ಅಕ್ರಮ ಕಟ್ಟಡ: ಹೈಕೋರ್ಟ್‌ಗೆ ಬಿಬಿಎಂಪಿ ಭರವಸೆ

7

ಅಕ್ರಮ ಕಟ್ಟಡ: ಹೈಕೋರ್ಟ್‌ಗೆ ಬಿಬಿಎಂಪಿ ಭರವಸೆ

Published:
Updated:

ಬೆಂಗಳೂರು: ನಗರದ ಬೊಮ್ಮನಹಳ್ಳಿಯಲ್ಲಿ ವ್ಯಕ್ತಿಯೊಬ್ಬರು ಅಕ್ರಮವಾಗಿ ನಾಲ್ಕು ಮಹಡಿಗಳ ಕಟ್ಟಡವನ್ನು ನಿರ್ಮಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೈಕೋರ್ಟ್‌ಗೆ ಭರವಸೆ ನೀಡಿದೆ.

ಬೊಮ್ಮನಹಳ್ಳಿಯ ಕೃಷ್ಣಪ್ಪ ರೆಡ್ಡಿ ಬಡಾವಣೆಯಲ್ಲಿ ಬಿ.ಕೆ. ನಾಗಭೂಷಣ ರೆಡ್ಡಿ ಎಂಬುವವರು ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸಿದ್ದಾರೆ.

ಅವರ ವಿರುದ್ಧ ಕ್ರಮ ಜರುಗಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಎಸ್.ಪಿ.ವಿಜಯ್ ಕುಮಾರ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠಕ್ಕೆ ಬಿಬಿಎಂಪಿ ಪರ ವಕೀಲರು ಈ ಭರವಸೆ ನೀಡಿದ್ದಾರೆ.

ನಾಗಭೂಷಣ ರೆಡ್ಡಿ ಅವರು ಕಟ್ಟಡ ನಿರ್ಮಿಸಿರುವ ಸ್ಥಳವನ್ನು ಬೆಂಗಳೂರು ಮಹಾನಗರ ಕಾರ್ಯಪಡೆಯ (ಬಿಎಂಟಿಎಫ್) ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅಕ್ರಮ ಕಟ್ಟಡಕ್ಕೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಕೂಡ ದಾಖಲಾಗಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರು ಸೂಕ್ತ ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದು ಬಿಬಿಂಪಿ ಪರ ವಕೀಲರು ತಿಳಿಸಿದರು. ಅವರ ಭರವಸೆಯನ್ನು ಮಾನ್ಯ ಮಾಡಿದ ನ್ಯಾಯಪೀಠ, ಅರ್ಜಿ ಇತ್ಯರ್ಥಗೊಳಿಸಿದೆ.ಹಿನ್ನೆಲೆ: ಕೃಷ್ಣಪ್ಪ ರೆಡ್ಡಿ ಬಡಾವಣೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ತಲೆ ಎತ್ತುತ್ತಿರುವುದನ್ನು ಗಮನಿಸಿದ ವಿಜಯ್ ಕುಮಾರ್ ಅವರು, ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿ ಕೆಲವು ವಿವರಗಳನ್ನು ಪಡೆದರು. ಈ ಕಟ್ಟಡ ಕಾನೂನು ಉಲ್ಲಂಘಿಸಿ ನಿರ್ಮಾಣ ಆಗುತ್ತಿದೆ ಎಂಬುದು ಆರ್‌ಟಿಐ ಅಡಿ ಪಡೆದ ದಾಖಲೆಗಳ ಮೂಲಕ ಗೊತ್ತಾಯಿತು.`ನಿರ್ದೇಶನಗಳಿಗೆ ಬೆಲೆ ಇಲ್ಲ': ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಸಹಾಯಕ ನಿರ್ದೇಶಕರಿಂದ (ನಗರ ಯೋಜನೆ) ಮಾಹಿತಿ ಕೋರಿದ ವಿಜಯ್ ಕುಮಾರ್ ಅವರಿಗೆ, ಈ ಕಟ್ಟಡ ನಿರ್ಮಿಸಲು ಬಿಬಿಎಂಪಿಯಿಂದ ಅಗತ್ಯ ಒಪ್ಪಿಗೆ ಪತ್ರ ಪಡೆದಿಲ್ಲ ಎನ್ನುವುದೂ ತಿಳಿಯಿತು. ಇದೇ ಮಾರ್ಚ್ 31ರಂದು ಬೊಮ್ಮನಹಳ್ಳಿ ವಲಯದ ಸಹಾಯಕ ನಿರ್ದೇಶಕರಿಗೆ (ನಗರ ಯೋಜನೆ) ಪತ್ರ ಬರೆದ ಬಿಎಂಟಿಎಫ್ ಅಧಿಕಾರಿಗಳು, ಈ ಅಕ್ರಮ ಕಟ್ಟಡದ ವಿರುದ್ಧ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದರು.ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರು ಬಿಬಿಎಂಪಿ ಆಯುಕ್ತರಿಗೆ ಇದೇ ಏಪ್ರಿಲ್ 8ರಂದು ಬರೆದ ಪತ್ರದಲ್ಲೂ, ಈ ಅಕ್ರಮ ಕಟ್ಟಡದ ವಿರುದ್ಧ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದ್ದರು. ಇಷ್ಟೆಲ್ಲ ನಿರ್ದೇಶನಗಳು ಇದ್ದರೂ, ಬಿಬಿಎಂಪಿ ಆಯುಕ್ತರು ಅಕ್ರಮ ಕಟ್ಟಡದ ವಿರುದ್ಧ ಯಾವುದೇ ಕ್ರಮ ಜರುಗಿಸಲು ಮುಂದಾಗಿಲ್ಲ ಎಂದು ದೂರಿ ವಿಜಯ್ ಕುಮಾರ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು.ಅಕ್ರಮ ಕಟ್ಟಡಕ್ಕೆ ನೀರು ಮತ್ತು ವಿದ್ಯುತ್ ಸಂಪರ್ಕ ಸಹ ಕಲ್ಪಿಸಲಾಗಿತ್ತು. ಕಟ್ಟಡ ನಿರ್ಮಾಣದಲ್ಲಿ ಕಾನೂನು ಉಲ್ಲಂಘಿಸಲಾಗಿದೆ ಎಂದು ಬಿಎಂಟಿಎಫ್ ಮಾಹಿತಿ ನೀಡಿದ್ದರೂ, ಪಾಲಿಕೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅವರು ಅರ್ಜಿಯಲ್ಲಿ ದೂರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry