ಅಕ್ರಮ ಗಣಿಗಾರಿಕೆ: ನಿಲುವು ಬದಲು
ಬೆಂಗಳೂರು: ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಧರ್ಮಸಿಂಗ್ ಮತ್ತು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ, ಸುಪ್ರೀಂಕೋರ್ಟ್ನ ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ) ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿಲುವು ಬದಲಿಸಿದೆ.
`ಮೂವರೂ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನಡೆದ ಅವ್ಯವಹಾರಗಳಿಂದ ಮೈಸೂರು ಮಿನರಲ್ಸ್ ಲಿಮಿಟೆಡ್ 714 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ~ ಎಂಬುದಾಗಿ ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸರ್ಕಾರ ಬುಧವಾರ ಸಿಇಸಿಗೆ ಸಲ್ಲಿಸಿರುವ ಪೂರಕ ಪ್ರಮಾಣಪತ್ರದಲ್ಲಿ ತಿಳಿಸಿದೆ. ಆದರೆ, ಮೂವರ ವಿರುದ್ಧವೂ ಸಿಬಿಐ ತನಿಖೆಗೆ ಆದೇಶಿಸಬೇಕೆಂಬ ಅರ್ಜಿದಾರರ ಕೋರಿಕೆ ಕುರಿತು ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿದೆ.
ಅಬ್ರಹಾಂ ಅವರ ಅರ್ಜಿಯಲ್ಲಿರುವ ಅಂಶಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ಸಿಇಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಮೇ ತಿಂಗಳಲ್ಲಿ ಸಮಿತಿಗೆ ಪ್ರತಿಕ್ರಿಯೆ ಸಲ್ಲಿಸಿದ್ದ ಸರ್ಕಾರ, ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಸಿಬಿಐ ತನಿಖೆಯ ಅಗತ್ಯವಿಲ್ಲ ಎಂಬ ಧಾಟಿಯಲ್ಲಿ ಉತ್ತರಿಸಿತ್ತು.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಅವಧಿಯಲ್ಲಿ 11,620 ಚದರ ಕಿ.ಮೀ. ಪ್ರದೇಶವನ್ನು ಗಣಿಗಾರಿಕೆಗೆ ಮುಕ್ತಗೊಳಿಸಿದ ತೀರ್ಮಾನ ಅಕ್ರಮ ಎಂಬ ಆರೋಪ ಅರ್ಜಿಯಲ್ಲಿತ್ತು. ಕೇಂದ್ರ ಸರ್ಕಾರದ `ಗಣಿ ನೀತಿ~ ಆಧಾರದಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿತ್ತು ಎಂದು ಮೊದಲ ಪ್ರಮಾಣಪತ್ರದಲ್ಲಿ ಸರ್ಕಾರ ಸಮರ್ಥಿಸಿಕೊಂಡಿತ್ತು. ಕೃಷ್ಣ ಮತ್ತು ಕುಮಾರಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಯಾವುದೇ ಶಿಫಾರಸು ಲೋಕಾಯುಕ್ತ ವರದಿಯಲ್ಲಿ ಇಲ್ಲ ಎಂದೂ ಹೇಳಿತ್ತು.
ಈ ಉತ್ತರ ಆಡಳಿತಾರೂಢ ಬಿಜೆಪಿಯಲ್ಲಿ ಆಂತರಿಕ ಕಲಹಕ್ಕೆ ಕಾರಣವಾಗಿತ್ತು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದ ಸಚಿವರು, ಶಾಸಕರು, ಸಿಇಸಿಗೆ ಪರಿಷ್ಕೃತ ಉತ್ತರ ಸಲ್ಲಿಸುವಂತೆ ಒತ್ತಡ ಹೇರಿದ್ದರು. ಮುಖ್ಯಮಂತ್ರಿಯವರ ವಿರುದ್ಧ ಬಿಜೆಪಿ ವರಿಷ್ಠರಿಗೂ ದೂರು ನೀಡಿದ್ದರು.
ಹೊಸ ಉತ್ತರದಲ್ಲಿ ಏನಿದೆ?: ಬುಧವಾರ ಸಲ್ಲಿಸಿರುವ 11 ಪುಟಗಳ ಪ್ರಮಾಣಪತ್ರದಲ್ಲಿ ಹಿಂದಿನ ವಾದಕ್ಕಿಂತ ಭಿನ್ನವಾದ ಪ್ರತಿಕ್ರಿಯೆಯನ್ನು ಸರ್ಕಾರ ನೀಡಿದೆ. ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಿದ್ದ ಅಭಿಪ್ರಾಯ, ಪೂರಕ ದಾಖಲೆಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿಯಲ್ಲಿದ್ದ ದಾಖಲೆಗಳ ವಿವರವನ್ನೂ ಒದಗಿಸಲಾಗಿದೆ.
`ಕೃಷ್ಣ ಅವರ ಅವಧಿಯಲ್ಲಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಹೆಚ್ಚಲು ಪೂರಕ ವಾತಾವರಣ ನಿರ್ಮಾಣವಾಯಿತು.
ಮೀಸಲು ಪ್ರದೇಶವನ್ನು ಗಣಿಗಾರಿಕೆಗೆ ಮುಕ್ತಗೊಳಿಸುವ ಸಂಬಂಧ 1995, 1997 ಮತ್ತು 2000ನೇ ಸಾಲಿನಲ್ಲಿ ನಡೆದ ಸಭೆಗಳೇ ಇದಕ್ಕೆ ಬುನಾದಿ. ಈ ಸಭೆಗಳ ಮುಂದುವರಿದ ಭಾಗವಾಗಿ 2003ರಲ್ಲಿ 11,620 ಚದರ ಕಿ.ಮೀ. ಪ್ರದೇಶವನ್ನು ಗಣಿಗಾರಿಕೆಗೆ ಮುಕ್ತಗೊಳಿಸಲಾಯಿತು. ದಟ್ಟ ಅರಣ್ಯದಲ್ಲೂ ಗಣಿಗಾರಿಕೆಗೆ ಅನುಮತಿ ನೀಡಲಾಗಿತ್ತು~ ಎಂದು ಅಬ್ರಹಾಂ ದೂರಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸರ್ಕಾರ, ತಮ್ಮ ವರದಿಯಲ್ಲಿ ಲೋಕಾಯುಕ್ತರು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಉಲ್ಲೇಖಿಸಿದೆ. `ಗಣಿಗಾರಿಕೆಗೆ ಮುಕ್ತಗೊಳಿಸಿದ 11,620 ಚದರ ಕಿ.ಮೀ. ಮತ್ತು ಗುತ್ತಿಗೆದಾರರು ವಾಪಸು ನೀಡಿದ 6,832.48 ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಅದಿರು ಲಭ್ಯವಿತ್ತು.
ಆದರೆ, ಇದು ಕೆಲವೇ ಆಯ್ದ ವ್ಯಕ್ತಿಗಳ ಪಾಲಾಯಿತು. ಅರ್ಜಿದಾರರ ವೃತ್ತಿಪರ, ತಾಂತ್ರಿಕ ಅಥವಾ ಔದ್ಯಮಿಕ ಅನುಭವವನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ವೈಯಕ್ತಿಕವಾಗಿ ಕೆಲವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಈ ಪ್ರಕ್ರಿಯೆ ನಡೆದಿದೆ~ ಎಂಬ ಲೋಕಾಯುಕ್ತರ ಅಭಿಪ್ರಾಯವನ್ನು ಉತ್ತರದಲ್ಲಿ ನೀಡಲಾಗಿದೆ.
`ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ನಡೆಸಿ ಸಂಗ್ರಹಿಸಿದ ಅದಿರನ್ನು ಮಾರಾಟ ಮಾಡಲು ಧರ್ಮಸಿಂಗ್ ಕಾನೂನುಬಾಹಿರವಾಗಿ ಅನುಮತಿ ನೀಡಿದ್ದರು ಎಂಬ ಆರೋಪ ಲೋಕಾಯುಕ್ತ ವರದಿಯಲ್ಲಿದೆ. ಅವರಿಂದ 23 ಕೋಟಿ ರೂಪಾಯಿ ನಷ್ಟ ವಸೂಲಿ ಮಾಡಲು ಲೋಕಾಯುಕ್ತರು ಶಿಫಾರಸು ಮಾಡಿದ್ದರು. ಆದರೆ, ಹಿಂದಿನ ರಾಜ್ಯಪಾಲರು ಲೋಕಾಯುಕ್ತರ ಶಿಫಾರಸನ್ನು ತಿರಸ್ಕರಿಸಿದ್ದರು~ ಎಂದು ಧರ್ಮಸಿಂಗ್ ವಿರುದ್ಧದ ಆರೋಪಗಳ ಕುರಿತು ಸರ್ಕಾರ ವಿವರಣೆ ನೀಡಿದೆ.
`ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಮತ್ತು ಜಂತಕಲ್ ಮೈನಿಂಗ್ ಕಂಪೆನಿಗೆ ಅಕ್ರಮವಾಗಿ ಗಣಿ ಗುತ್ತಿಗೆಗೆ ಶಿಫಾರಸು ಮಾಡಿದ ಆರೋಪ ಕುಮಾರಸ್ವಾಮಿ ಮೇಲಿದೆ. ಈ ಪ್ರಕರಣದಲ್ಲಿ ಹಲವು ಗಂಭೀರ ಸ್ವರೂಪದ ಅಕ್ರಮಗಳು ನಡೆದಿರುವುದನ್ನು ಲೋಕಾಯುಕ್ತರು ಪತ್ತೆ ಮಾಡಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಯಾವುದೇ ಹುದ್ದೆಯಲ್ಲಿ ಇಲ್ಲದ ಕಾರಣದಿಂದ ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳುವ ತೀರ್ಮಾನವನ್ನು ಸರ್ಕಾರದ ವಿವೇಚನೆಗೆ ಬಿಟ್ಟಿದ್ದರು~ ಎಂದು ಸರ್ಕಾರ ಪ್ರತಿಕ್ರಿಯಿಸಿದೆ.
ಮೈಸೂರು ಮಿನರಲ್ಸ್ ಲಿಮಿಟೆಡ್ನಲ್ಲಿ ಕೃಷ್ಣ, ಧರ್ಮಸಿಂಗ್ ಮತ್ತು ಕುಮಾರಸ್ವಾಮಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತ ವಿವರವನ್ನೂ ಸಿಇಸಿಗೆ ನೀಡಲಾಗಿದೆ. ಮೂವರ ಅವಧಿಯಲ್ಲಿ ಗಣಿ ಗುತ್ತಿಗೆ ನೀಡುವಂತೆ ಮಾಡಲಾದ ಶಿಫಾರಸುಗಳು, ನೀಡಿದ ಗುತ್ತಿಗೆಗಳು ಮತ್ತಿತರ ಮಾಹಿತಿಯನ್ನೂ ಸಲ್ಲಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.