ಅಕ್ರಮ ಗಣಿಗಾರಿಕೆ: ಇನ್ನೊಂದು ತನಿಖಾ ತಂಡ ರಚನೆ

7

ಅಕ್ರಮ ಗಣಿಗಾರಿಕೆ: ಇನ್ನೊಂದು ತನಿಖಾ ತಂಡ ರಚನೆ

Published:
Updated:

ಬಳ್ಳಾರಿ: ರಾಜ್ಯ ಸರ್ಕಾರವು ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ಸಲ್ಲಿಸಿದ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಲಹೆ ನೀಡಲು ರಚಿಸಿದ್ದ ಉನ್ನತ ಮಟ್ಟದ ಸಮಿತಿಯ ಶಿಫಾರಸಿನಂತೆ ಅಕ್ರಮ ಗಣಿಗಾರಿಕೆ ಬಗ್ಗೆ ಮತ್ತೆ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದೆ.

ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತರು ಸಲ್ಲಿಸಿದ್ದ ವರದಿಯ ಶಿಫಾರಸುಗಳ ಅನುಷ್ಠಾನ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಲಹೆ ನೀಡುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ರಚಿಸಿದ್ದ ಉನ್ನತ ಮಟ್ಟದ ಸಮಿತಿಯು ಅ.24, 2011ರಂದು ಅಂತಿಮ ವರದಿ ಸಲ್ಲಿಸಿ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಗೃಹ, ವಾಣಿಜ್ಯ ತೆರಿಗೆ ಮತ್ತಿತರ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳನ್ನು ಒಳಗೊಂಡಿರುವ `ವಿಶೇಷ ತನಿಖಾ ತಂಡ~ ರಚಿಸುವಂತೆ ಶಿಫಾರಸು ಮಾಡಿತ್ತು.

ಈ ಹಿನ್ನೆಲೆಯಲ್ಲಿ 2012ರ ಜನವರಿ 9ರಂದು ಈ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಿರುವ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಮೂರು ತಿಂಗಳ ಅವಧಿಯಲ್ಲಿ ಸಮಗ್ರ ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆಯೂ ಸಮಿತಿಗೆ ಸರ್ಕಾರ ಸೂಚಿಸಿದೆ.

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ದೀಪಕ್ ಶರ್ಮಾ ತಂಡದ ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಐಪಿಎಸ್ ಅಧಿಕಾರಿ (ಐಜಿಪಿ, ಅಗ್ನಿಶಾಮಕ ದಳ) ಶಿವಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ  ಎಚ್.ಆರ್. ಶ್ರೀನಿವಾಸ್, ಬಳ್ಳಾರಿ ಜಿಲ್ಲಾಧಿಕಾರಿ ಎ.ಎ.ಬಿಸ್ವಾಸ್, ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಜೆ.ರಾಮಲಿಂಗೇಗೌಡ, ಸಾರಿಗೆ ಇಲಾಖೆಯ ಜಂಟಿ ಆಯುಕ್ತ (ಆಡಳಿತ) ರಿಚರ್ಡ್ ವಿ. ಡಿಸೋಜಾ ತಂಡದ ಸದಸ್ಯರಾಗಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೆಚ್ಚುವರಿ ನಿರ್ದೇಶಕ ಡಿ.ಆರ್. ವೀರಣ್ಣ ಸಂಚಾಲಕರಾಗಿದ್ದಾರೆ.

ನಿಯಮ ಬಾಹಿರ ಗಣಿಗಾರಿಕೆ, ಅಕ್ರಮವಾಗಿ ಅದಿರು ತೆಗೆದಿರುವುದು, ಸ್ಥಳೀಯ ಬಳಕೆಗೆ ಹಾಗೂ ರಫ್ತು ಉದ್ದೇಶದಿಂದ ಅದಿರು ಸಾಗಣೆ ಮಾಡಿರುವುದು, ತೆರಿಗೆ ಉಳಿಸಲೆಂದೇ ಬೇನಾಮಿ ಸಂಸ್ಥೆಗಳನ್ನು ಹುಟ್ಟು ಹಾಕಿರುವುದು, ತೆರಿಗೆ ತಪ್ಪಿಸಿಕೊಳ್ಳಲು ಅಕ್ರಮವಾಗಿ ಹಣ ಹೂಡಿರುವುದೂ ಸೇರಿದಂತೆ ವಿವಿಧ ಅಕ್ರಮಗಳ ಕುರಿತು ತನಿಖೆ ನಡೆಸಿ ಏಪ್ರಿಲ್ 9ರ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ತಂಡ ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಸಭೆ ಸೇರಿ ಚರ್ಚೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ನೇತೃತ್ವದ ತಂಡ ಕೈಗೊಂಡಿದ್ದ ತನಿಖೆಯ ಮಾದರಿಯಲ್ಲೇ ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಗೂ ಸಂಬಂಧಿಸಿದ ಇಲಾಖೆಗಳಿಂದ ಇದೀಗ ವಿಶೇಷ ತನಿಖಾ ತಂಡ ಎಲ್ಲ ವಿವರಗಳನ್ನೂ ಕಲೆ ಹಾಕಲು ಮುಂದಾಗಿದೆ.

ತಂಡ ಈಗಾಗಲೇ ಕೆಲವು ಮಹತ್ವದ ಮಾಹಿತಿ ಕಲೆಹಾಕಿದ್ದು ಅತ್ಯಂತ ಗೋಪ್ಯವಾಗಿಯೇ ತನಿಖೆ ಮುಂದುವರಿಸಿದೆ.

ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಮಾಲೀಕತ್ವದ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ ಹಾಗೂ ಇತರ ಗಣಿ ಕಂಪೆನಿಗಳು ನಡೆಸಿವೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತಂತೆ ಜಿಲ್ಲೆಯಲ್ಲಿ ಸದ್ಯ ಸಿಬಿಐ ನಡೆಸುತ್ತಿರುವ ತನಿಖೆ ಚುರುಕುಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry