ಅಕ್ರಮ ಗಣಿಗಾರಿಕೆ: ರೂ 871 ಕೋಟಿ ವಸೂಲಿಗೆ ಆಗ್ರಹ

7

ಅಕ್ರಮ ಗಣಿಗಾರಿಕೆ: ರೂ 871 ಕೋಟಿ ವಸೂಲಿಗೆ ಆಗ್ರಹ

Published:
Updated:

ಹುಬ್ಬಳ್ಳಿ:`ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ರೂ 871.35 ಕೋಟಿ  ನಷ್ಟವನ್ನು ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್ ಮತ್ತು ಇತರ ಆರೋಪಿಗಳಿಂದ ವಸೂಲು ಮಾಡಬೇಕು. ತಪ್ಪಿತಸ್ಥರ ವಿರುದ್ಧ  ಕ್ರಮ ಕೈಗೊಳ್ಳಬೇಕು' ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್. ಹಿರೇಮಠ ಸೋಮವಾರ ಆಗ್ರಹಿಸಿದರು.

`ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ ಸಿಬಿಐ, ಈಗಾಗಲೇ ಕೋರ್ಟಿಗೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಇದರಿಂದ ಆರೋಪಿಗಳು ಎಸಗಿರುವ ಅವ್ಯವಹಾರ ಬಹಿರಂಗವಾಗಿದೆ. ಹೀಗಾಗಿ ಆರೋಪಿಗಳಿಂದ ಹಣ ವಸೂಲು ಮಾಡುವಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಪತ್ರ ಬರೆಯಲಾಗಿದೆ' ಎಂದು ಹೇಳಿದರು.

`ಯಡಿಯೂರಪ್ಪ ಸೇರಿದಂತೆ ಅವ್ಯವಹಾರದಲ್ಲಿ ಭಾಗಿಯಾದ ಎಲ್ಲ ರಾಜಕಾರಣಿಗಳನ್ನು 6 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಬೇಕು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗುವುದು' ಎಂದರು.

`ಪ್ರಕರಣದ ಇತರೆ ಆರೋಪಿಗಳಾದ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಮತ್ತು ಅಳಿಯ ಸೋಹನ್‌ಕುಮಾರ್ ಮಹತ್ವದ ದಾಖಲೆಗಳನ್ನು ಫೋರ್ಜರಿ ಮಾಡಿ ತಪ್ಪು ಮಾಡಿದ್ದಾರೆ. ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸಿನಂತೆ ತನಿಖೆ ನಡೆಸಿದ ಸಿಬಿಐ, ದೂರುದಾರರ ಆರೋಪಗಳನ್ನು ಎತ್ತಿ ಹಿಡಿದಿರುವುದು ಸ್ವಾಗತಾರ್ಹ' ಎಂದರು. `ಆರೋಪಿಗಳು ಗಳಿಸಿದ ಅಕ್ರಮ ಹಣ ಚುನಾವಣೆಗೆ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ' ಎಂದೂ ಕಳವಳ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry