ಅಕ್ರಮ ಆಸ್ತಿ: ಈಶ್ವರಪ್ಪ ವಿರುದ್ಧ ತನಿಖೆಗೆ ಆದೇಶ

7

ಅಕ್ರಮ ಆಸ್ತಿ: ಈಶ್ವರಪ್ಪ ವಿರುದ್ಧ ತನಿಖೆಗೆ ಆದೇಶ

Published:
Updated:

ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಅವರ ಪುತ್ರ ಮತ್ತು ಸೊಸೆ  ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಖಾಸಗಿ ದೂರು ಸ್ವೀಕರಿಸಿ ಶನಿವಾರ ವಿಚಾರಣೆ ನಡೆಸಿದ ಇಲ್ಲಿನ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯ, ಫೆ. 4ರ ಒಳಗೆ ತನಿಖೆ ನಡೆಸಿ, ವರದಿ ನೀಡುವಂತೆ ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿಗೆ ಆದೇಶಿಸಿದೆ.ಈಶ್ವರಪ್ಪ ಅಧಿಕಾರ ದುರ್ಬಳಕೆ ಮಾಡಿಕೊಂಡು ಮಗ ಕೆ.ಇ. ಕಾಂತೇಶ್, ಸೊಸೆ ಶಾಲಿನಿ ಹೆಸರಿನಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ವಕೀಲ ವಿನೋದ್ ದಾಖಲೆ ಸಮೇತ ದೂರು ನೀಡಿದ್ದರು. ಇದನ್ನು ಆಧರಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರೂ ಆದ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯದ ನ್ಯಾಯಾಧೀಶ ಆರ್.ಎಂ. ಶೆಟ್ಟರ್ ತನಿಖೆಗೆ ಆದೇಶಿಸಿದ್ದಾರೆ.ಈಶ್ವರಪ್ಪ ಅವರ ಆದಾಯದ ಮೂಲಗಳೇನು? ಎಂದು ತಮ್ಮ ದೂರಿನಲ್ಲಿ ಪ್ರಶ್ನೆ ಮಾಡಿರುವ ವಿನೋದ್, ಮಗ ಕೆ.ಇ. ಕಾಂತೇಶ್, ಸೊಸೆ ಶಾಲಿನಿ ಅವರ ಆಸ್ತಿ ಮೂಲದ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.ಗುರುವಾರವೇ ಈ ಸಂಬಂಧ ದೂರು ನೀಡಿದ್ದರೂ, ದೂರು ಸ್ವೀಕಾರ ಕುರಿತಂತೆ ಶನಿವಾರ ದೃಢಪಡಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಅದರಂತೆ ಶನಿವಾರ ವಿಚಾರಣೆ ನಡೆದು, ಫೆ. 4ರ ಒಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ಡಿವೈಎಸ್ಪಿಗೆ ನ್ಯಾಯಾಧೀಶರು ಸೂಚನೆ ನೀಡಿದರು.

2006ರ ಹಿಂದೆ ಶಿವಮೊಗ್ಗ ನಗರದಲ್ಲಿ ಕೆ.ಎಸ್. ಈಶ್ವರಪ್ಪ ಅವರಿಗೆ ಪಿತ್ರಾರ್ಜಿತವಾಗಿ ಬಂದ ಮನೆಯಿತ್ತು. ಆದರೆ, ನಂತರ ತಮ್ಮ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಖರೀದಿಸಿದ್ದಾರೆ. ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮ ಸಂಪತ್ತು ಗಳಿಸಿದ್ದಾರೆ ಎಂಬುದು ದೂರುದಾರರ ಮುಖ್ಯ ಆರೋಪ. ಆಸ್ತಿ ಗಳಿಕೆಗೆ ಸಂಬಂಧಿಸಿದ ಬಹುತೇಕ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದು ನ್ಯಾಯಾಲಯಕ್ಕೆ ನೀಡಿದ ದೂರಿನೊಂದಿಗೆ ಸಲ್ಲಿಸಿದ್ದಾರೆ.`ನಾಲಿಗೆ ಸೀಳುತ್ತೇವೆ'

ಶಿವಮೊಗ್ಗ:
ಭಾಷೆ, ಪ್ರಾಂತ್ಯದ ಹೆಸರಿನಲ್ಲಿ ದೇಶವನ್ನು ಒಡೆಯಲು ಯತ್ನಿಸುವವರ ನಾಲಿಗೆ ಸೀಳಬೇಕಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಎಚ್ಚರಿಸಿದರು. ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, `ಧರ್ಮದ ಹೆಸರಿನಲ್ಲಿ ದೇಶವನ್ನು ತುಂಡು ಮಾಡಲಾಗಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry