ಅಕ್ರಮ ಅಪಾರ್ಟ್‌ಮೆಂಟ್ ನಿರ್ಮಾಣ

7

ಅಕ್ರಮ ಅಪಾರ್ಟ್‌ಮೆಂಟ್ ನಿರ್ಮಾಣ

Published:
Updated:

ಮಹದೇವಪುರ: ಪಟ್ಟಂದೂರು ಅಗ್ರಹಾರದ ಸರ್ವೆ ನಂ.42ರ ಸರ್ಕಾರಿ ಜಮೀನಿನಲ್ಲಿ ಖಾಸಗಿ ಕಂಪೆನಿಯೊಂದು ಅಕ್ರಮವಾಗಿ ಅಪಾರ್ಟ್‌ಮೆಂಟ್ ನಿರ್ಮಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ ಜಿ.ಎಸ್.ನಾಯಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಸರ್ವೆ ನಂ.42ರ ಸರ್ಕಾರಿ ಜಮೀನಿನಲ್ಲಿ ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಇದೇ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ಮೂವರು ಯುವಕರು ವಿಶೇಷ ಜಿಲ್ಲಾಧಿಕಾರಿಗಳ ಎದುರೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.ವಿಷ ಕುಡಿದ ಸುಬ್ರಮಣಿ, ಬಾಲು ಹಾಗೂ ರವಿಗೌಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾದರು. ಸರ್ಕಾರಿ ಜಮೀನಿನಲ್ಲಿ ಖಾಸಗಿ ಕಂಪೆನಿಯವರು ಅಕ್ರಮವಾಗಿ ಅಪಾರ್ಟ್‌ಮೆಂಟ್ ನಿರ್ಮಿಸುತ್ತಿದ್ದಾರೆ.ಈ ಅಕ್ರಮದ ಬಗ್ಗೆ ತಿಳಿದಿದ್ದ ಜಿಲ್ಲಾಧಿಕಾರಿಗಳು ನಾಲ್ಕು ತಿಂಗಳ ಹಿಂದೆಯೇ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿದ್ದರು. ಆದರೂ ಕಂಪೆನಿಯವರು ಅಧಿಕಾರಿಗಳ ಕಣ್ತಪ್ಪಿಸಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.ಕಂಪೆನಿಯಿಂದ ಹಣ ಪಡೆದಿರುವ ಕೆಲ ಸ್ಥಳೀಯ ದಲಿತ ಮುಖಂಡರು ಆ ಕಂಪೆನಿಯ ಬೆಂಬಲಕ್ಕೆ ನಿಂತಿದ್ದಾರೆ.ಅಂತಹವರ ವಿರುದ್ದ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.ನಂತರ ವಿಶೇಷ ಜಿಲ್ಲಾಧಿಕಾರಿ ಜಿ.ಎಸ್.ನಾಯಕ್, ‘ಒಂದು ವಾರದೊಳಗೆ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು. ಈ ಸ್ಥಳ ಸರ್ಕಾರಕ್ಕೆ ಸೇರಿದ್ದು ಎಂಬುದು ದೃಢಪಟ್ಟಿದೆ. ಬಡವರಿಗೆ ನಿವೇಶನ ಹಂಚಿಕೆ ಮಾಡಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದರು.ಅಲ್ಲದೆ ಕಂಪೆನಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು  ನಿರ್ಮಾಣ ಕಾಮಗಾರಿಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಆದೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry