ಶನಿವಾರ, ಮಾರ್ಚ್ 6, 2021
32 °C

ಅಕ್ರಮ ಗಣಿಗಾರಿಕೆ: ಐಎಫ್‌ಎಸ್ ಅಧಿಕಾರಿ ಮುತ್ತಯ್ಯ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ರಮ ಗಣಿಗಾರಿಕೆ: ಐಎಫ್‌ಎಸ್ ಅಧಿಕಾರಿ ಮುತ್ತಯ್ಯ ಬಂಧನ

ಬೆಂಗಳೂರು: ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ಬಳ್ಳಾರಿಯಲ್ಲಿ ನಡೆಸಿದ ಅಕ್ರಮ ಗಣಿಗಾರಿಕೆಗೆ ಸಹಕರಿಸಿದ ಆರೋಪದ ಮೇಲೆ ಐಎಫ್‌ಎಸ್ ಅಧಿಕಾರಿ ಎಸ್.ಮುತ್ತಯ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹೊಸಪೇಟೆಯ ಹಿಂದಿನ ಉಪನಿರ್ದೇಶಕ ಎಸ್.ಪಿ.ರಾಜು ಅವರನ್ನು ಸೋಮವಾರ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.ಎಎಂಸಿ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗಾಗಿ ಇಬ್ಬರೂ ಆರೋಪಿಗಳನ್ನು ಸಿಬಿಐ ಕಚೇರಿಗೆ ವಿಚಾರಣೆಗೆ ಕರೆತಂದಿದ್ದ ಸಿಬಿಐ ಪೊಲೀಸರು, ಸೋಮವಾರ ಬೆಳಿಗ್ಗೆ ಬಂಧಿಸಿದರು. ನಂತರ ಮುತ್ತಯ್ಯ ಮತ್ತು ರಾಜು ಅವರನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎಂ.ಅಂಗಡಿ ಅವರ ಎದುರು ಹಾಜರುಪಡಿಸಲಾಯಿತು. ತನಿಖಾ ತಂಡದ ಮನವಿಯಂತೆ ಆರೋಪಿಗಳನ್ನು ಮೇ 10ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು.ಇಬ್ಬರೂ ಆರೋಪಿಗಳನ್ನು ಗಂಗಾನಗರದ ಸಿಬಿಐ ಕಚೇರಿಯಲ್ಲಿ ಇರಿಸಿದ್ದು, ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಇಬ್ಬರನ್ನೂ ಬಳ್ಳಾರಿ, ಹೊಸಪೇಟೆ ಮತ್ತು ಸಂಡೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.`ತಾಳಕ್ಕೆ ತಕ್ಕಂತೆ ಕುಣಿದವರು~:  `ಇಬ್ಬರೂ ಅಧಿಕಾರಿಗಳು ಜನಾರ್ದನ ರೆಡ್ಡಿ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದರು~ ಎಂಬ ಆರೋಪ ದೀರ್ಘ ಕಾಲದಿಂದ ಕೇಳಿಬರುತ್ತಿತ್ತು. ಮುತ್ತಯ್ಯ ಅವರನ್ನು ಬಳ್ಳಾರಿಯಲ್ಲಿ ಉಳಿಸಿಕೊಳ್ಳುವುದಕ್ಕಾಗಿಯೇ ಜನಾರ್ದನ ರೆಡ್ಡಿ ಹಲವು ಬಾರಿ ಸರ್ಕಾರದ ವಿರುದ್ಧವೇ ತೊಡೆ ತಟ್ಟಿದ್ದರು.

ಒಮ್ಮೆ ವರ್ಗವಾದ ಕೆಲವೇ ದಿನಗಳಲ್ಲಿ ಅವರನ್ನು ಮರುನಿಯೋಜನೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಎಲ್ಲ ಬೆಳವಣಿಗೆಗಳ ಹಿಂದಿನ ರಹಸ್ಯ ಸಿಬಿಐ ತನಿಖೆಯಲ್ಲಿ ಬಹಿರಂಗವಾಗತೊಡಗಿದೆ.ಅರಣ್ಯ ಅಭಿವೃದ್ಧಿ ಶುಲ್ಕ ಪಡೆಯದೇ ಎಎಂಸಿ ಗಣಿಯಿಂದ ಅದಿರು ಸಾಗಿಸಲು ಅವಕಾಶ ನೀಡಿದ ಆರೋಪ ಮುತ್ತಯ್ಯ ಮೇಲಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಎರಡೇ ದಿನಗಳಲ್ಲಿ 80,000 ಟನ್ ಅದಿರು ಸಾಗಣೆಗೆ ಪರವಾನಗಿ ನೀಡಿರುವುದು, ಎಎಂಸಿ ಗಣಿ ಗುತ್ತಿಗೆ ಅವಧಿ ಮುಗಿದ ಬಳಿಕವೂ ವಲಯ ಅರಣ್ಯಾಧಿಕಾರಿಗಳ ಮೇಲೆ ಒತ್ತಡ ಹೇರಿ, ಬೆದರಿಸಿ ಅದಿರು ಸಾಗಣೆ ಪರವಾನಗಿಗಳಿಗೆ ಸಹಿ ಹಾಕಿಸಿದ ಆರೋಪವೂ ಸಿಬಿಐ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿದೆ.ಜನಾರ್ದನ ರೆಡ್ಡಿ ಅವರ ಸಹಚರರು ನಡೆಸುತ್ತಿದ್ದ ಈಗಲ್ ಟ್ರೇಡರ್ಸ್ ಎಂಬ ಕಂಪೆನಿ ಅಕ್ರಮವಾಗಿ ಸಾಗಿಸಿದ್ದ ಅದಿರನ್ನು ಸಕ್ರಮ ಎಂದು ಬಿಂಬಿಸಲು ಅನುಕೂಲವಾಗುವಂತೆ ದಾಖಲೆ ಸೃಷ್ಟಿಸಲು ಯತ್ನಿಸಿದ ಆರೋಪವೂ ಮುತ್ತಯ್ಯ ಮೇಲಿದೆ. ಎಎಂಸಿ ಗಣಿ ಗುತ್ತಿಗೆ ಅವಧಿ ಮುಗಿದ ಬಳಿಕವೂ ಅದಿರು ಸಾಗಣೆಗೆ 900 ಪರವಾನಗಿಗಳನ್ನು ವಿತರಿಸಿದ್ದ ಎಂಬ ಆರೋಪವೂ ಇದೆ.ಯಾವುದೇ ಮಾನದಂಡಗಳನ್ನು ಅನುಸರಿಸದೇ ಅದಿರು ಸಾಗಣೆಗೆ ಅನುಮತಿ ನೀಡಿರುವುದು, ಒಂದು ಪರವಾನಗಿಯನ್ನು ಬಳಸಿ ಹತ್ತಾರು ಬಾರಿ ಅದಿರು ಸಾಗಿಸುತ್ತಿದ್ದರೂ ಕ್ರಮ ಕೈಗೊಳ್ಳದಿರುವುದು, ಅನುಮತಿ ಇಲ್ಲದೇ ಅದಿರು ಸಾಗಿಸುತ್ತಿರುವುದು ಗಮನಕ್ಕೆ ಬಂದರೂ ಕ್ರಮ ಕೈಗೊಳ್ಳದಿರುವ ಆರೋಪವನ್ನು ರಾಜು ಎದುರಿಸುತ್ತಿದ್ದಾರೆ.ಎಎಂಸಿ ಲಾರಿಗಳಿಗೆ ಮಿತಿಮೀರಿದ ಭಾರದ ಅದಿರು ತುಂಬಿ ಜಿಂದಾಲ್ ಉಕ್ಕು ಕಾರ್ಖಾನೆಗೆ ಸಾಗಿಸುತ್ತಿದ್ದುದು ಗೊತ್ತಿದ್ದರೂ ರಾಜು ಕ್ರಮ ಜರುಗಿಸಿರಲಿಲ್ಲ ಎಂಬ ಆರೋಪ ಎಫ್‌ಐಆರ್‌ನಲ್ಲಿದೆ.ಮುತ್ತಯ್ಯ ಮತ್ತು ರಾಜು ವಿರುದ್ಧ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದ ಬಹುತೇಕ ಆರೋಪಗಳು ದೃಢಪಟ್ಟಿವೆ. ಇಬ್ಬರೂ ಜನಾರ್ದನ ರೆಡ್ಡಿ ಮತ್ತು ಸಹಚರರು ನಡೆಸಿದ ಅವ್ಯವಹಾರಗಳಲ್ಲಿ ಸಂಪೂರ್ಣವಾಗಿ ಶಾಮೀಲಾಗಿರುವುದು ಖಚಿತವಾಗಿದೆ.

 

ಈ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು. ಸೋಮವಾರ ಇಬ್ಬರನ್ನೂ ಬಂಧಿಸಿದ್ದು, ಮೇ 10ರವರೆಗೂ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಸಿಬಿಐ ಮೂಲಗಳು ತಿಳಿಸಿವೆ.ತನಿಖೆಯ ಹಾದಿ: ಧಾರವಾಡದ ಸಮಾಜ ಪರಿವರ್ತನಾ ಸಮುದಾಯ (ಎಸ್‌ಪಿಎಸ್) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಎಎಂಸಿ ನಡೆಸಿರುವ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು.

 

ಕಳೆದ ಅಕ್ಟೋಬರ್ 1ರಂದು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದ ಸಿಬಿಐ, ಭ್ರಷ್ಟಾಚಾರ ನಿಯಂತ್ರಣ ವಿಭಾಗದ ಬೆಂಗಳೂರು ಘಟಕದ ಅಧಿಕಾರಿಗಳು, ಪ್ರಕರಣದ ತನಿಖೆ ಆರಂಭಿಸಿದ್ದರು. ಅ. 3ರಂದು ಮುತ್ತಯ್ಯ ಕಚೇರಿ, ನಿವಾಸ ಸೇರಿದಂತೆ 15 ಕಡೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.