ಮಂಗಳವಾರ, ಜೂನ್ 15, 2021
23 °C

ಅಕ್ರಮ ಕಲ್ಲು ಗಣಿಗಾರಿಕೆ: ಯೋಗೇಶ್ವರ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ ಗಡಿ ಗುರುತು ಬದಲಿಸಿದ ಹಾಗೆ ಕನಕಪುರದಲ್ಲೂ ಅಕ್ರಮ ಕಲ್ಲು ಗಣಿಗಾರಿಕೆ ಸಲುವಾಗಿ ಅರಣ್ಯ ಪ್ರದೇಶದ ಗಡಿ ಗುರುತು ಬದಲಿಸಿದ್ದು, ಇದರಲ್ಲಿ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಮತ್ತು ಅವರ ಸಂಬಂಧಿಕರು ಭಾಗಿಯಾಗಿದ್ದಾರೆ ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಸೋಮವಾರ ಇಲ್ಲಿ ಆರೋಪಿಸಿದರು.ಐಎಫ್‌ಎಸ್ ಅಧಿಕಾರಿ ಯು.ವಿ.ಸಿಂಗ್ 2006ರಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ಅಂಶಗಳನ್ನು ಸ್ಪಷ್ಟಪಡಿಸಿದ್ದು, ಈ ಸಂಬಂಧ ಅವರ ಕುಟುಂಬದವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೂ ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಸಿಂಗ್ ವರದಿ ಸಲ್ಲಿಸಿದ್ದು, ಅದರಲ್ಲಿ ಶಿವಕುಮಾರ್ ಮತ್ತು ಅವರ ಸಂಬಂಧಿಕರ ಹೆಸರಿನಲ್ಲಿರುವ 11 ಕಂಪೆನಿಗಳು ಅಕ್ರಮ ಎಸಗಿರುವುದರ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದರಿಂದ ಸುಮಾರು 64 ಕೋಟಿ ರೂಪಾಯಿ ನಷ್ಟ ಆಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ ಎಂದರು.`ಶಿವಕುಮಾರ್ ವಿರುದ್ಧ ನನಗೆ ವೈಯಕ್ತಿಕ ದ್ವೇಷ ಇಲ್ಲ. ಅರಣ್ಯ ಸಚಿವನಾದ ನಾನು ಅರಣ್ಯ ರಕ್ಷಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಂಡಿದ್ದೇನೆ. ಜೆಡಿಎಸ್- ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಇವರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಿದ್ದು, ಅವು ವಿಚಾರಣೆ ಹಂತದಲ್ಲಿವೆ~ ಎಂದು ಹೇಳಿದರು.2009ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಿವಕುಮಾರ್ ಪತ್ರ ಬರೆದು, ತಮ್ಮ ವಿರುದ್ಧದ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ಸಲ್ಲಿಸಿದ್ದ ಮನವಿ ಪತ್ರದಲ್ಲಿ ಮಠಾಧೀಶರೊಬ್ಬರ ಹೆಸರನ್ನೂ ಮೊದಲು ಉಲ್ಲೇಖಿಸಲಾಗಿದೆ.

 

ಅವರ ಹೆಸರಿನ ನಂತರ ಶಿವಕುಮಾರ್ ಕುಟುಂಬದವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಅರಣ್ಯದಲ್ಲಿ ಗಣಿಗಾರಿಕೆ ನಡೆಸಿದ್ದಕ್ಕೂ ಮಠಾಧೀಶರ ವಿರುದ್ಧದ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಆದರೂ ಅವರ ಹೆಸರನ್ನು ಪತ್ರದಲ್ಲಿ ಬರೆದಿದ್ದು ಇದೇ ಶಿವಕುಮಾರ್ ಎಂದು ಟೀಕಿಸಿದರು.ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಭಾಗಗಳನ್ನು ಪರಿಭಾವಿತ ಅರಣ್ಯ ಪ್ರದೇಶ ಎಂದು ಘೋಷಿಸಿದ್ದರೂ ಅದನ್ನು ಕಂದಾಯ ಮತ್ತು ಗಣಿ ಇಲಾಖೆ ಇನ್ನೂ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿಲ್ಲ. ಇದನ್ನೇ ನೆಪ ಮಾಡಿಕೊಂಡು ಕಂದಾಯ ಮತ್ತು ಗಣಿ ಇಲಾಖೆ ಅಧಿಕಾರಿಗಳು ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದರು.ಹತೋಟಿಗೆ: ಇತ್ತೀಚೆಗೆ ತೆಗೆದುಕೊಂಡ ಬಿಗಿ ಕ್ರಮಗಳಿಂದಾಗಿ ಕನಕಪುರ ಮತ್ತು ಸಾತನೂರು ವ್ಯಾಪ್ತಿಯಲ್ಲಿನ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ಬಂದಿದ್ದು, ಅಲ್ಲಿಗೆ ತೆರಳುವ ಅಧಿಕಾರಿಗಳ ಮೇಲೆ ಶಿವಕುಮಾರ್ ಕಡೆಯವರು ಹಲ್ಲೆ ಮಾಡುವ ಪ್ರಸಂಗಗಳು ವರದಿಯಾಗುತ್ತಿವೆ. ಸೂಕ್ತ ಕ್ರಮಕ್ಕೆ ಪೊಲೀಸರಿಗೂ ಸೂಚಿಸಲಾಗಿದೆ.

 

ತನಿಖೆ ಸಲುವಾಗಿ ಸ್ಥಳಕ್ಕೆ ತೆರಳಿದ್ದ ಡಿ.ಸಿ.ಎಫ್ ತಕತ್‌ಸಿಂಗ್ ರಾಣಾವತ್ ಮೇಲೂ ಹಲ್ಲೆ ನಡೆಸುವ ಸಂಚು ನಡೆದಿತ್ತು ಎಂದು ಅವರು ಹೇಳಿದರು.ರಾಣಾವತ್ ತನಿಖೆ ನಡೆಸುತ್ತಿದ್ದು, 15-20 ದಿನಗಳಲ್ಲಿ ವರದಿ ನೀಡಲಿದ್ದಾರೆ. ಅದರ ನಂತರ ತನಿಖೆ ನಡೆಯಲಿದೆ ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.