ಸೋಮವಾರ, ಜೂನ್ 21, 2021
26 °C

ಅಕ್ರಮ ಆಸ್ತಿ: ದೇಶಪಾಂಡೆ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಕೈಗಾರಿಕೆ ಉದ್ದೇಶಕ್ಕಾಗಿ ಹಳಿಯಾಳದ ಹುಲ್ಲಟ್ಟಿ ಗ್ರಾಮದಲ್ಲಿ ಮೀಸಲಿಟ್ಟಿದ್ದ ಸರ್ಕಾರಿ ಜಮೀನನ್ನು ಅಕ್ರಮವಾಗಿ ತಮ್ಮ ಟ್ರಸ್ಟ್‌ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿ ಪ್ರವಾಸೋದ್ಯಮ ಹಾಗೂ ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ಹಾಗೂ ಅವರ ಕುಟುಂಬದ ವಿರುದ್ಧ ಆರ್‌.ಟಿ.ಐ ಕಾರ್ಯಕರ್ತ ಜಯಂತ ತಿನೇಕರ ಸೋಮವಾರ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದಾರೆ.



ಅಧಿಕಾರ ದುರುಪಯೋಗ ಹಾಗೂ ವಂಚನೆ ಕಾಯ್ದೆಯಡಿ ಆರ್‌.ವಿ. ದೇಶಪಾಂಡೆ ಅವರ ಪತ್ನಿ ರಾಧಾ ದೇಶಪಾಂಡೆ, ಮಕ್ಕಳಾದ ಪ್ರಸಾದ ದೇಶ­ಪಾಂಡೆ ಹಾಗೂ ಪ್ರಶಾಂತ ದೇಶಪಾಂಡೆ ವಿರುದ್ಧ ಪ್ರಕರಣ ದಾಖಲಿಸುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.



ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ತಿನೇಕರ್ ಮನವಿ ಮಾಡಿದ್ದಾರೆ. ಆದರೆ, ನ್ಯಾಯಾಧೀಶರು ದೂರನ್ನು ದಾಖಲಿಸಿಕೊಳ್ಳದೇ ಅರ್ಜಿಯ ವಿಚಾರಣೆಯನ್ನು ಮಾ. 12 ಕ್ಕೆ ಮುಂದೂಡಿದ್ದಾರೆ.



ಏನಿದು ಪ್ರಕರಣ?

ಆರ್‌.ವಿ ದೇಶಪಾಂಡೆ ಅವರು ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿದ್ದಾಗ ಹಳಿಯಾಳ ತಾಲ್ಲೂಕಿನ ಹುಲ್ಲಟ್ಟಿ ಗ್ರಾಮದ 34 ಎಕರೆ  24 ಗುಂಟೆ ಜಮೀನನ್ನು ಕೈಗಾರಿಕೆ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಬಗ್ಗೆ 2011ರ ಜನವರಿ 17 ರಂದು ರಾಜ್ಯ ಪತ್ರದಲ್ಲಿ ಪ್ರಕಟಗೊಂಡಿತ್ತು.



ಇದಾದ ಕೆಲವೇ ದಿನಗಳಲ್ಲಿ ಇದೇ ಜಮೀನಿನ 9 ಎಕರೆ 12 ಗುಂಟೆ ಭೂಮಿ ವಿ.ಆರ್‌. ದೇಶಪಾಂಡೆ ಮೆಮೋರಿಯಲ್‌ ಟ್ರಸ್ಟ್‌ಗೆ ವರ್ಗಾವಣೆಯಾಗಿದೆ ಎಂದು ದೂರಿ­ನಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ, ದೊಡ್ಡ ಕಂಪೆನಿಗಳಿಂದ ಟ್ರಸ್ಟ್‌ ಹೆಸರಿನಲ್ಲಿ ದೇಣಿಗೆ ಪಡೆದು ಅಕ್ರಮ ಆಸ್ತಿ ಸಂಪಾದಿಸಲಾಗಿದೆ.



ದೇಶಪಾಂಡೆ ಅವರು ತಮ್ಮ ಅಧಿಕಾರ ದುರುಪ­ಯೋಗ ಪಡಿಸಿಕೊಂಡು ಈ ರೀತಿ ಅಕ್ರಮ ಆಸ್ತಿ ಸಂಪಾದಿಸಿ ಜನರಿಗೆ, ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ತಿನೇಕರ ಆರೋಪಿಸಿದ್ದಾರೆ. ಈಚೆಗೆ ಜಮೀನು ‘ಡಿನೋಟಿಫಿ­ಕೇಷನ್‌’ ಪ್ರಕರಣಕ್ಕೆ ಸಂಬಂಧಿಸಿದಂತೆ ತಿನೇಕರ್ ಅವರು ಹಳಿಯಾಳದ ನ್ಯಾಯಾಲಯದಲ್ಲಿಯೂ ದೇಶಪಾಂಡೆ ಅವರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.