ಅಕ್ರಮ ಅಡುಗೆ ಅನಿಲ ಮಾರಾಟ: ಒಬ್ಬನ ಬಂಧನ

7

ಅಕ್ರಮ ಅಡುಗೆ ಅನಿಲ ಮಾರಾಟ: ಒಬ್ಬನ ಬಂಧನ

Published:
Updated:

ಗೋಣಿಕೊಪ್ಪಲು: ಅಕ್ರಮವಾಗಿ ಅಡುಗೆ ಅನಿಲ ಸಿಲಿಂಡರ್ ಮಾರಾಟ ಮಾಡುತಿದ್ದ ವ್ಯಕ್ತಿಯ ಬಳಿ ತಹಶೀಲ್ದಾರ್ ಹನುಮಂತರಾಯಪ್ಪ ಗ್ರಾಹಕರ ವೇಷದಲ್ಲಿ ತೆರಳಿ ವ್ಯಕ್ತಿಯನ್ನು ಬಂಧಿಸಿ ಸಿಲಿಂಡರ್‌ಗಳನ್ನು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಬೈಪಾಸ್ ರಸ್ತೆಯ ಕೆಪಿಕೆ ಆಟೋ ಲಿಂಕ್ಸ್‌ನ ಎಂ.ಕೆ.ಕೃಷ್ಣ ಎಂಬಾತನೇ ಬಂಧಿತ ಆರೋಪಿ. ಆತನನ್ನು 10 ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಬಂಧಿತ ವ್ಯಕ್ತಿಯಿಂದ 16 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಅಡುಗೆ ಅನಿಲ ಸಿಲಿಂಡರ್ ಮಾರಾಟದಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಬಹಳ ದಿನಗಳಿಂದ ದೂರುಗಳು ಬರುತಿದ್ದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಹನುಮಂತರಾಯಪ್ಪ ಶುಕ್ರವಾರ ಅಕ್ರಮ ಪತ್ತೆ ಹಚ್ಚಲು ಮುಂದಾಗಿದ್ದರು.  ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಬಳಿ ತಮ್ಮ ಜೀಪ್ ನಿಲ್ಲಿಸಿ ಆಟೋ ಹತ್ತಿ ಖಾಲಿ ಸಿಲಿಂಡರ್ ತೆಗೆದುಕೊಂಡು ಕೃಷ್ಣನ ಬಳಿ ಹೋದರು. ತಹಶೀಲ್ದಾರ್‌ರನ್ನು ಪತ್ತೆ ಹಚ್ಚದ ಆರೋಪಿ  ಕೃಷ್ಣ ಇಂಡೇನ್ ಗ್ಯಾಸ್ ಸಿಲಿಂಡರ್ ಅನ್ನು ರೂ.600ಕ್ಕೆ  ಮರಾಟ ಮಾಡಲು ಮುಂದಾದಾಗ ಸಿಕ್ಕಿಬಿದ್ದಿದ್ದಾನೆ.  ಸಿಲಿಂಡರ್ ಇರಿಸಿದ್ದ ಉಗ್ರಾಣದಲ್ಲಿ ಖಾಲಿ ಸಿಲಿಂಡರ್‌ಗಳಿಗೆ ಗ್ಯಾಸ್ ತುಂಬಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದ ಎನ್ನಲಾಗಿದೆ.ಈ ಸಂದರ್ಭದಲ್ಲಿ ಪ್ರಕರಣ ದಾಖಲಿಸಿಕೊಂಡ ವೃತ್ತ ನಿರೀಕ್ಷಕ ಪಿ.ವಿ.ವೆಂಕಟೇಶ್, ಸಬ್ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್ ವ್ಯಕ್ತಿಯನ್ನು ಸ್ಥಳದಲ್ಲಿಯೇ ಬಂಧಿಸಿದರು.ಬಳಿಕ ಪಟ್ಟಣದ ಕೆಲವು ಹೊಟೇಲ್ ಮತ್ತು ಬೇಕರಿ ಮೇಲೂ ದಾಳಿ ನಡೆಸಿ ಅಕ್ರಮವಾಗಿ ಬಳಸುತಿದ್ದ ಗೃಹ ಬಳಕೆಯ 16 ಅನಿಲ  ಸಿಲಿಂಡರ್‌ಗಳನ್ನು  ವಶಪಡಿಸಿಕೊಂಡು  ತಪ್ಪಿತಸ್ಥರ  ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರುಸಲ್ಲಿಸಿದರು.ಗೋಣಿಕೊಪ್ಪಲು ಪಟ್ಟಣದಲ್ಲಿ ಅಕ್ರಮ ಸಿಲಿಂಡರ್ ಬಳಕೆಯಾಗುತ್ತಿರುವ ಬಗ್ಗೆ  ಹಲವು ದಿನಗಳಿಂದ ವ್ಯಾಪಕ ದೂರು ಕೇಳಿ ಬರುತಿತ್ತು. ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆಯುತಿತ್ತು. ಇದೀಗ ಇಂತಹ ಅಕ್ರಮವನ್ನು ನಿಯಂತ್ರಿಸಲು ತಹಶೀಲ್ದಾರರು ಮುಂದಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಆಹಾರ ನಿರೀಕ್ಷಕ ರಾಜಣ್ಣ, ಶಿರಸ್ತೆದಾರ್ ನಾಗೇಂದ್ರ ಶರ್ಮ, ಗ್ರಾಮ ಲೆಕ್ಕಿಗರಾದ ಯಶವಂತ ಕುಮಾರ್, ಸಂತೋಷ್, ಟಿ.ಎಂ.ನಿಶಾನ್, ಎಎಸ್‌ಐ ಸದಾಶಿವ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry