೆ. ಆದರೂ ಅವರು ಪತ್ರಿಕಾಗೋಷ್ಠಿ ಬಂದಿಲ್ಲ' ಎಂದು ಸಂತೋಷ್ ನೊಂದುಕೊಂಡರು.`ಕಾಮಿಡಿ ಸಿನಿಮಾ ರೂಪಿಸಿದ್ದು ನನಗೆ ಖುಷಿಯ ವಿಚಾರ' ಎಂದರು ಮತ್ತೊಬ್ಬ ನಿರ್ಮಾಪಕ ಶಂಕರ್. ಚಿತ್ರದ ಕತೆ ಬರೆದಿರುವ ರಾಜಶೇಖರ್ ಅವರಿಗೆ ಸಿನಿಮಾಗಳಿಗೆ ಐತಿಹಾಸಿಕ ವ್ಯಕ್ತಿಗಳ ಹೆಸರನ್ನು ಇಡುವುದು ತಪ್ಪೇನಲ್ಲ ಎನಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry