ಅಕ್ರಮ ಗಣಿಗಾರಿಕೆ: ಎಸ್.ಆರ್.ಹಿರೇಮಠ ಆರೋಪ

7

ಅಕ್ರಮ ಗಣಿಗಾರಿಕೆ: ಎಸ್.ಆರ್.ಹಿರೇಮಠ ಆರೋಪ

Published:
Updated:

ಹುಬ್ಬಳ್ಳಿ: ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆಯಲ್ಲಿ ಐವರು ಐಎಎಸ್ ಹಾಗೂ ಒಬ್ಬ ಐಪಿಎಸ್ ಅಧಿಕಾರಿ ನೇರವಾಗಿ ಶಾಮೀಲಾಗಿದ್ದು, ಅವರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ದಾಖಲೆ ಸಲ್ಲಿಸುವುದಾಗಿ ಧಾರವಾಡದ ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ಹೆಸರನ್ನು ಸೂಕ್ತ ಸಂದರ್ಭದಲ್ಲಿ ಬಹಿರಂಗಪಡಿಸುವುದಾಗಿ ತಿಳಿಸಿದರು.`ನಾವು ಅಧಿಕಾರಸ್ಥರು, ನಮ್ಮನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ~ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಇದ್ದಲ್ಲಿ  ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗಣಿ ಧಣಿ ಗಾಲಿ ಜನಾರ್ದನರೆಡ್ಡಿ ಅವರ ಪರಿಸ್ಥಿತಿ  ನೋಡಿ ಕಲಿಯಲಿ~ ಎಂದು ಹೇಳಿದರು.ದೀಪ ಆರುವ ಮೊದಲು ಜೋರಾಗಿ ಉರಿಯುವಂತೆ ಡಿ.ಕೆ.ಶಿವಕುಮಾರ್ ಹತಾಶರಾಗಿ ತಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ತಮ್ಮನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಏಜೆಂಟ್ ಎಂದು ಕರೆದಿರುವ ಶಿವಕುಮಾರ್ ಆ ಬಗ್ಗೆ ಯಾವುದೇ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.ರಾಜ್ಯದಲ್ಲಿ ಗಣಿ ಅಕ್ರಮ ಹಾಗೂ ಭೂ ಮಾಫಿಯಾ ವಿರುದ್ಧ ತಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಯಾರದ್ದೇ ಏಜೆಂಟ್ ಆಗುವ ಪ್ರಶ್ನೆಯೇ ಇಲ್ಲ. ಕುಮಾರಸ್ವಾಮಿ ಅವಧಿಯಲ್ಲಿ ನಡೆದ ಅಕ್ರಮಗಳ ವಿರುದ್ಧವೂ ತನಿಖೆಗೆ ಆಗ್ರಹಿಸಿ ತಾವು ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿರುವುದಾಗಿ ಹೇಳಿದರು.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಆದಿಚುಂಚನಗಿರಿ ಸ್ವಾಮೀಜಿ ಅವರ ಹೆಸರು ಮುಂದೆ ಮಾಡಿಕೊಂಡು ತಮ್ಮ ಮೇಲೆ ಕನಕಪುರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯಿಂದ ದಾಖಲಾಗಿರುವ  ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಂತೆ ಡಿ.ಕೆ.ಶಿವಕುಮಾರ್ ಬರೆದ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಎಸ್.ಆರ್.ಹಿರೇಮಠ, ಯಾವುದೇ ಬೆದರಿಕೆ, ಆಸೆ-ಆಮಿಷಗಳಿಗೆ ಬಲಿಯಾಗದೆ ತಪ್ಪು ಮಾಡಿದವರನ್ನು ಕಾನೂನಿನ ಕಟಕಟೆಗೆ ತರುವುದಾಗಿ ಹೇಳಿದರು.ಎಸ್.ಎಂ.ಕೃಷ್ಣ, ಧರ್ಮ ಸಿಂಗ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಗೆ ನೀಡಿದ ಕುಮ್ಮಕ್ಕಿನ ಕುರಿತು ಸುಪ್ರೀಂ ಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸಲಾಗುತ್ತಿದೆ. 2000ನೇ ಇಸವಿಯಿಂದ 2010ರ ವರೆಗಿನ ಅವಧಿಯನ್ನು ತನಿಖೆಯ ವ್ಯಾಪ್ತಿಯೊಳಗೆ ಸೇರಿಸುವಂತೆ ಮನವಿ ಮಾಡುವುದಾಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry