ಅಕ್ರಮ ಗಣಿಗಾರಿಕೆಗೆ ಪರಿಸರ ಮುಖವಾಡ

7

ಅಕ್ರಮ ಗಣಿಗಾರಿಕೆಗೆ ಪರಿಸರ ಮುಖವಾಡ

Published:
Updated:
ಅಕ್ರಮ ಗಣಿಗಾರಿಕೆಗೆ ಪರಿಸರ ಮುಖವಾಡ

ಹಬ್ಬಿಗೆಗುಡ್ಡ (ಚಿಕ್ಕನಾಯಕನಹಳ್ಳಿ): ಒಂದು ಕ್ಷಣ ಎಂಥವರೂ ಅವಕ್ಕಾಗಬೇಕು. ಮೊನ್ನೆಯವರೆಗೂ ಬೃಹತ್ ಯಂತ್ರಗಳು, ಹಿಟಾಚಿ, ಲಾರಿಗಳ ಗುಡುಗುಡು ಸದ್ದು ಕೇಳುತ್ತಿದ್ದ ಸ್ಥಳದಲ್ಲೆಗ ಶಾಂತತೆ ನೆಲೆಸಿದಂತೆ ಕಾಣುತ್ತದೆ. ಮನಸ್ಸೋ ಇಚ್ಛೆ ಮರ, ಗುಡ್ಡ, ಕಲ್ಲುಗಳನ್ನು ಕಡಿಯುತ್ತಿದ್ದವರ ಕೈಗಳು ಸಣ್ಣ, ಸಣ್ಣ ಗಿಡಗಳನ್ನು ನೆಟ್ಟಿವೆ.-ಇದು ಜಿಲ್ಲೆಯ ಗಣಿಗಾರಿಕೆ ಪ್ರದೇಶದಲ್ಲಿ ಸೋಮವಾರ ಕಂಡುಬಂದ ದೃಶ್ಯ. ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿರುವ ಕೇಂದ್ರಿಯ ಉನ್ನತಾಧಿಕಾರ ಸಮಿತಿ (ಸಿಇಸಿ) ಮಂಗಳವಾರ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಲಿದೆ ಎಂಬ ಹಿನ್ನೆಲೆಯಲ್ಲಿ ಈ ಎಲ್ಲ ಬದಲಾಣೆಗಳಾಗಿವೆ.ಗಣಿಗಾರಿಕೆ ನಡೆಸುವ ಜೊತೆಯಲ್ಲೇ ಪರಿಸರ ಕಾಪಾಡಿಕೊಳ್ಳಬೇಕಾದ ಹೊಣೆಹೊತ್ತಿದ್ದ ಕಂಪೆನಿಗಳು ಅಧಿಕಾರಿಗಳೊಟ್ಟಿಗೆ ಶಾಮೀಲಾಗಿ ಕಾಯ್ದೆ, ಕಾನೂನು ಉಲ್ಲಂಘಿಸಿವೆ. ಆದರೀಗ ಕಾನೂನಿನ ಕುಣಿಕೆ ಹತ್ತಿರ ಬಂದಿದ್ದರಿಂದ ಹೆಚ್ಚೆತ್ತುಕೊಂಡು ಪರಿಸರ ಉಳಿಸುವ `ಮುಖವಾಡ~ ಪ್ರದರ್ಶನಕ್ಕೆ ನಿಂತಿರುವುದು ಗಣಿಗಾರಿಕೆ ನಡೆದಿರುವ ಪ್ರದೇಶದಲ್ಲಿ ಒಂದು ಸುತ್ತು ಹಾಕಿದರೆ ಕಾಣಸಿಗುತ್ತದೆ.ತಿಪಟೂರು ತಾಲ್ಲೂಕಿನ ಹತ್ಯಾಳ್‌ಬೆಟ್ಟ, ರಜತಾದ್ರಿಪುರ, ಗುಬ್ಬಿ ತಾಲ್ಲೂಕಿನ ಮುಸ್‌ಕೊಂಡ್ಲಿ, ಶಿವಸಂದ್ರ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಬ್ಬಿಗೆಗುಡ್ಡ, ಸೊಪ್ಪಿನಗುಡ್ಡ, ರೆಡ್‌ಹಿಲ್ಸ್ ಬೆಟ್ಟಗಳಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಈ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವುದನ್ನು ಇಲಾಖೆಯೇ ಒಪ್ಪಿಕೊಂಡಿದೆ. ಗಣಿಗಾರಿಕೆಯಲ್ಲಿ ತೊಡಗಿರುವ 13 ಕಂಪೆನಿಗಳಲ್ಲಿ 9 ಕಂಪೆನಿಗಳು `ಅಕ್ರಮದ~ ಸುಳಿಗೆ ಸಿಲುಕಿವೆ ಎಂದು ಮೂಲಗಳು ತಿಳಿಸಿವೆ.ಜಿಲ್ಲೆಯ ಉನ್ನತ ಅಧಿಕಾರಿಯೊಬ್ಬರು ಶನಿವಾರವೇ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿದ್ದ ಎಲ್ಲ ಬೃಹತ್ ವಾಹನಗಳನ್ನು ಸ್ಥಳಾಂತರಿಸಿದ್ದಾರೆ. ಪ್ರತಿಯೊಂದು ಕಂಪೆನಿಯೂ ಸಾವಿರಸಾವಿರ ಸಂಖ್ಯೆಯಲ್ಲಿ ಗಿಡಗಳನ್ನು ವಾರ ಪೂರ್ತಿ ನೆಟ್ಟಿದ್ದು ಪರಿಸರ ರಕ್ಷಣೆಯಲ್ಲಿ ಕಾಳಜಿ ತೋರಿಸುವ ಎಲ್ಲ ರೀತಿಯ ಪ್ರಯತ್ನವನ್ನು ಮಾಡಿಕೊಂಡಿವೆ. ಈ ಮೂಲಕ ಅಕ್ರಮ ಗಣಿಗಾರಿಕೆ ಮುಚ್ಚಿ ಹಾಕುವ ಪ್ರಯತ್ನ ಸಾಗಿದೆ ಎಂಬುದು ಸ್ಥಳೀಯರ ಆರೋಪ.ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ 569 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಅಧಿಕಾರಿಗಳು ಪತ್ತೆ ಹಚ್ಚಿರುವಂತೆ 115 ಎಕರೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ. ಇಷ್ಟು ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆಸಿದ್ದಕ್ಕೆ ಪ್ರತಿಯಾಗಿ ಇಲಾಖೆ 9 ಗಣಿಗಾರಿಕೆ ಕಂಪೆನಿಗಳಿಗೆ ದಂಡ ವಿಧಿಸಿದೆ. ಸರ್ಕಾರ ನೀಡಿರುವ ಪ್ರದೇಶಕ್ಕಿಂತ ಅರಣ್ಯ ಪ್ರದೇಶದಲ್ಲಿ ಅದಿರು ಗುಣಮಟ್ಟ ಉತ್ಕೃಷ್ಕವಾಗಿರುವುದರಿಂದ ಅರಣ್ಯಕ್ಕೆ ಕನ್ನ ಹಾಕಲಾಗಿದೆ. ಅದಿರು ಬೇರ್ಪಡಿಸಿ ಉಳಿಯುವ ತ್ಯಾಜ್ಯ, ಮಣ್ಣನ್ನು ಎಲ್ಲೆಂದರಲ್ಲಿ, ನಿಯಮ ಮೀರಿ ಅರಣ್ಯ ಪ್ರದೇಶದಲ್ಲಿ, ಊರಿನ ಸಮೀಪಗಳಲ್ಲಿ ಸುರಿಯಲಾಗಿದೆ.ತನಿಖಾ ತಂಡದ ಭೇಟಿ ಹಿನ್ನೆಲೆಯಲ್ಲಿ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿದೆ. ಹಳ್ಳ-ಕೊಳ್ಳಗಳನ್ನು ಮುಚ್ಚುವ ಮೂಲಕ ಯಾವುದೇ ರೀತಿಯಲ್ಲೂ ಪರಿಸರ ಹಾನಿ ಆಗಿಲ್ಲ. ಪರಿಸರ ಹಾನಿ ಆಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಪ್ರತಿಬಿಂಬಿಸುವ ಪ್ರಯತ್ನ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry