ಅಕ್ರಮ ಆಸ್ತಿ: ಶಾಸಕ ಸಿ.ಟಿ.ರವಿ ವಿರುದ್ಧ ದೂರು

7

ಅಕ್ರಮ ಆಸ್ತಿ: ಶಾಸಕ ಸಿ.ಟಿ.ರವಿ ವಿರುದ್ಧ ದೂರು

Published:
Updated:

ಬೆಂಗಳೂರು: ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿ ಸೋಮವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿರುವ ಚಿಕ್ಕಮಗಳೂರಿನ ಎ.ಸಿ.ಕುಮಾರ್ ಎಂಬುವರು, ಈ ಕುರಿತು ತನಿಖೆಗೆ ಆದೇಶಿಸುವಂತೆ ಮನವಿ ಮಾಡಿದ್ದಾರೆ.

`ರವಿ ಅವರು 2005ರಲ್ಲಿ ತಮ್ಮ ಆಸ್ತಿಯ ಮೌಲ್ಯ 10.10 ಲಕ್ಷ ರೂಪಾಯಿ ಎಂದು ಘೋಷಿಸಿದ್ದರು. ವಾರ್ಷಿಕ ಆದಾಯ ರೂ 1.20 ಲಕ್ಷ ಎಂದು ಪ್ರಕಟಿಸಿದ್ದರು. 2008ರಲ್ಲಿ ಅವರ ವಾರ್ಷಿಕ ಆದಾಯ ರೂ 18.09 ಲಕ್ಷ ಇತ್ತು. ಈ ಅವಧಿಯಲ್ಲಿ ಆಸ್ತಿಯ ಒಟ್ಟು ಮೌಲ್ಯ 93 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. 2009ರಲ್ಲಿ ಆಸ್ತಿಯ ಮೌಲ್ಯ ರೂ 1.60 ಕೋಟಿಗೆ ಹೆಚ್ಚಳವಾಗಿದೆ~ ಎಂದು ದೂರಿನಲ್ಲಿ ತಿಳಿಸಿದ್ದಾರೆ.

`ಶಾಸಕರ ವೇತನ ಮತ್ತು ಭತ್ಯೆ ಹೊರತಾಗಿ ರವಿ ಅವರಿಗೆ ಯಾವುದೇ ಆದಾಯದ ಮೂಲಗಳಿಲ್ಲ. ಆದರೂ ಚಿಕ್ಕಮಗಳೂರು ನಗರದಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಮನೆ ನಿರ್ಮಿಸಿದ್ದಾರೆ. ವಿವಿಧ ಕಡೆಗಳಲ್ಲೂ ಸ್ಥಿರಾಸ್ತಿ ಹೊಂದಿದ್ದಾರೆ~ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 13(1)(ಇ) ಮತ್ತು 13(2)ರ ಅಡಿಯಲ್ಲಿ ರವಿ ವಿರುದ್ಧ ತನಿಖೆಗೆ ಆದೇಶಿಸಬೇಕು. ಅರ್ಜಿಯಲ್ಲಿರುವ ಅಂಶಗಳ ಕುರಿತು ತನಿಖೆಗೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನು ಸಾಕ್ಷಿದಾರ ಎಂದು ದೂರಿನಲ್ಲಿ ಹೆಸರಿಸಲಾಗಿದೆ.

ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರಿಗೆ ಕುಮಾರ್ ಸೋಮವಾರ ಅರ್ಜಿ ಸಲ್ಲಿಸಿದರು. ದೂರಿನಲ್ಲಿರುವ ಅಂಶಗಳಿಗೆ ಸಂಬಂಧಿಸಿದಂತೆ ದೂರುದಾರರಿಂದ ವಿವರಣೆ ಪಡೆದ ನ್ಯಾಯಾಧೀಶರು ಜೂನ್ 4ಕ್ಕೆ ವಿಚಾರಣೆ ಮುಂದೂಡಿದರು. ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸುವ ಅಥವಾ ತಿರಸ್ಕರಿಸುವ ಕುರಿತು ಅದೇ ದಿನ ಆದೇಶ ಪ್ರಕಟವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry