ಮಂಗಳವಾರ, ಏಪ್ರಿಲ್ 20, 2021
27 °C

ಅಕ್ರಮ ಎಸಗುವ ಸಿಬ್ಬಂದಿ ಜೈಲಿಗೆ: ಮೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಸರ್ಕಾರಿ ಕಚೇರಿಗಳಲ್ಲಿ ಅಕ್ರಮ ಎಸಗುವ ಸಿಬ್ಬಂದಿಗಳನ್ನು ಖಂಡಿತಾ ಜೈಲಿಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಎಚ್ಚರಿಕೆ ನೀಡಿದರು.ನಗರದ ತಾಲ್ಲೂಕು ಕಚೇರಿಗೆ ಬುಧವಾರ ದಿಢೀರ್ ಭೇಟಿ ನೀಡಿ ಮೂಲ ದಾಖಲೆಗಳ ನಿರ್ವಹಣೆ ಕೊಠಡಿ-ಅಭಿಲೇಖಾಲಯದಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಡನೆ ಮಾತನಾಡಿದರು.‘ಲಂಚ ಪಡೆದ ತಪ್ಪಿಗೆ ತಾಲ್ಲೂಕು ಕಚೇರಿಯ ಐವರು ಸರ್ವೆಯರ್‌ಗಳು ಈಗಾಗಲೇ ಜೈಲಿಗೆ ಹೋಗಿದ್ದಾರೆ. ಸಿಬ್ಬಂದಿ ಮೇಲೆ ಹಲವು ದೂರು ಬಂದಿದ್ದು, ಇನ್ನಷ್ಟು ಮಂದಿಯನ್ನು ಯಾವುದೇ ಮುಲಾಜಿಲ್ಲದೆ ಜೈಲಿಗೆ ಕಳಿಸಲಾಗುವುದು’ ಎಂದು ಹೇಳಿದರು. ದೂರು-ಪರಿಶೀಲನೆ: ಅಭಿಲೇಖಾಲಯದಲ್ಲಿನ ಸಿಬ್ಬಂದಿ ಮತ್ತು ಗ್ರಾಮ ಸಹಾಯಕರು ತಾಲ್ಲೂಕಿನ ರೈತರ ಮತ್ತು ಸರ್ಕಾರಿ ಜಮೀನುಗಳ ದಾಖಲೆಗಳಲ್ಲಿ ಕಾನೂನು ಬಾಹಿರವಾಗಿ ಬೇನಾಮಿ ಹೆಸರು ಸೇರಿಸುತ್ತಿದ್ದಾರೆ ಎಂದು ಕರ್ನಾಟಕ ರೈತ ಹಕ್ಕುಗಳ ಹೋರಾಟ ಸಮಿತಿಯು ಮಾ.7ರಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ 12ರ ವೇಳೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದರು.ಪರಿಶೀಲನೆ ವೇಳೆ, 1997-98ರ ಅವಧಿಯ ದಾಖಲೆಯೊಂದರಲ್ಲಿ, ಮ್ಯುಟೇಶನ್ ದಾಖಲೆ ಇಲ್ಲದೆಯೇ ಹೆಚ್ಚುವರಿ ಹೆಸರನ್ನು ಸೇರಿಸಿದ್ದು ಕಂಡುಬಂದ ಹಿನ್ನೆಲೆಯಲ್ಲಿ, ಅಂದು ಕರ್ತವ್ಯ ನಿರ್ವಹಿಸಿದ್ದ ಗ್ರಾಮ ಸಹಾಯಕ ಸೇರಿದಂತೆ ದಾಖಲೀಕರಣ ನಡೆಸಿದ ಸಿಬ್ಬಂದಿ, ಹೆಸರು ಸೇರ್ಪಡೆಯಾದವರೆಲ್ಲರಿಗೂ ಕಾರಣ ಕೇಳಿ ನೋಟಿಸ್ ನೀಡುವಂತೆ ಅವರು ಸ್ಥಳದಲ್ಲೆ ಇದ್ದ ತಹಶೀಲ್ದಾರ್ ಎಸ್.ಎಂ.ಮಂಗಳಾ ಅವರಿಗೆ ಸೂಚಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.