ಗುರುವಾರ , ಜೂನ್ 17, 2021
22 °C

ಅಕ್ರಮ ಗಣಿಗಾರಿಕೆ ರಕ್ಷಣೆಗೆ ಖಾಸಗಿ ಭದ್ರತಾ ಪಡೆ!

ಪ್ರಜಾವಾಣಿ ವಾರ್ತೆ ವಿ.ಎಸ್.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ~ (ಎಎಂಸಿ) ಹೆಸರಿನಲ್ಲಿ ಬಳ್ಳಾರಿ ಜಿಲ್ಲೆಯ ಅನೇಕ ಕಡೆಗಳಿಂದ ಅಕ್ರಮವಾಗಿ ಅದಿರು ಸಾಗಿಸುತ್ತಿದ್ದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ, ಅದಿರು ಸಾಗಣೆಗೆ ರಕ್ಷಣೆ ಒದಗಿಸಲು ಖಾಸಗಿ ಭದ್ರತಾ ಪಡೆಯೊಂದನ್ನು ನಿಯೋಜಿಸಿಕೊಂಡಿದ್ದರು!ಇಂತಹದ್ದೊಂದು ಅಚ್ಚರಿಯ ಸಂಗತಿ ಸಿಬಿಐ ತನಿಖೆಯ ವೇಳೆ ಪತ್ತೆಯಾಗಿದೆ. ಖಾಸಗಿ ಭದ್ರತಾ ಪಡೆಗೆ ಸ್ವಂತ ಚೆಕ್ ಮೂಲಕವೇ ಹಣ ಪಾವತಿಸಿರುವ ಕುರಿತ ಅಧಿಕೃತ ದಾಖಲೆಗಳನ್ನು ರೆಡ್ಡಿ ಮುಂದಿಟ್ಟಿರುವ ಸಿಬಿಐ ಅಧಿಕಾರಿಗಳು, ಈ ಬಗ್ಗೆ ಅವರಿಂದ ಭಾನುವಾರ ಉತ್ತರ ಪಡೆದಿದ್ದಾರೆ.ಮೂರು ದಿನಗಳಿಂದ ಸಿಬಿಐ ವಶದಲ್ಲಿರುವ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ತನಿಖಾ ತಂಡ ನಿರಂತರವಾಗಿ ಪ್ರಶ್ನಿಸುತ್ತಿದೆ. ಐದು ತಿಂಗಳ ಕಾಲ ಸಂಗ್ರಹಿಸಿರುವ ದಾಖಲೆಗಳು, ಸಾಕ್ಷ್ಯಗಳನ್ನು ಒಂದೊಂದಾಗಿ ಆರೋಪಿಯ ಮುಂದಿಡುತ್ತಿದ್ದು, ಅವುಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲಾಗುತ್ತಿದೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖಾ ವರದಿ, ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ವಿಚಾರಣಾ ವರದಿಗಳಲ್ಲಿ ಪ್ರಸ್ತಾಪವಾಗಿರುವ ವಿಷಯಗಳ ಬಗ್ಗೆಯೂ ಪ್ರಶ್ನಿಸಲಾಗಿದೆ.

ಜೈಲಿನಲ್ಲಿ ಅಲಿಖಾನ್!

ಐದು ತಿಂಗಳಿನಿಂದ ತಲೆಮರೆಸಿಕೊಂಡಿದ್ದು, ಶುಕ್ರವಾರ ನ್ಯಾಯಾಲಯದ ಎದುರು ಶರಣಾದ ಮೆಹಫೂಜ್ ಅಲಿಖಾನ್ ಸಿಬಿಐ ವಶದಲ್ಲಿಲ್ಲ. ಆತ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾನೆ.ಜನಾರ್ದನ ರೆಡ್ಡಿಯ ಸಮಸ್ತ ವ್ಯವಹಾರಗಳನ್ನೂ ಬಲ್ಲ ನಂಬುಗೆಯ ಬಂಟನಾಗಿದ್ದ ಅಲಿಖಾನ್‌ನ ಶರಣಾಗತಿ ಸಿಬಿಐ ಅಧಿಕಾರಿಗಳಿಗೆ ಸಂತಸ ಉಂಟುಮಾಡಿತ್ತು.

ಆದರೆ, ಆತನ ಶರಣಾಗತಿಯ ಮಾಹಿತಿ ಮೊದಲೇ ತಿಳಿಯದಿದ್ದುದು ಮತ್ತು ಕೆಲವು ವಕೀಲರು ಸೃಷ್ಟಿಸಿದ ಗಲಭೆಯಿಂದ ನ್ಯಾಯಾಲಯದ ಕಲಾಪ ನಡೆಯದೇ ಇರುವುದರಿಂದ ಈವರೆಗೂ ಆತನನ್ನು ವಶಕ್ಕೆ ಪಡೆಯಲು ಸಿಬಿಐಗೆ ಸಾಧ್ಯವಾಗಿಲ್ಲ.ಶುಕ್ರವಾರ ಅತ್ಯಂತ ರಹಸ್ಯವಾಗಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಬಂದಿದ್ದ ಅಲಿಖಾನ್, ನ್ಯಾಯಾಧೀಶ ಬಿ.ಎಂ.ಅಂಗಡಿ ಅವರ ಎದುರು ಶರಣಾದ.ಆದರೆ, ಈ ವಿಷಯ ಗೊತ್ತಿರದ ಕಾರಣದಿಂದ ಆತನನ್ನು ತಮ್ಮ ವಶಕ್ಕೆ ನೀಡುವಂತೆ ತಕ್ಷಣವೇ ಅರ್ಜಿ ಸಲ್ಲಿಸಲು ಸಿಬಿಐಗೆ ಸಾಧ್ಯವಾಗಿರಲಿಲ್ಲ. ಮಾರ್ಚ್ 12ರವರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು. ಬಳಿಕ ಜನಾರ್ದನ ರೆಡ್ಡಿ ಅವರನ್ನು ಮಾ.12ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಲಾಗಿತ್ತು.ಇಬ್ಬರೂ ಆರೋಪಿಗಳ ವೈದ್ಯಕೀಯ ಪರೀಕ್ಷೆಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ನಂತರ ರೆಡ್ಡಿ ಅವರನ್ನು ಗಂಗಾನಗರದ ಸಿಬಿಐ ಕಚೇರಿಗೆ ಕರೆತಂದರೆ, ಅಲಿಖಾನ್‌ನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲಾಗಿದೆ. ಆದರೆ, ಇಬ್ಬರೂ ಸಿಬಿಐ ವಶದಲ್ಲಿದ್ದಾರೆ ಎಂಬ ಸುದ್ದಿ ಶುಕ್ರವಾರದಿಂದ ಈವರೆಗೂ ಪ್ರಸಾರವಾಗುತ್ತಲೇ ಇದೆ.ಅಲಿಖಾನ್‌ನನ್ನು ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಶುಕ್ರವಾರ ವಕೀಲರು, ಮಾಧ್ಯಮಗಳು ಮತ್ತು ಪೊಲೀಸರ ನಡುವಿನ ಘರ್ಷಣೆ ನಡೆದ ಪರಿಣಾಮವಾಗಿ ಶನಿವಾರ ನ್ಯಾಯಾಲಯದ ಕಲಾಪ ನಡೆದಿಲ್ಲ.ಹೀಗಾಗಿ ಆತನನ್ನು ವಶಕ್ಕೆ ಪಡೆಯುವ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಅಲಿಖಾನ್ ಕಾರಾಗೃಹದಲ್ಲಿರುವುದನ್ನು ಖಚಿತಪಡಿಸಿರುವ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಗಣಿಯಿಂದ ಬಂದರಿನವರೆಗೆ: ಅಕ್ರಮ ಗಣಿಗಾರಿಕೆ ಮೂಲಕ ಸಂಗ್ರಹಿಸಿದ ಅದಿರನ್ನು ಸಕ್ರಮಗೊಳಿಸುವುದಕ್ಕಾಗಿಯೇ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಯನ್ನು ಖರೀದಿಸಿದ್ದ ರೆಡ್ಡಿ ಕುಟುಂಬ, ಅದನ್ನು `ಬಳ್ಳಾರಿ ಸಾಮ್ರಾಜ್ಯ~ದ ವಿಸ್ತರಣೆಗೆ ಪೂರ್ಣವಾಗಿ ಬಳಸಿಕೊಂಡಿತ್ತು.

ಬೇರೊಬ್ಬರ ಗಣಿ ಅಥವಾ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ತೆಗೆದ ಅದಿರು, `ಸ್ಟಾಕ್‌ಯಾರ್ಡ್~ಗಳನ್ನು ತಲುಪಿ, ಅಲ್ಲಿಂದ ಬಂದರು ಸೇರುವವರೆಗೂ ಅಕ್ರಮ ಸಾಗಣೆಗೆ ರಕ್ಷಣೆ ಒದಗಿಸಲು ಪರ್ಯಾಯ ಭದ್ರತಾ ವ್ಯವಸ್ಥೆಯೊಂದನ್ನು ರೂಪಿಸಲಾಗಿತ್ತು ಎಂಬ ಸಂಗತಿಯನ್ನು ಸಿಬಿಐ ಪತ್ತೆಮಾಡಿದೆ.ಎಎಂಸಿ ನಡೆಸಿದ ಅಕ್ರಮ ಅದಿರು ಸಾಗಣೆಯಲ್ಲಿ ನೆರವಾದ ಖಾಸಗಿ ಭದ್ರತಾ ಸಂಸ್ಥೆಗೆ ರೆಡ್ಡಿ ದೊಡ್ಡ ಮೊತ್ತದ ಸಂಭಾವನೆ ನೀಡುತ್ತಿದ್ದರು. ರೆಡ್ಡಿ ಅವರ ಬ್ಯಾಂಕ್ ಖಾತೆಯಿಂದಲೇ ಹಲವು ಬಾರಿ ಈ ಸಂಸ್ಥೆಗೆ ಹಣ ಜಮಾ ಆಗಿದೆ. ಬಳ್ಳಾರಿಯ ಗಣಿಗಳಿಂದ ಆಂಧ್ರಪ್ರದೇಶದ ಕೃಷ್ಣಪಟ್ಟಣ, ರಾಜ್ಯದ ಕಾರವಾರ, ಬೇಲೆಕೇರಿ, ನವ ಮಂಗಳೂರು ಮತ್ತಿತರ ಬಂದರುಗಳವರೆಗೂ ಅದಿರು ಸಾಗಣೆಗೆ ಈ ಖಾಸಗಿ ಸಂಸ್ಥೆ ರಕ್ಷಣೆ ಒದಗಿಸುತ್ತಿತ್ತು ಎಂಬುದು ದಾಖಲೆಗಳಿಂದ ದೃಢಪಟ್ಟಿದೆ.ಮೂಲಗಳ ಪ್ರಕಾರ, ಅದಿರು ಸಾಗಣೆಗೆ ಖಾಸಗಿ ಭದ್ರತೆ ಪಡೆಯುತ್ತಿದ್ದ ವಿಷಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐ ಡಿಐಜಿ ಆರ್.ಹಿತೇಂದ್ರ ನೇತೃತ್ವದ ತನಿಖಾ ತಂಡ ಭಾನುವಾರ ಜನಾರ್ದನ ರೆಡ್ಡಿ ಅವರ ಮುಂದಿಟ್ಟಿದೆ. ತಾವೇ ನೀಡಿದ ಚೆಕ್ ಮತ್ತಿತರ ದಾಖಲೆಗಳನ್ನು ನೋಡಿದ ರೆಡ್ಡಿ, ಕೆಲಕಾಲ ಮೌನಕ್ಕೆ ಶರಣಾದರು. ನಂತರ ಅದು ತಮ್ಮದೇ ಚೆಕ್ ಎಂಬುದನ್ನು ಒಪ್ಪಿಕೊಂಡಿದ್ದಾರೆ.ಸಿಬಿಐ ಅಧಿಕಾರಿಗಳು ನಿರಂತರವಾಗಿ ರೆಡ್ಡಿ ಅವರ ವಿಚಾರಣೆ ನಡೆಸುತ್ತಿದ್ದಾರೆ. ಆಗಾಗ ವಿಶ್ರಾಂತಿ ನೀಡಿ, ಮತ್ತೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಸಾಕಷ್ಟು ಪ್ರಶ್ನೆಗಳಿಗೆ ರೆಡ್ಡಿ ಉತ್ತರ ನೀಡಿದ್ದಾರೆ. ಕೆಲವು ಪ್ರಶ್ನೆಗಳನ್ನು ಕೇಳಿದಾಗ, `ಆ ಬಗ್ಗೆ ನನಗೇನೂ ಗೊತ್ತಿಲ್ಲ~ ಎಂಬ ಉತ್ತರ ನೀಡುತ್ತಿದ್ದಾರೆ. ದಾಖಲೆಗಳ ಆಧಾರದಲ್ಲೇ ಪ್ರಶ್ನೆಗಳನ್ನು ಕೇಳುತ್ತಿರುವುದರಿಂದ ತಪ್ಪಿಸಿಕೊಳ್ಳಲು ಹೆಚ್ಚಿನ ಅವಕಾಶ ಸಿಗುತ್ತಿಲ್ಲ ಎನ್ನುತ್ತವೆ ಮೂಲಗಳು.ಸಹಚರರ ವಿಚಾರಣೆ: ಅಕ್ರಮ ಗಣಿಗಾರಿಕೆಯಲ್ಲಿ ಷಾಮೀಲಾಗಿದ್ದವರು, ಹಣದ ಅಕ್ರಮ ವರ್ಗಾವಣೆಯಲ್ಲಿ ಸಹಕಾರ ನೀಡಿರುವವರು, ಅಕ್ರಮ ಗಣಿಗಾರಿಕೆಯಿಂದ ಬಂದ ಹಣವನ್ನು ಸ್ಥಿರಾಸ್ತಿಗಳ ಮೇಲೆ ವಿನಿಯೋಗಿಸಲು ಸಹಕರಿಸಿದವರು ಸೇರಿದಂತೆ ಜನಾರ್ದನ ರೆಡ್ಡಿ ಅವರ ನಿಕಟವರ್ತಿಗಳಾಗಿದ್ದ ಹಲವರನ್ನು ಗಂಗಾನಗರದ ಕಚೇರಿಗೆ ಕರೆಸಿಕೊಂಡಿರುವ ಸಿಬಿಐ ಅಧಿಕಾರಿಗಳು, ವಿಚಾರಣೆಗೆ ಒಳಪಡಿಸಿದ್ದಾರೆ. ಕೆಲವರನ್ನು ರೆಡ್ಡಿ ಎದುರೇ ಕರೆದೊಯ್ದು ಪ್ರಶ್ನಿಸಲಾಗಿದೆ ಎಂದು ತಿಳಿದುಬಂದಿದೆ. ಎಎಂಸಿ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಅವರನ್ನು ಈವರೆಗೂ ವಿಚಾರಣೆಗೆ ಗುರಿಪಡಿಸಿಲ್ಲ. ರೆಡ್ಡಿ ಅವರನ್ನು ಬಳ್ಳಾರಿಗೆ ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿದ ಬಳಿಕವೇ ವಿಚಾರಣೆಗೆ ಬರುವಂತೆ ಅವರ ಪತ್ನಿಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.