ಬುಧವಾರ, ಜೂನ್ 16, 2021
22 °C

ಅಕ್ರಮ ಕಟ್ಟಡಗಳಿಗೆ ಅನುಮತಿ: ಅಧಿಕಾರಿಗಳ ವಿರುದ್ಧ ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬನ್ನೇರುಘಟ್ಟ ರಸ್ತೆ ಅರಕೆರೆ ಗ್ರಾಮದ 7.29 ಎಕರೆ ಭೂಮಿಯಲ್ಲಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿರುವ ಆರೋಪದ ಮೇಲೆ ಐವರು ಐಎಎಸ್, ಒಬ್ಬ ಕೆಎಎಸ್ ಅಧಿಕಾರಿ ಸೇರಿದಂತೆ 13 ಜನರ ವಿರುದ್ಧ ಲೋಕಾಯುಕ್ತ ಪೊಲೀಸರು ಗುರುವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರಾಗಿದ್ದ ಸಿದ್ದಯ್ಯ, ಹಾಲಿ ಆಯುಕ್ತ ಭರತ್‌ಲಾಲ್ ಮೀನಾ, ಹಿಂದೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದು, ಈಗ ಅಭಿವೃದ್ಧಿ ಆಯುಕ್ತರಾಗಿರುವ ಸುಬೀರ್ ಹರಿಸಿಂಗ್, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ಎಂ.ವಿ.ವೀರಭದ್ರಯ್ಯ, ಗೃಹ ಸಚಿವರ ಆಪ್ತ ಕಾರ್ಯದರ್ಶಿ ಡಾ.ರಾಮೇಗೌಡ, ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ ಜಿ.ಎಸ್.ನಾಯಕ್, ಬಿಡಿಎ ಕಾನೂನು ಸಲಹೆಗಾರರಾಗಿದ್ದ ನಿವೃತ್ತ ನ್ಯಾಯಾಧೀಶ ಸೋಸಲೆ ಇಂದೂಧರ, ಉಪ ನೋಂದಣಾಧಿಕಾರಿ ಯಶೋಧರ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.7.29 ಎಕರೆ ಭೂಮಿಯನ್ನು ಜಂಟಿ ಪಾಲುದಾರಿಕೆಗೆ ಪಡೆದಿರುವ ಎಸ್‌ಜೆಆರ್ ಡೆವಲಪರ್ಸ್ ಕಂಪೆನಿಯ ಭೂಪೇಶ್ ರೆಡ್ಡಿ, ವಿಜಯ್ ರೆಡ್ಡಿ, ಭೂಮಿಯ ಮೂಲ ಮಾಲೀಕರಾದ ಎಂ.ಆರ್.ರಮೇಶ್, ಎಂ.ಆರ್.ಸತೀಶ್ ಮತ್ತು ಎಂ.ಆರ್.ರವಿ ಕೂಡ ಆರೋಪಿಗಳ ಪಟ್ಟಿಯಲ್ಲಿದ್ದಾರೆ.ಜೆ.ಪಿ.ನಗರ 9ನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ವಶಪಡಿಸಿಕೊಂಡಿದ್ದ ಈ ಭೂಮಿಯನ್ನು, ನರ್ಸರಿ ಚಟುವಟಿಕೆಗೆ ಮಾತ್ರ ಬಳಸಬೇಕು ಎಂಬ ಷರತ್ತಿನ ಮೇಲೆ 1996ರಲ್ಲಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿತ್ತು. ಆದರೆ, ಈ ಭೂಮಿಯಲ್ಲಿ ಬಹುಮಹಡಿ ವಸತಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವ ಮೂಲಕ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಪಿ.ಲಕ್ಷ್ಮೀನಾರಾಯಣ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.ನ್ಯಾಯಾಲಯದ ಆದೇಶದ ಪ್ರಕಾರ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ಎಲ್ಲ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದರು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ವಿವಿಧ ಕಲಮುಗಳ ಅಡಿಯಲ್ಲಿ ಈ ಎಫ್‌ಐಆರ್ ಅನ್ನು ದಾಖಲು ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.