ಹೈದರಾಬಾದ್: ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಸಹೋದರರ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿ ನಡೆಸಿದೆ ಎನ್ನಲಾದ ಕಬ್ಬಿಣದ ಅದಿರು ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಆಂಧ್ರ ಪ್ರದೇಶ ಹೈಕೋರ್ಟ್ ಅನುಮತಿ ನೀಡಿದೆ.
ಹಗರಣದ ತನಿಖೆಯನ್ನು ಸಿಬಿಐ ನಡೆಸುವುದರ ವಿರುದ್ಧ ಈ ಹಿಂದೆ ಏಕ ಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆಯನ್ನು ಮುಖ್ಯ ನ್ಯಾಯಮೂರ್ತಿ ನಿಸಾರ್ ಅಹ್ಮದ್ ಕಕ್ರು ಮತ್ತು ನ್ಯಾಯಮೂರ್ತಿ ವಿಲಾಸ್ ವಿ. ಅಫ್ಜಲ್‌ಪುರ್‌ಕರ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ರದ್ದು ಪಡಿಸಿದ್ದಲ್ಲದೇ, ಸಿಬಿಐ ತನಿಖೆ ಮುಂದುವರೆಸಲು ಅವಕಾಶ ಕಲ್ಪಿಸಿತು.
ಈಗ ಸಿಬಿಐ ಅಕ್ರಮ ಗಣಿಗಾರಿಕೆ ಮಾತ್ರವಲ್ಲದೇ, ಒಬಳಾಪುರಂ ಮೈನಿಂಗ್ ಕಂಪೆನಿ ಆಗಿನ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಪ್ರೋತ್ಸಾಹದೊಂದಿಗೆ ಕಡಪ ಸಂಸದ ವೈ.ಎಸ್.ಜಗಮೋಹನ್ ರೆಡ್ಡಿ ಅವರನ್ನು ವ್ಯವಹಾರ ಜತೆಗಾರರನ್ನಾಗಿ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ವಂಚಿಸಿರುವ ಸುಮಾರು 3,200 ಕೋಟಿ ಮೊತ್ತದ ರಾಜಸ್ವ, ರಸ್ತೆ ತೆರಿಗೆ ಮತ್ತು ಇತರ ಕಂದಾಯದ ಬಗ್ಗೆಯೂ ತನಿಖೆ ನಡೆಸಬಹುದಾಗಿದೆ.
ಉನ್ನತಾಧಿಕಾರ ಸಮಿತಿ ಸ್ಥಳ ಪರಿಶೀಲನೆ: ಈ ನಡುವೆ ಸುಪ್ರೀಂ ಹೈಕೋರ್ಟ್ ನೇಮಕ ಮಾಡಿದ್ದ ಉನ್ನತಾಧಿಕಾರ ಸಮಿತಿ ಡಿ.21ರಂದು ಸ್ಥಳಕ್ಕೆ ಭೇಟಿ ನೀಡಿ ಒಬಳಾಪುರ ಮೈನಿಂಗ್ ಕಂಪೆನಿ ಮತ್ತು ಇತರ ಐದು ಗಣಿಗಾರಿಕೆ ಕಂಪೆನಿಗಳು ಈ ಪ್ರದೇಶದಲ್ಲಿ ನಡೆಸುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಿದೆ. ಈ ಕಂಪೆನಿಗಳು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿವೆಯೇ ಎನ್ನುವ ಕುರಿತೂ ಸಮಿತಿ ಪರಿಶೀಲನೆ ನಡೆಸುವುದು.
ಆಂಧ್ರ ಪ್ರದೇಶ ಮತ್ತು ಕರ್ನಾಟಕ ಗಡಿಯ ಅನಂತಪುರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಒಎಂಸಿ, ಎಎಂಸಿ, ಬಿಐಒಪಿ ಮತ್ತು ಇತರ ಮೂರು ಗಣಿ ಕಂಪನಿಗಳು ನಡೆಸುತ್ತಿರುವ ಅಕ್ರಮ ಗಣಿಗಾರಿಕೆ ಸಂಬಂಧ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ತನಿಖೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಸಿಬಿಐ ಬುಧವಾರ ನ್ಯಾಯಪೀಠವನ್ನು ಕೋರಿತ್ತು.
ಸಿಬಿಐ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿವೇಕ್ ತಂಕಾ, ಒಎಂಸಿ ಎಲ್ಲೆಡೆ ಅಕ್ರಮ ಗಣಿಗಾರಿಕೆ ನಡೆಸಿದೆ. ಅದರಿಂದ ಬಂದ ಅದಿರನ್ನು ತನ್ನದೇ ಒಡೆತನದ ಅಂತರ ಗಂಗಮ್ಮ ಕೊಂಡ (ಎಜಿಕೆ) ಕಂಪೆನಿ ಬೋಗ್ಯ ಪಡೆದ ಪ್ರದೇಶದಲ್ಲಿ ತೆಗೆದಿರುವ ಅದಿರು ಎಂದು ತೋರಿಸುತ್ತಿದೆ ಎನ್ನುವ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಎಜಿಕೆ ಕಂಪನಿಯನ್ನು ಮುಂದಿಟ್ಟುಕೊಂಡು ಒಎಂಸಿ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿದರು.
ಅಧಿಕಾರಿಗಳು ಶಾಮೀಲು: ಒಎಂಸಿ ನಡೆಸುತ್ತಿರುವ ಈ ಅಕ್ರಮ ಗಣಿಗಾರಿಕೆಗೆ ಆಂಧ್ರ ಪ್ರದೇಶದ ಅರಣ್ಯ, ಸಾರಿಗೆ ಮತ್ತು ಕೈಗಾರಿಕಾ ಇಲಾಖೆಗಳ ಅನೇಕ ಅಧಿಕಾರಿಗಳು ಕೈಜೋಡಿಸಿದ್ದಾರೆ ಎನ್ನುವ ಗಂಭೀರ ಆರೋಪವನ್ನೂ ಮಾಡಿ, ಸಾರಿಗೆ ಅಧಿಕಾರಿಗಳು ಯಾವುದೇ ನಿಯಮಗಳನ್ನೂ ಪಾಲಿಸದೇ ಪರವಾನಗಿ ನೀಡಿದ್ದಾರೆ ಎಂದ ಅವರು, ಕಡಪದ ಬ್ರಹ್ಮಿಣಿ ಸ್ಟೀಲ್ಸ್‌ಗೆ ಕಬ್ಬಿಣದ ಅದಿರನ್ನು ಎಜಿಕೆ ಕಂಪನಿಯೇ ಪೂರೈಕೆ ಮಾಡುತ್ತಿದೆ ಎಂದೂ ಮಾಹಿತಿ ನೀಡಲಾಗುತ್ತಿದೆ ಎಂದರು.
ಸಾಕಷ್ಟು ಸಾಕ್ಷ್ಯಾಧಾರ-ಸಿಬಿಐ: ಸಚಿವ ಜನಾರ್ದನ ರೆಡ್ಡಿ ಒಡೆತನದ ಒಎಂಸಿ ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಸಿಬಿಐ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳು ಇವೆ ಎಂದೂ ವಿವೇಕ್ ಹೇಳಿದರು. ಗಡಿ ಸಮಸ್ಯೆಯನ್ನು ಮುಂದಿಟ್ಟುಕೊಂಡು ಒಎಂಸಿ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಪರವಾನಗಿ ಇಲ್ಲದ ಪ್ರದೇಶದಲ್ಲಿಯೂ ಒಎಂಸಿ ಗಣಿಗಾರಿಕೆ ನಡೆಸಿದೆ ಎಂದು ಹೇಳಿದ ಹಿರಿಯ ಸಿಬಿಐ ಅಧಿಕಾರಿ, ಅದಕ್ಕೆ ನ್ಯಾಯಾಲಯ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.
ಸಿಬಿಐ ಅಧಿಕಾರಿಗಳ ಪ್ರಕಾರ ಒಎಂಸಿ 29.32 ಲಕ್ಷ ಮೆಟ್ರಿಕ್ ಟನ್ ಅದಿರನ್ನು ರವಾನೆ ಮಾಡಿದ್ದು, ಇದನ್ನು ಎಜಿಕೆ ಪ್ರದೇಶದಿಂದ ತೆಗೆದಿರುವುದು ಎಂದು ವಾದಿಸುತ್ತಿದೆ.ಸುಪ್ರೀಂ ಕೋರ್ಟ್ ರಚಿಸಿದ ಉನ್ನತಾಧಿಕಾರ ಸಮಿತಿ ಪತ್ತೆ ಮಾಡಿದ ಅಂಶಗಳ ಆಧಾರದ ಮೇಲೆ ಒಎಂಸಿ ಅಕ್ರಮ ಗಣಿಗಾರಿಕೆ ತನಿಖೆಗೆ ಸಂಬಂಧಿಸಿದಂತೆ 2010 ಆಂಧ್ರ ಪ್ರದೇಶ ಸರ್ಕಾರ ಗಣಿಗಾರಿಕೆ ಸ್ಥಗಿತಕ್ಕೆ ನ್ಯಾಯಾಲಯದಿಂದ ಅನುಮತಿ ಪಡೆದಿತ್ತು. ಆದರೆ ಅದಕ್ಕೆ ಹೈಕೋರ್ಟಿನ ನ್ಯಾಯಮೂರ್ತಿ ಎಲ್.ನರಸಿಂಹ ಅವರ ನೇತೃತ್ವದ ಏಕ ಸದಸ್ಯ ಪೀಠ ತಡೆಯಾಜ್ಞೆ ನೀಡಿತ್ತು.
ಸುಪ್ರೀಂ ಕೋರ್ಟಿನ ಸೂಚನೆಯ ಹೊರತಾಗಿಯೂ ಸಿಬಿಐ ತನಿಖೆಗೆ ಏಕ ಸದಸ್ಯ ಪೀಠ ನೀಡಿರುವ ತಡೆಯಾಜ್ಞೆ ಮತ್ತು ಒಎಂಸಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ಹೊರತಾಗಿ ಗಡಿ ಸಮಸ್ಯೆಯ ಬಗ್ಗೆ ಸುಪ್ರೀಂ ಕೋರ್ಟ್ ಗಮನಿಸುತ್ತಿದೆ ಎನ್ನುವ ಅಂಶವನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ವಿವೇಕ್ ತಂಟಾ ಹೈಕೋರ್ಟ್ ಗಮನಕ್ಕೆ ತಂದರು. ಅಪರಾಧ ಸಂಚು, ವಂಚನೆ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದು ಮತ್ತು ಸಾರ್ವಜನಿಕ ಸಂಪತ್ತನ್ನು ಅಕ್ರಮವಾಗಿ ಹೊರತೆಗೆದಿರುವ ಬಗ್ಗೆ ನ್ಯಾಯಾಲಯ ಗಮನ ಹರಿಸುವಂತೆ ಕೇಳಿಕೊಂಡರು.
ಒಎಂಸಿ ಪರವಾಗಿ ಹಾಜರಿದ್ದ ವಕೀಲ ಮುಕುಲ್ ರೋಹಟಗಿ, ಈ ಹಿಂದೆ ಹೈಕೋರ್ಟ್ ಒಎಂಸಿ ಪರವಾದ ನಿಲುವು ತಳೆದಿದೆ. ಅಲ್ಲದೇ ಸುಪ್ರೀಂ ಕೋರ್ಟ್ ಸಹ ಒಎಂಸಿ ಗಣಿಗಾರಿಕೆ ಸ್ಥಗಿತಕ್ಕೆ ಅವಕಾಶ ನೀಡಿಲ್ಲ. ಜತೆಗೆ ಸುಪ್ರೀಂ ಕೋರ್ಟಿನಲ್ಲಿಯೂ ಈ ವಿಷಯ ಇದ್ದು, ಇಡೀ ಪ್ರಕರಣದ ಬಗ್ಗೆ ಸಮಗ್ರವಾಗಿ ನೋಡುತ್ತಿದೆ. ಇಲ್ಲಿ ಗಡಿ ಸಮಸ್ಯೆ ಪ್ರಮುಖವಾಗಿದೆ. ಹಾಗಾಗಿ ಅಕ್ರಮ ಗಣಿಗಾರಿಕೆ ವಿಷಯವನ್ನು ಪ್ರಸ್ತಾಪ ಮಾಡುವುದು ಸರಿಯಲ್ಲ ಎಂದು ವಾದಿಸಿದರು.
ತಪ್ಪು, ಅಕ್ರಮಗಳು ನಡೆಯುವ ಸಂದರ್ಭದಲ್ಲಿ ತನಿಖೆ ನಡೆಸಲು ರಾಜ್ಯ ಸರ್ಕಾರದ ಮೇಲೆ ಯಾವುದೇ ನಿರ್ಬಂಧ ಇಲ್ಲ. ಹಾಗಾಗಿ ಎಂಎಂಆರ್ ಕಾಯಿದೆ ಸೆಕ್ಷನ್ 21 (6) ಅಡಿಯಲ್ಲಿ ನ್ಯಾಯಾಲಯದ ತನಿಖೆಗೆ ಅವಕಾಶ ಕಲ್ಪಿಸಬಹುದು ಎಂದು ಅಡ್ವೋಕೆಟ್ ಜನರಲ್ ಸೀತಾರಾಮ ಮೂರ್ತಿ ಪೀಠಕ್ಕೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.