`ಅಕ್ರಮ ಗಣಿಗಾರಿಕೆ ತನಿಖೆ: ಕೋರ್ಟ್ ಆದೇಶ ಪಾಲಿಸುವಲ್ಲಿ ಸಿಇಸಿ ಲೋಪ'

ಸೋಮವಾರ, ಜೂಲೈ 22, 2019
27 °C

`ಅಕ್ರಮ ಗಣಿಗಾರಿಕೆ ತನಿಖೆ: ಕೋರ್ಟ್ ಆದೇಶ ಪಾಲಿಸುವಲ್ಲಿ ಸಿಇಸಿ ಲೋಪ'

Published:
Updated:

ಬೆಂಗಳೂರು: ಅಕ್ರಮ ಗಣಿಗಾರಿಕೆಯ ತನಿಖೆಗೆ ಸಂಬಂಧಿಸಿದ ನ್ಯಾಯಾಲಯದ ಆದೇಶ ಪಾಲಿಸುವಲ್ಲಿ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಲೋಪ ಎಸಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಗಣಿ ಸಂಪತ್ತನ್ನು ಅಕ್ರಮವಾಗಿ ಲೂಟಿ ಮಾಡಿರುವವರ ವಿರುದ್ಧ ಒಂದೂವರೆ ತಿಂಗಳಲ್ಲಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಕಳೆದ ಫೆಬ್ರುವರಿ 1ರಂದು ಸಿಇಸಿಗೆ ಆದೇಶಿಸಿತ್ತು. ಆದರೆ ಕಾಲಾವಧಿ ಮುಗಿದಿದ್ದರೂ ಸಿಇಸಿ ವರದಿ ನೀಡಿಲ್ಲ.

ಈ ಕುರಿತು ಸಮಾಜ ಪರಿವರ್ತನಾ ಸಮುದಾಯದಿಂದ ಸಿಇಸಿಗೆ ಮೂರು ಬಾರಿ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದಕಾರಣ ಸುಪ್ರೀಂ ಕೋರ್ಟ್‌ನಲ್ಲಿ ಕಳೆದ ಜುಲೈ 2ರಂದು ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.2009ರಲ್ಲಿ ಸಿಇಸಿ ನೀಡಿದ್ದ ತನ್ನ ಪ್ರಥಮ ವರದಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವ ಕಂಪನಿಗಳಿಗೆ ಮಾರುಕಟ್ಟೆ ಮೌಲ್ಯದ ಐದು ಪಟ್ಟು ದಂಡ ವಿಧಿಸಬೇಕು ಎಂದು ಹೇಳಿತ್ತು. ಆದರೆ ನಂತರ ನೀಡಿದ ವರದಿಯಲ್ಲಿ `ಸಿ' ಶ್ರೇಣಿಯ ಕಂಪನಿಗಳ ಗಣಿ ಗುತ್ತಿಗೆ ರದ್ದುಪಡಿಸಬೇಕು, `ಎ' ಶ್ರೇಣಿಯ ಕಂಪನಿಗಳಿಗೆ 1 ಕೋಟಿ ರೂಪಾಯಿ ಮತ್ತು `ಬಿ' ಶ್ರೇಣಿಯ ಕಂಪನಿಗಳಿಗೆ 5 ಕೋಟಿ ರೂಪಾಯಿ ದಂಡ ವಸೂಲಿ ಮಾಡುವಂತೆ ಸೂಚಿಸಿರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು.ಇದನ್ನು ಸಮಾಜ ಪರಿವರ್ತನಾ ಸಮುದಾಯ ವಿರೋಧಿಸಿದ್ದರಿಂದ ಸುಪ್ರೀಂಕೋರ್ಟ್ 2012ರ ಸೆಪ್ಟೆಂಬರ್‌ನಲ್ಲಿ ಅಕ್ರಮ ಗಣಿಗಾರಿಕೆಯ ಪ್ರಮಾಣ ಆಧರಿಸಿ ದಂಡ ವಸೂಲಿ ಮಾಡುವಂತೆ ಆದೇಶಿಸಿತ್ತು. ಆದರೆ ಈ ನಿರ್ದೇಶನವನ್ನೂ ಸಿಇಸಿ ಪಾಲಿಸಿಲ್ಲ ಎಂದು ಆರೋಪಿಸಿದರು.ಅರ್ಜಿಯಲ್ಲಿ ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ವಿ.ಸೋಮಣ್ಣ, ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಸಹೋದರರಾದ  ಲತಾ ಗಣಿ ಮಾಲೀಕ ಡಾ.ಎಚ್.ಡಿ.ರಮೇಶ್, ಉದ್ಯಮಿ ದೀಪ್‌ಚಂದ್ ಕಿಶನ್‌ಲಾಲ್ ಅವರು ನಡೆಸಿರುವ ಅಕ್ರಮಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ ಏಂದರು ತಿಳಿಸಿದರು.ಅಕ್ರಮ ಗಣಿ ಚಟುವಟಿಕೆಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿ ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳುವ ಬಗ್ಗೆ ಹಾಗೂ ಪರಿಸರಕ್ಕೆ ಹಾನಿ ಉಂಟುಮಾಡಿರುವುದನ್ನು ಸರಿಪಡಿಸುವ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ನಿಷೇಧಿಸುವುದರ ಕುರಿತಾಗಿಯೂ ನ್ಯಾಯಾಲಯದ ಗಮನ ಸೆಳೆಯಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry