ಅಕ್ರಮ ಕಟ್ಟಡ ತೆರವು ಚುರುಕು

ಶನಿವಾರ, ಜೂಲೈ 20, 2019
24 °C

ಅಕ್ರಮ ಕಟ್ಟಡ ತೆರವು ಚುರುಕು

Published:
Updated:

ತುಮಕೂರು: ಸರ್ಕಾರಿ ಭೂಮಿ ಅತಿಕ್ರಮಣ ತೆರವಿಗಾಗಿ ರಾಜ್ಯ ಸರ್ಕಾರ ರಚಿಸಿದ್ದ ಬಾಲಸುಬ್ರಮಣ್ಯಂ ಸಮಿತಿಯ ಶಿಫಾರಸಿನಂತೆ ನಗರದ ವಿವಿಧೆಡೆ ಮಂಗಳವಾರದಿಂದ ನಗರಸಭೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿದೆ. ಬುಧವಾರ ಶೆಟ್ಟಿಹಳ್ಳಿ ರೈಲ್ವೆಗೇಟ್ ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಲಾಗಿದ್ದ ಹಲವು ಮಳಿಗೆಗಳನ್ನು ಕೆಡವಲಾಯಿತು.ಕೆಲವು ಕಟ್ಟಡ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಮಾಹಿತಿ ಇದೆ. ತಡೆಯಾಜ್ಞೆಯಲ್ಲಿ ಉಲ್ಲೇಖವಾಗಿರುವ ಅಂಶಗಳ ಬಗ್ಗೆ ನಗರಸಭೆ ವಕೀಲರು ಪರಿಶೀಲಿಸಿ ತಮ್ಮ ಅಭಿಪ್ರಾಯ ತಿಳಿಸಿದ ನಂತರ ಈ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಎಂಜಿನಿಯರ್ ಪಿ.ಬಿ.ಪ್ರಕಾಶ್ ತಿಳಿಸಿದರು.`ತಮ್ಮ ಇಡೀ ಆಸ್ತಿ ಸಂರಕ್ಷಣೆಗೆ ತಡೆಯಾಜ್ಞೆ ತಂದಿದ್ದಾರಾ? ಸರ್ಕಾರಿ ಭೂಮಿಯಲ್ಲಿರುವ ಕಟ್ಟಡ ತೆರವು ಮಾಡಬಾರದೆಂದು ತಡೆಯಾಜ್ಞೆ ಉಲ್ಲೇಖಿಸಿದೆಯೇ? ಒತ್ತುವರಿ ಬಗ್ಗೆ ನ್ಯಾಯಾಲಯದ ಅಭಿಪ್ರಾಯವೇನು?~ ಎಂಬ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರೆತ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.ಕಟ್ಟಡ ತೆರವಿನ ಬಗ್ಗೆ ಕೆಲವು ಸಾರ್ವಜನಿಕರು ನಗರಸಭೆ ಅಧಿಕಾರಿಗಳಿಗೆ ಬಗೆಬಗೆ ಪ್ರಶ್ನೆ ಕೇಳುತ್ತಿದ್ದು ಸಾಮಾನ್ಯವಾಗಿತ್ತು. `ನಮ್ಗೆ ನೋಟಿಸ್ ಕೊಟ್ಟಿಲ್ಲ. ಸಾಮಾನು ತೆಗೆದಿಟ್ಟುಕೊಳ್ಳಲೂ ಅವಕಾಶ ನೀಡದಂತೆ ಕಟ್ಟಡ ಒಡೆದು ಹಾಕಿದರು~ ಎಂದು ಮಳಿಗೆಯೊಂದರ ಮಾಲೀಕರು ಅಲವತ್ತುಕೊಂಡರು.`15 ದಿನದ ಹಿಂದೆಯೇ ನೋಟಿಸ್ ನೀಡಿ ಕಟ್ಟಡದಿಂದ ಸಾಮಾನುಗಳನ್ನು ಸಾಗಿಸುವಂತೆ ಸೂಚಿಸಲಾಗಿತ್ತು. ಮಂಗಳವಾರ ಸಹ ಈ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿತ್ತು~ ಎಂದು ನಗರಸಭೆ ಎಂಜಿನಿಯರ್ ಶಶಿಕುಮಾರ್ ಹೇಳಿದರು.ಮರಳೂರು, ಕೆ.ಕೆ.ರಸ್ತೆ, ಎಸ್‌ಎಸ್‌ಐಟಿ ಕಾಂಪೌಂಡ್, ಕೋತಿತೋಪು, ಗುಂಚಿಸ್ಕ್ವೇರ್, ಕೆಇಬಿ ಕಚೇರಿ ಸಮೀಪ ಸರ್ಕಾರಿ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ನಗರಸಭೆ ಆಸ್ತಿಯನ್ನು ವಶಪಡಿಸಿಕೊಳ್ಳುವ ಕಾರ್ಯ ಎಲ್ಲೆಡೆ ನಡೆಯಲಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry