ಅಕ್ರಮ ಖರೀದಿ ಕೃಷಿ ಭೂಮಿ ಮುಟ್ಟುಗೋಲು

7

ಅಕ್ರಮ ಖರೀದಿ ಕೃಷಿ ಭೂಮಿ ಮುಟ್ಟುಗೋಲು

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭೂ ಸುಧಾರಣಾ ಕಾಯ್ದೆ ಉಲ್ಲಂಘಿಸಿ ಕೃಷಿ ಜಮೀನು ಖರೀದಿಸಿರುವುದು ದೃಢಪಟ್ಟಿದ್ದು, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಈ ಜಮೀನನ್ನು ವಶಕ್ಕೆ ತೆಗೆದುಕೊಳ್ಳುವಂತೆ ಮಡಿಕೇರಿಯ ಹಿರಿಯ ಉಪ ವಿಭಾಗಾಧಿಕಾರಿ ಡಾ.ಎಂ.ಆರ್. ರವಿ ಆಯಾ ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೆ ಆದೇಶ ನೀಡಿದ್ದಾರೆ.ಕರ್ನಾಟಕ ಭೂ ಸುಧಾರಣಾ ಕಾಯ್ದೆ 79ಎ ಹಾಗೂ 79ಬಿ ಉಲ್ಲಂಘಿಸಿ ಜಿಲ್ಲೆಯಲ್ಲಿ (2005-10ರಲ್ಲಿ) ಕೃಷಿ ಜಮೀನನ್ನು (ಒಟ್ಟು 93.89 ಎಕರೆ) ಅಕ್ರಮವಾಗಿ ಖರೀದಿಸಿರುವ 14 ಪ್ರಕರಣಗಳು ದೃಢಪಟ್ಟಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ 5, ವಿರಾಜಪೇಟೆಯಲ್ಲಿ 1 ಹಾಗೂ ಸೋಮವಾರಪೇಟೆಯಲ್ಲಿ 8 ಪ್ರಕರಣಗಳು ಸಾಬೀತಾಗಿವೆ.

ಭಾಗಿಯಾದವರು:  `ಪ್ರಜಾವಾಣಿ~ಗೆ ದೊರೆತಿರುವ ದಾಖಲೆಗಳ ಪ್ರಕಾರ, ಅಕ್ರಮವಾಗಿ ಕೃಷಿ ಜಮೀನು ಖರೀದಿಸಿರುವವರಲ್ಲಿ 7 ಜನ ಹೊರಜಿಲ್ಲೆಯವರು, 5 ಜನ ಹೊರ ರಾಜ್ಯದವರು ಹಾಗೂ ಇಬ್ಬರು ಸ್ಥಳೀಯರಾಗಿದ್ದಾರೆ.ಭರತ್ ಗಣಪತಿ, ಎ.ಕೆ. ವಿನೋದ್, ಟಿ.ಸಿ. ಹರಿ, ಎ.ಸಿ. ಜಗದೀಶ್-ಚಿತ್ರ ಜಗದೀಶ್, ಆರ್.ಶಿವಕುಮಾರ್, ಶಶಿಕುಮಾರ್, ಆರ್.ಜಯಶ್ರೀ, ಎಚ್.ಕೆ. ತಮ್ಮಯ್ಯ, ಕೆ.ಪಿ. ಮೊಹಮ್ಮದ್, ಕೆ.ಕುಂಞ ಕಣ್ಣನ್ ನಾಯರ್, ಎಫ್.ಕೃಷ್ಣ ಪ್ರಸಾದ್, ಪ್ರಮೋದ್ ರಂಜನ್, ಅರುಣ್ ಅಚ್ಚಪ್ಪ ಹಾಗೂ ಎಸ್.ಜಿ. ಅಜಿತ್ ಅಕ್ರಮವಾಗಿ ಕೃಷಿ ಜಮೀನು ಖರೀದಿಸಿದವರು. ಹಲವು ಬಾರಿ ಎಚ್ಚರಿಸಿದ್ದ ನಾಣಯ್ಯ: ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿರುವ ಕಾರಣ ಇಲ್ಲಿನ ಕೃಷಿ ಜಮೀನನ್ನು ಅಕ್ರಮವಾಗಿ ಖರೀದಿಸಿ, ಅಲ್ಲಿ ರೆಸಾರ್ಟ್, ಹೋಟೆಲ್ ನಿರ್ಮಿಸಲಾಗುತ್ತಿದೆ. ಇದು ಕೊಡಗಿನ ಸುಂದರ ಪರಿಸರಕ್ಕೆ ಮಾರಕವಾಗಿದೆ. ಇದನ್ನು ತಡೆಯಬೇಕೆಂದು ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಅವರು ಸರ್ಕಾರಕ್ಕೆ ಒತ್ತಾಯಿಸಿ ಕಳೆದ ಮಾರ್ಚ್‌ನಲ್ಲಿ ಪತ್ರ ಬರೆದಿದ್ದರು.ಇದರ ಅನ್ವಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ನಿರ್ದೇಶನದ ಮೇರೆಗೆ ಸರ್ಕಾರದ ಅಧೀನ ಕಾರ್ಯದರ್ಶಿ (ವಿಶೇಷ ಕೋಶ) ಹಾಗೂ ಮೈಸೂರಿನ ಹೆಚ್ಚುವರಿ ಪ್ರಾದೇಶಿಕ ಆಯುಕ್ತರು ತನಿಖೆ ಕೈಗೊಂಡು ವರದಿ ಒಪ್ಪಿಸಿದ್ದರು.ಜಿಲ್ಲೆಯಲ್ಲಿ ಈ ಐದು ವರ್ಷಗಳ ಅವಧಿಯಲ್ಲಿ ನಡೆದ ಕೃಷಿ ಜಮೀನು ಖರೀದಿ- ಮಾರಾಟದ ಸುಮಾರು 1833 ಪ್ರಕರಣಗಳನ್ನು ತನಿಖಾ ತಂಡವು ಪರಿಶೀಲಿಸಲಾಗಿ 26 ಪ್ರಕರಣಗಳಲ್ಲಿ ಕಾನೂನು ಉಲ್ಲಂಘನೆಯಾಗಿರುವುದು ದೃಢಪಟ್ಟಿತ್ತು. ನಂತರ ಸರ್ಕಾರವು ಈ ಪ್ರಕರಣದ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಉಪವಿಭಾಗಾಧಿಕಾರಿ ಅವರಿಗೆ ವಹಿಸಿಕೊಟ್ಟಿತ್ತು.ಏನಿದು ಕಾಯ್ದೆ: ಕೃಷಿ ಜಮೀನು ಶ್ರೀಮಂತರು ಹಾಗೂ ಬಂಡವಾಳಶಾಹಿಗಳಿಗೆ ಪರಭಾರೆಯಾಗಬಾರದು, ರೈತರ ಬಳಿಯೇ ಉಳಿಯಲಿ ಎನ್ನುವ ಸದುದ್ದೇಶದಿಂದ 1962ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಕರ್ನಾಟಕ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದಿದ್ದರು.ಈ ಕಾಯ್ದೆಯಡಿ (79ಎ) ಕೃಷಿ ಜಮೀನು ಖರೀದಿಸಲು ಕೃಷಿಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಅದರಂತೆ ಕಾಯ್ದೆಯ 79ಬಿ ಅಡಿ ಕೃಷಿಯೇತರರು ಹಾಗೂ ಕುಟುಂಬದ ಕೃಷಿಯೇತರ ಆದಾಯ ರೂ 2 ಲಕ್ಷಕ್ಕಿಂತ ಹೆಚ್ಚು ಇರುವವರು ಕೃಷಿ ಜಮೀನು ಖರೀದಿಸದಂತೆ ನಿರ್ಬಂಧ ಹೇರಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry