ಅಕ್ರಮ ಆಸ್ತಿ ಪ್ರಕರಣ: 7 ಗಂಟೆಗೂ ಹೆಚ್ಚು ಕಾಲ ಜಗನ್ ವಿಚಾರಣೆ

7

ಅಕ್ರಮ ಆಸ್ತಿ ಪ್ರಕರಣ: 7 ಗಂಟೆಗೂ ಹೆಚ್ಚು ಕಾಲ ಜಗನ್ ವಿಚಾರಣೆ

Published:
Updated:
ಅಕ್ರಮ ಆಸ್ತಿ ಪ್ರಕರಣ: 7 ಗಂಟೆಗೂ ಹೆಚ್ಚು ಕಾಲ ಜಗನ್ ವಿಚಾರಣೆ

ಹೈದರಾಬಾದ್: ಅಕ್ರಮ ಆಸ್ತಿ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಪಾ ಸಂಸದ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ.ಎಸ್.ಜಗನ್ಮೋಹನ ರೆಡ್ಡಿ (ಜಗನ್) ಅವರನ್ನು ಸಿಬಿಐ ಶುಕ್ರವಾರ 7 ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿತು.ತನಿಖಾ ಸಂಸ್ಥೆ ಅವರನ್ನು ಬಂಧಿಸಬಹುದು ಎಂಬ ಶಂಕೆಯ ನಡುವೆಯೇ ನಡೆದ ಈ ವಿಚಾರಣೆ, ಶನಿವಾರವೂ ಮುಂದುವರಿಯಲಿದೆ. ಸಿಬಿಐ ಕಚೇರಿ ಇರುವ ದಿಲ್‌ಕುಶ್ ಅತಿಥಿ ಗೃಹದಿಂದ ವಿಚಾರಣೆ ಮುಗಿಸಿ ಸಂಜೆ 6.30ಕ್ಕೆ ಹೊರಬಂದ ಜಗನ್, ಶನಿವಾರ ಬೆಳಿಗ್ಗೆ 10.30ಕ್ಕೆ ಮತ್ತೆ ತಾವು ಅಧಿಕಾರಿಗಳ ಎದುರು ಹಾಜರಾಗಲಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು.`ಸ್ಪಷ್ಟನೆ ಕೇಳಿದ್ದಾರೆ, ಕೊಟ್ಟಿದ್ದೇನೆ. ವಿಚಾರಣೆ ನಿರುದ್ವಿಗ್ನ ಮತ್ತು ಶಾಂತಿಯುತವಾಗಿತ್ತು~ ಎಂದಷ್ಟೇ ಪ್ರತಿಕ್ರಿಯಿಸಿ ತಮ್ಮ ನಿವಾಸಕ್ಕೆ ತೆರಳಿದರು.ಜಂಟಿ ನಿರ್ದೇಶಕ ವಿ.ವಿ.ಲಕ್ಷ್ಮಿನಾರಾಯಣ ನೇತೃತ್ವದ ಅಧಿಕಾರಿಗಳ ತಂಡ ಪ್ರತ್ಯೇಕವಾಗಿ ಮತ್ತು ಒಟ್ಟಿಗೇ ಜಗನ್ ಅವರ ವಿಚಾರಣೆ ನಡೆಸಿತು. ಈಗಾಗಲೇ ಬಂಧನದಲ್ಲಿರುವ ಕಂದಾಯ ಸಚಿವ ಮೋಪಿದೇವಿ ವೆಂಕಟರಮಣ, ಪ್ರಮುಖ ಉದ್ಯಮಿ ಎನ್.ಪ್ರಸಾದ್ ಮತ್ತು ಅಧಿಕಾರಿ ಕೆ.ವಿ.ಬ್ರಹ್ಮಾನಂದ ರೆಡ್ಡಿ ಅವರ ಸಮ್ಮುಖದಲ್ಲಿ ಅವರನ್ನು ಪ್ರಶ್ನಿಸಲಾಯಿತು ಎನ್ನಲಾಗಿದೆ.ಜಗನ್ ಅವರಿಗೆ ಮನೆಯಿಂದ ಊಟ ಕಳುಹಿಸಿಕೊಡಲಾಗಿತ್ತು.ಕಳೆದ ಆಗಸ್ಟ್‌ನಲ್ಲಿ ತಮ್ಮ ವಿರುದ್ಧ ಪ್ರಕರಣ ದಾಖಲಾದ ನಂತರ ಇದೇ ಮೊದಲ ಬಾರಿಗೆ ಅವರು ಸಿಬಿಐ ಮುಂದೆ ಹಾಜರಾದರು.ಬಿಗಿ ಭದ್ರತೆ: ಬೆಳಿಗ್ಗೆ 10.30ಕ್ಕೆ ಬಿಗಿ ಭದ್ರತೆಯ ನಡುವೆ ಜಗನ್ ತಮ್ಮ ನಿವಾಸದಿಂದ 7 ಕಿ.ಮೀ ದೂರದಲ್ಲಿರುವ ಅತಿಥಿ ಗೃಹಕ್ಕೆ ತೆರಳಿದರು. ಮಾರ್ಗದುದ್ದಕ್ಕೂ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಪೊಲೀಸರು ಕಣ್ಗಾವಲು ಇರಿಸಿದ್ದರು. ಇದರ ನಡುವೆಯೂ ಜಗನ್ ಬೆಂಬಲಿಗರು ಬೃಹತ್ ಸಂಖ್ಯೆಯಲ್ಲಿ ವಿವಿಧ ಸ್ಥಳಗಳಲ್ಲಿ ಒಟ್ಟುಗೂಡಿ ಘೋಷಣೆ ಕೂಗಿದರು. ತಮ್ಮ ನಾಯಕನ ಕಾರನ್ನು ಹಿಂಬಾಲಿಸಲು ಮುಂದಾದ ಮತ್ತು ಅವರ ಕೈಕುಲುಕಲು ಯತ್ನಿಸಿದ ಗುಂಪುಗಳನ್ನು ಪೊಲೀಸರು ಚದುರಿಸಿದರು.`ವಿಚಾರಣೆಯಾದ್ಯಂತ ಶಾಂತರಾಗಿದ್ದ ಜಗನ್, ಪ್ರಶ್ನೆಗಳಿಗೆ ಕೆಲವೇ ಮಾತುಗಳಲ್ಲಿ ಉತ್ತರಿಸುತ್ತಿದ್ದರು. ನಾವಿನ್ನೂ ಅವರನ್ನು ಬಹಳಷ್ಟು ಕೇಳಬೇಕಾಗಿದೆ. ಬಳಿಕ ಅದೆಲ್ಲವನ್ನೂ ಕಳೆದ 10 ತಿಂಗಳಿನಿಂದ ನಾವು ಸಂಗ್ರಹಿಸಿರುವ ಹೇಳಿಕೆಗಳು ಮತ್ತು ಸಾಕ್ಷ್ಯಗಳೊಂದಿಗೆ ದೃಢೀಕರಿಸಬೇಕಾಗಿದೆ~ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.ಜಗನ್ ವಿಚಾರಣೆ ವಿರೋಧಿಸಿ ಅವರ ಅಭಿಮಾನಿಗಳು ಎರಡು ನಗರ ಸಾರಿಗೆ ಬಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ತಮ್ಮ ನಾಯಕನ ಬಂಧನದ ಕಾಲ ಸನ್ನಿಹಿತವಾಗುತ್ತಿದೆ ಎಂಬ ವಿಷಯವನ್ನು ಟಿ.ವಿ ಮೂಲಕ ತಿಳಿದ ಚಿತ್ತೂರು ಜಿಲ್ಲೆಯ ಸುಬ್ರಹ್ಮಣ್ಯಂ ಎಂಬುವವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ಇದೇ ಕಾರಣಕ್ಕೆ, ಇದೇ ಜಿಲ್ಲೆಯ ಅಂಗವಿಕಲ ಯುವಕ ಈಶ್ವರ ರೆಡ್ಡಿ (29) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry