ಅಕ್ರಮ ಕಾಮಗಾರಿ ತನಿಖೆಗೆ ಸದನ ಸಮಿತಿ

7
ಲೋಕೋಪಯೋಗಿ ಇಲಾಖೆಯಲ್ಲಿನ ಗುತ್ತಿಗೆ ಹಗರಣ

ಅಕ್ರಮ ಕಾಮಗಾರಿ ತನಿಖೆಗೆ ಸದನ ಸಮಿತಿ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ರಾಮನಗರ ಜಿಲ್ಲೆಯ ಮಾಗಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಗುತ್ತಿಗೆ ನೀಡುವಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸಲು ಸದನ ಸಮಿತಿ ನೇಮಕ ಮಾಡುವುದಾಗಿ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ಪ್ರಕಟಿಸಿತು.ಪ್ರಶ್ನೋತ್ತರ ಅವಧಿಯ ಬಳಿಕ ಗಮನ ಸೆಳೆಯುವ ಸೂಚನೆ ಮಂಡಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, `ಲೋಕೋಪಯೋಗಿ ಇಲಾಖೆಯಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಮಾಗಡಿ ಉಪ ವಿಭಾಗದಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ. ರೂ 500 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳನ್ನು ಕಾನೂನು ಉಲ್ಲಂಘಿಸಿ ಮೂವರು ಗುತ್ತಿಗೆದಾರರಿಗೆ ನೀಡಲಾಗಿದೆ' ಎಂದು ಆರೋಪಿಸಿದರು.`ರೂ 20 ಲಕ್ಷಕ್ಕಿಂತ ಹೆಚ್ಚು ಮೊತ್ತದ ಕಾಮಗಾರಿಗಳಲ್ಲಿ ಇ-ಟೆಂಡರ್ ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ರೂ 19.90 ಲಕ್ಷದ ಆಸುಪಾಸಿನಲ್ಲಿ ಕಾಮಗಾರಿಗಳನ್ನು ವಿಭಜಿಸಲಾಗಿದೆ. ಮಾಗಡಿ ಉಪ ವಿಭಾಗದಲ್ಲಿ ನಂಜಯ್ಯ, ಕೆಂಪರಾಜು, ಶಂಕರ್ ಎಂಬ ಗುತ್ತಿಗೆದಾರರಿಗೆ ತಲಾ 50ರಿಂದ 100 ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ. ಕಾನೂನಿನ ಕಣ್ಣಿಗೆ ಮಣ್ಣೆರಚಿ ಇಂತಹ ಅಕ್ರಮ ಎಸಗಿದ್ದಾರೆ' ಎಂದು ದೂರಿದರು.ಸರ್ಕಾರದ ಶಾಮೀಲು; ಟೀಕೆ: ಉಡುಪಿ, ಮಂಗಳೂರು, ಹುಬ್ಬಳ್ಳಿ, ಗದಗ, ಗುಲ್ಬರ್ಗ ಮತ್ತಿತರ ಕಡೆಗಳಲ್ಲಿ ಈ ಕಾಮಗಾರಿಗಳ ಟೆಂಡರ್ ಅಧಿಸೂಚನೆ ಜಾಹೀರಾತು ಪ್ರಕಟವಾಗಿವೆ. ಲೋಕೋಪಯೋಗಿ ಇಲಾಖೆಯ ಎಂಜಿನಿಯರುಗಳು, ಗುತ್ತಿಗೆದಾರರು ಮತ್ತು ಹಣಕಾಸು ಇಲಾಖೆ ಅಧಿಕಾರಿಗಳು ಸೇರಿ ಈ ಅಕ್ರಮ ನಡೆಸಿದ್ದಾರೆ. ಸರ್ಕಾರವೇ ಇದರಲ್ಲಿ ಶಾಮೀಲಾಗಿದೆ ಎಂದು ಟೀಕಿಸಿದರು.`ಈ ಅವ್ಯವಹಾರ ಮಾಗಡಿ ಉಪ ವಿಭಾಗಕ್ಕೆ ಸೀಮಿತವಾಗಿಲ್ಲ. ರಾಮನಗರ, ಕೋಲಾರ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವೆಡೆ ಇಂತಹ ಅನೇಕ ಪ್ರಕರಣಗಳು ನಡೆದಿವೆ. ಸಚಿವರ ಗಮನಕ್ಕೆ ಬಾರದೆ ಇದು ನಡೆದಿದೆಯೇ. ಇಷ್ಟು ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಹಿಂದೆ ಯಾರು ಇದ್ದಾರೆ. ಸಚಿವರಾಗಿ ನೀವು ಏನು ಮಾಡುತ್ತಿದ್ದಿರಿ' ಎಂದು ಉದಾಸಿ ಅವರಿಗೆ ಪ್ರಶ್ನೆಗಳ ಮಳೆಗೈದರು.`ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸುತ್ತಿರುವವರು ಬಹಳ ಪ್ರಭಾವಿಗಳು. ಶಾಸಕರೇ ಕಮಿಷನ್ ನೀಡಿ ತಮ್ಮ ಕ್ಷೇತ್ರಗಳಿಗೆ ಅನುದಾನ ಪಡೆಯುತ್ತಿದ್ದಾರೆ. ಅನುದಾನ ಮಂಜೂರಾತಿಗೆ ಶೇಕಡ 10 ಮತ್ತು ಕೆಲಸ ಪೂರ್ಣಗೊಂಡ ಬಳಿಕ ಹಣ ಬಿಡುಗಡೆಗೆ ಶೇ 10ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಕೆಲವು ಗುತ್ತಿಗೆದಾರರು ನನ್ನ ಬಳಿ ಈ ವಿಷಯ ತಿಳಿಸಿದ್ದಾರೆ. ಭ್ರಷ್ಟಾಚಾರದ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸದಂತೆ ತಡೆಯಲು ನನ್ನ ಮೇಲೆ ಒತ್ತಡವನ್ನು ಹೇರುವ ಕೆಲಸವನ್ನೂ ಭ್ರಷ್ಟರ ಕೂಟ ಮಾಡಿತ್ತು' ಎಂದರು.ಒಬ್ಬರ ಅಮಾನತು: ಉತ್ತರ ನೀಡಿದ ಉದಾಸಿ, ಮಾಗಡಿ ಉಪ ವಿಭಾಗಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಅವರ ಮನವಿ ಮೇರೆಗೆ ತನಿಖೆ ನಡೆಯುತ್ತಿದೆ. ಅಲ್ಲಿ ರೂ 238 ಕೋಟಿ ಮೊತ್ತದ  ಕಾಮಗಾರಿಗಳ ಗುತ್ತಿಗೆಯಲ್ಲಿ ಕಾನೂನು ಉಲ್ಲಂಘನೆ ನಡೆದಿರುವುದು ಗಮನಕ್ಕೆ ಬಂದಿದೆ. ಇದರಲ್ಲಿ ಶಾಮೀಲಾದ ಆರೋಪದ ಮೇಲೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗಂಗಾಧರಯ್ಯ ಎಂಬುವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.ಸಿದ್ದರಾಮಯ್ಯ ಸವಾಲು: ಹೆಚ್ಚಿನ ಅಕ್ರಮ ನಡೆದಿಲ್ಲ ಎಂದು ಸಮರ್ಥಿಸಿಕೊಳ್ಳಲು ಸಚಿವರು ಒಂದು ಹಂತದಲ್ಲಿ ಪ್ರಯತ್ನಿಸಿದರು. `ಉದಾಸಿ ಅವರೇ ನನ್ನ ಬಳಿ ದಾಖಲೆಗಳಿವೆ. ಲೋಕಾಯುಕ್ತ ಪೊಲೀಸರಿಂದ ತನಿಖೆ ಮಾಡಿಸಿ. ನಾನು ಮಾಡಿರುವ ಆರೋಪ ಸಾಬೀತಾಗದೇ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಿಮ್ಮ ಇಲಾಖೆಯಲ್ಲಿ ಯಾರಿಗೆ ಲಂಚ ನೀಡಲಾಗಿದೆ, ಯಾರ ಮೂಲಕ ಲಂಚ ನೀಡಲಾಗಿದೆ ಎಂಬ ಸಾಕ್ಷ್ಯವನ್ನೂ ನಾನೇ ಹೇಳಿಸುತ್ತೇನೆ' ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ವಿರೋಧ ಪಕ್ಷದ ನಾಯಕರು ಪಟ್ಟು ಹಿಡಿದರು.ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದ್ದು, ವರದಿ ಬಂದ ಬಳಿಕವೇ ಮುಂದಿನ ಕ್ರಮ ಎಂದು ಸಚಿವರು ಹೇಳಿದರು. `ಇಲಾಖೆಯಲ್ಲಿನ ಭ್ರಷ್ಟಾಚಾರ ತಡೆಯಲು ಆಗದೇ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ' ಎಂದು ಸಿದ್ದರಾಮಯ್ಯ ಆಗ್ರಹಿಸಿದರು.ಸಚಿವರು ಏನೇ ಸ್ಪಷ್ಟನೆ ನೀಡಲು ಪ್ರಯತ್ನಿಸಿದರೂ ವಿಪಕ್ಷ ನಾಯಕರು ಸಮಾಧಾನಗೊಳ್ಳಲಿಲ್ಲ. ಲೋಕಾಯುಕ್ತ ತನಿಖೆಯೇ ಆಗಬೇಕು ಎಂದು ಮತ್ತೆ ಮತ್ತೆ ಒತ್ತಾಯಿಸಿದರು. ಕೊನೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ನಡೆಸಿ ಅಥವಾ ಸದನ ಸಮಿತಿ ರಚಿಸಿ ಎಂದು ಪಟ್ಟು ಹಿಡಿದರು. ತೀರಾ ಕಸಿವಿಸಿಗೆ ಒಳಗಾದ ಸಚಿವರು ಯಾವ ಬೇಡಿಕೆಯನ್ನೂ ಒಪ್ಪಿಕೊಳ್ಳಲಾಗದೇ ತಿಣುಕಾಡಿದರು.ಅಂತಿಮವಾಗಿ ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಜೊತೆ ಚರ್ಚಿಸಿ, ಸದನ ಸಮಿತಿ ರಚನೆಗೆ ಒಪ್ಪಿಕೊಂಡರು.ಲಂಚ ಕೊಟ್ಟವರಿಗೆ ಅನುದಾನ

`ನಿಮ್ಮ ಇಲಾಖೆಯಲ್ಲಿ ಗೋವಿಂದರಾಜು ಎಂಬ ಆಂತರಿಕ ಹಣಕಾಸು ಸಲಹೆಗಾರ ಇದ್ದರಲ್ಲ, ಅವರು ದುಡ್ಡು ಕೊಟ್ಟವರಿಗೆಲ್ಲ ಅನುದಾನ ನೀಡುತ್ತಿದ್ದರು. ನಾವು ಇಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಬಜೆಟ್‌ಗೆ ಒಪ್ಪಿಗೆ ನೀಡೋದು. ಅವರು ಅಲ್ಲಿ ಲಂಚ ಕೊಟ್ಟವರಿಗೆ ಅನುದಾನ ನೀಡುವುದು. ಎಂಥಾ ಸರ್ಕಾರವೋ ಇದು' ಎಂದು ಸಿದ್ದರಾಮಯ್ಯ ಸಚಿವರನ್ನು ತಿವಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry