ಅಕ್ರಮವಾಗಿ ಸರ್ಕಾರಿ ಗೋಮಾಳ ಒತ್ತುವರಿ

7
ತೆರವುಗೊಳಿಸುವಂತೆ ಜಂತಿಕೊಳಲಿನ ಗ್ರಾಮಸ್ಥರ ಆಗ್ರಹ

ಅಕ್ರಮವಾಗಿ ಸರ್ಕಾರಿ ಗೋಮಾಳ ಒತ್ತುವರಿ

Published:
Updated:

ಚಿತ್ರದುರ್ಗ: ಸರ್ಕಾರಿ ಗೋಮಾಳಗಳು ಅಕ್ರಮವಾಗಿ ಒತ್ತುವರಿಯಾಗಿದ್ದು, ಅವುಗಳನ್ನು ಕೂಡಲೇ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಂತಿಕೊಳಲಿನ ಕೆಲ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಹೊಸದುರ್ಗ ತಾಲ್ಲೂಕಿನ ಜಂತಿಕೊಳಲು ಗ್ರಾಮದ ಕೆಲ ಬಲಿಷ್ಠ ವ್ಯಕ್ತಿಗಳು ಗೋಮಾಳಗಳಲ್ಲಿ ಅಕ್ರಮವಾಗಿ ಉಳುಮೆ ಮಾಡುತ್ತಿದ್ದಾರೆ. ಕುರಿ, ದನ, ಮೇಕೆ, ಎತ್ತು, ಎಮ್ಮೆ ಸೇರಿದಂತೆ ಎಲ್ಲ ರೀತಿಯ ಜಾನುವಾರುಗಳ ಸಾಕಾಣಿಕೆಗೆ ಹಾಗೂ ಜಾನುವಾರುಗಳು ಮೇಯಲು ಕಡ್ಡಾಯವಾಗಿ ಇಂತಿಷ್ಟು ಜಮೀನು ಇರುವಂತೆ ಸುಪ್ರೀಂ ಕೋರ್ಟ್‌ನ ಆದೇಶವಿದ್ದರೂ ಕೂಡ ಅದನ್ನೆಲ್ಲ ದಿಕ್ಕರಿಸಿ ಸರ್ಕಾರಿ ಗೋಮಾಳಗಳನ್ನು ಒತ್ತುವರಿ ಮಾಡಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು.ಪ್ರಸ್ತುತ ದಿನಗಳಲ್ಲಿ ಭೂ ರಹಿತರು ಹಸು, ಎಮ್ಮೆಗಳನ್ನು ಕಟ್ಟಿಕೊಂಡು ಜೀವನ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಭೂ ರಹಿತರು ಯಾರ ಜಮೀನಿಗೂ ಜಾನುವಾರುಗಳನ್ನು ಹೊಡೆದುಕೊಂಡು ಹೋಗಿ ಮೇಯಿಸಿಕೊಂಡು ಬರುವಂತಿಲ್ಲ. ಭೂ ಮಾಲೀಕರು ಜಾನುವಾರುಗಳನ್ನು ಮೇಯಲು ಅವಕಾಶ ಕೊಡುವುದಿಲ್ಲ. ಈ ಕಾರಣದಿಂದ ಜಾನುವಾರುಗಳು ಮೇವಿಲ್ಲದೆ ಸೊರಗಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ತಮ್ಮ ಅಳಲು ತೋಡಿಕೊಂಡು ಆತಂಕ ವ್ಯಕ್ತಪಡಿಸಿದರು.ಜಂತಿಕೊಳಲು ಗ್ರಾಮದ ರಿಸನಂ ೧೧ರಲ್ಲಿ ೧೯ ಎಕರೆ, ೧೨ರಲ್ಲಿ ೨೫ ಎಕರೆ, ೧೩ರಲ್ಲಿ ೨೭ ಎಕರೆ, ೧೪ರಲ್ಲಿ ೨೭ ಎಕರೆ ಸರ್ಕಾರಿ ಗೋಮಾಳವಿದ್ದು, ಗ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳಿವೆ. ಈ ಎಲ್ಲ ಜಾನುವಾರುಗಳಿಗೆ ಮೇಯಲು ಜಮೀನು ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಈ ಜಮೀನಿನಲ್ಲಿ ಜಿಲ್ಲಾಡಳಿತ ನಿವೇಶನ ಹಂಚಿಕೆ ಮಾಡುವ ಕುರಿತು ಮಾತು ಕೇಳಿ ಬರುತ್ತಿದ್ದು, ಯಾವುದೇ ಕಾರಣಕ್ಕೂ ಈ ಜಮೀನನ್ನು ನಿವೇಶನಕ್ಕೆ ಬಳಕೆ ಮಾಡಬಾರದು. ಅಲ್ಲದೆ ಮೂಕ ಪ್ರಾಣಿಗಳಿಗೆ ಅನ್ಯಾಯವಾಗದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಿ ಖಾಸಗಿಯಾಗಿ ಜಮೀನು ಖರೀದಿ ಮಾಡಿ ನಿವೇಶನ ಹಂಚಿಕೆ ಮಾಡಲಿ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.ಗ್ರಾಮಸ್ಥರಾದ ಪಿ.ಎಂ. ಚಂದ್ರಪ್ಪ, ಟಿ.ಕೆ. ವಿಜಯಕುಮಾರ್, ಮಹೇಶ್ವರಪ್ಪ, ಟಿ.ಕೆ. ದಯಾನಂದ, ಪ್ರಕಾಶ್, ಸಿದ್ದೇಶ್, ಸೂರಪ್ಪ, ಸುರೇಶ್, ಕೆ.ಎಂ. ಆನಂದಪ್ಪ, ಎ.ಬಿ. ನಟೇಶ್, ಎನ್. ತಿಪ್ಪೇಶಪ್ಪ, ಕೆ.ಪಿ. ಚಂದ್ರಪ್ಪ, ಎ.ಸಿ. ಜಗದೀಶ್, ಎಸ್. ಜಗದೀಶ್, ಜೆ.ಬಿ. ಈಶ್ವರಪ್ಪ, ಶಿವಣ್ಣ, ಟಿ.ಆರ್. ರಮೇಶಪ್ಪ, ಪಿ.ಎಸ್. ಪುಟ್ಟಪ್ಪ, ನಾಗರಾಜ್, ಉಜ್ಜಿನಪ್ಪ, ಕಾಳಪ್ಪ, ಯಶೋಧರಮೂರ್ತಿ, ಶಾಂತಪ್ಪ, ಉದಯಕುಮಾರ್, ಶಶಿಧರ್, ರುದ್ರೇಶ್, ಶಿವಕುಮಾರ್, ಸಿದ್ದಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry