ಬುಧವಾರ, ಅಕ್ಟೋಬರ್ 23, 2019
27 °C

ಅಕ್ರಮ ಗಣಿಗಾರಿಕೆ: ಅರಿವಿದ್ದರೂ ಕೃಷ್ಣ ಮಟ್ಟಹಾಕಲಿಲ್ಲ - ಹಿರೇಮಠ

Published:
Updated:

ಬೆಂಗಳೂರು: `ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಒಟ್ಟು 15 ಗಣಿ ಗುತ್ತಿಗೆಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಕಂಪೆನಿ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂದು ಕೇಂದ್ರ ಉಕ್ಕು ಸಚಿವಾಲಯ ರಾಜ್ಯ ಸರ್ಕಾರಕ್ಕೆ ಬರೆದ ಪತ್ರವನ್ನು ಅಲಕ್ಷಿಸಿದ ಕೃಷ್ಣ ಅವರು ಕಂಪೆನಿಯ ಅಕ್ರಮಗಳಿಗೆ ಕಡಿವಾಣ ಹಾಕಲಿಲ್ಲ~.- ಸಮಾಜ ಪರಿವರ್ತನ ಸಮುದಾಯದ ಎಸ್.ಆರ್. ಹಿರೇಮಠ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವಿರುದ್ಧ ಮಾಡಿದ ನೇರ ಆರೋಪ ಇದು.`ಕೃಷ್ಣ ಅವರ ಅವಧಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವಂತೆ ಮಾಡಲಾದ ಒಟ್ಟು 15 ಶಿಫಾರಸುಗಳ ಪೈಕಿ ಏಳಕ್ಕೆ ಕೇಂದ್ರದಿಂದ ಅನುಮತಿ ದೊರೆತಿದೆ. ಎರಡು ಗುತ್ತಿಗೆಗಳಿಗೆ ಅಂತಿಮ ಅಧಿಸೂಚನೆ ಪ್ರಕಟವಾಗಿಲ್ಲ. ಐದು ಗುತ್ತಿಗೆಗಳು ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದ್ದರೆ, ಒಂದು ಗುತ್ತಿಗೆ ಕೇಂದ್ರದಿಂದ ತಿರಸ್ಕೃತವಾಗಿದೆ~ ಎಂದು ಹಿರೇಮಠ ಅವರು ವಿವರಿಸಿದರು.ರಾಷ್ಟ್ರೀಯ ಗಣಿ ಅಭಿವೃದ್ಧಿ ನಿಗಮಕ್ಕೆ (ಎನ್‌ಎಂಡಿಸಿ) ಸೇರಿದ ಪ್ರದೇಶದಲ್ಲಿ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಕಂಪೆನಿಯು `ಗಂಭೀರ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದೆ~ ಎಂದು ಕೇಂದ್ರ ಉಕ್ಕು ಸಚಿವರು 2000ದ ಮಾರ್ಚ್ 13ರಂದು ಕೃಷ್ಣ ಅವರ ಗಮನಕ್ಕೆ ತಂದಿದ್ದರು.

 

ಕೃಷ್ಣ ಅವರು ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿದ್ದರೆ, ಡೆಕ್ಕನ್ ಮೈನಿಂಗ್ ಕಂಪೆನಿಯ ಗುತ್ತಿಗೆಯನ್ನು ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಬೇಕಿತ್ತು. ಆದರೆ ಕಂಪೆನಿಯ ಅಕ್ರಮಗಳು ಮುಂದುವರಿಯಲು ಅವಕಾಶ ಮಾಡಿಕೊಟ್ಟರು ಎಂದು ಆರೋಪಿಸಿದರು.ರಾಜ್ಯದಲ್ಲಿ ಕೃಷ್ಣ ಅವರೇ ಅಕ್ರಮ ಗಣಿಗಾರಿಕೆಗೆ ಅಡಿಪಾಯ ಹಾಕಿದವರು. ದಟ್ಟ ಅರಣ್ಯ ಇರುವ ಪ್ರದೇಶದಲ್ಲೂ ಅವರು ಏಳು ಗಣಿಗಾರಿಕೆಗೆ ಅವಕಾಶ ನೀಡಿದ್ದಾರೆ ಎಂದು ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆಗಾಗಿ ರಾಷ್ಟ್ರೀಯ ಸಮಿತಿ (ಎನ್‌ಸಿಪಿಎನ್‌ಆರ್) ಸದಸ್ಯ ವಿಷ್ಣು ಕಾಮತ್ ಆರೋಪಿಸಿದರು.ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ತಲಾ 40, ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ 20 ಗಣಿ ಗುತ್ತಿಗೆಗಳಿಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು. ಜನ ಸಂಗ್ರಾಮ ಪರಿಷತ್ತಿನ ಮುಖಂಡ ರಾಘವೇಂದ್ರ ಕುಷ್ಟಗಿ ಸುದ್ದಿಗೋಷ್ಠಿಯಲ್ಲಿ ಇದ್ದರು.ಕೃಷ್ಣ ಶಿಫಾರಸು ಮಾಡಿದ ಗುತ್ತಿಗೆಗಳು

ಬೆಂಗಳೂರು:
ಎಸ್.ಆರ್. ಹಿರೇಮಠ ಅವರು ಮಾಧ್ಯಮಗಳಿಗೆ ನೀಡಿರುವ ಮಾಹಿತಿಯ ಪ್ರಕಾರ ಎಸ್.ಎಂ. ಕೃಷ್ಣ ಅವಧಿಯಲ್ಲಿ ಶಿಫಾರಸು ಮಾಡಲಾದ ಗಣಿ ಗುತ್ತಿಗೆಗಳು ಇವು.ಗುತ್ತಿಗೆ ಪಡೆದ ಕಂಪೆನಿಗಳು: ಎಂ. ಶ್ರೀನಿವಾಸುಲು, ವಿಭೂತಿಗುಡ್ಡ ಮೈನ್ಸ್ ಪ್ರೈ.ಲಿ., ಕುಮಾರ ಗೌಡ ಅಂಡ್ ಸನ್ಸ್, ಅಂಬಿಕಾ ಘೋರ್ಪಡೆ, ಕುಮಾರ್ ಎಂಟರ್‌ಪ್ರೈಸಸ್, ಉಮಿಯಾ ಹೋಲ್ಡಿಂಗ್ಸ್ ಪ್ರೈ.ಲಿ., ಕೆ.ಆರ್. ಕೃಷ್ಣೇಗೌಡ.

ಅಂತಿಮ ಅಧಿಸೂಚನೆ ಬಾಕಿ ಇರುವ ಶಿಫಾರಸುಗಳು: ಕಾರಿಗನೂರು ಕಬ್ಬಿಣ ಮತ್ತು ಉಕ್ಕು ಪ್ರೈ.ಲಿ., ಮಿನರಲ್ ಸಿಂಡಿಕೇಟ್.ಕೇಂದ್ರ ಸರ್ಕಾರದಲ್ಲಿ ಬಾಕಿ ಇರುವ ಶಿಫಾರಸುಗಳು: ಸಾಲಗಾಂವಕರ್ ಮೈನಿಂಗ್ ಇಂಡಸ್ಟ್ರೀಸ್ ಪ್ರೈ.ಲಿ. (ಎರಡು ಶಿಫಾರಸುಗಳು), ಎಂಎಸ್‌ಪಿಎಲ್ ಲಿಮಿಟೆಡ್, ಎಚ್.ಜಿ. ರಂಗನಗೌಡ ಲಿ., ಎಸ್.ಕೆ. ಸಾರವಾಗಿ ಅಂಡ್ ಕಂಪೆನಿ. ಪ್ರವೀಣ್‌ಕುಮಾರ್ ನಿಕ್ಕಂ ಗಣಿ ಕಂಪೆನಿಗೆ ಗುತ್ತಿಗೆ ನೀಡುವ ಶಿಫಾರಸು ಕೇಂದ್ರ ಸರ್ಕಾರದಿಂದ ತಿರಸ್ಕೃತಗೊಂಡಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)